ಬೆಂಗಳೂರು: ಬಯಸದೇ ಬಂದ ಭ್ಯಾಗ್ಯ ಎಂಬಂತೆ ಗೌತಮ್ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ. ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಸರ್ಕಾರ ನೀಡಿರುವ ಗೃಹಲಕ್ಷ್ಮಿ ಯೋಜನೆ ಮೂಲಕ ತಿಂಗಳಿಗೆ 2 ಸಾವಿರ ಬರುತ್ತಿದೆಯೇ ಎಂದು ಕೇಳಿದಾಗ ಬರುತ್ತಿದೆ ಎಂದರು. ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದೀರಾ ಎಂದು ಕೇಳಿದೆ ಓಡಾಡುತ್ತಿದ್ದೇವೆ ಎಂದರು. ಅಕ್ಕಿ ಬರುತ್ತಿದೆಯೇ ಎಂದು ಕೇಳಿದೆ ಬರುತ್ತಿದೆ ಎಂದರು. ಕರೆಂಟ್ ಬಿಲ್ ಶೂನ್ಯ ಬರುತ್ತಿದೆಯೇ ಎಂದು ಕೇಳಿದೆ ಹೌದು ಎಂದರು. ಇದು ಸಿದ್ದರಾಮಯ್ಯ ಅವರು ಹಾಗೂ ಡಿ.ಕೆ. ಶಿವಕುಮಾರ್ ಅವರು ಸಹಿ ಹಾಕಿದ ಗ್ಯಾರಂಟಿ ಚೆಕ್ ನ ಯೋಜನೆಗಳು.
ಈಗ ನಡೆಯುತ್ತಿರುವುದು ಲೋಕಸಭೆ ಚುನಾವಣೆ. ನಿನ್ನೆ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ಕೂಡ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದರೆ 5 ನ್ಯಾಯ ಯೋಜನೆಗಳ ಮೂಲಕ 25 ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿ, ಗ್ಯಾರಂಟಿ ಚೆಕ್ ಗೆ ಸಹಿ ಹಾಕಿದ್ದಾರೆ. ಗೃಹಲಕ್ಷ್ಮಿ ಮಾದರಿಯಲ್ಲಿ ಮಹಾಲಕ್ಷ್ಮಿ ಯೋಜನೆ ಮೂಲಕ ವರ್ಷಕ್ಕೆ 1 ಲಕ್ಷ ಹಣವನ್ನು ಬಡ ಕುಟುಂಬದ ಮಹಿಳೆಯೊಬ್ಬಳಿಗೆ ನೀಡಲಾಗುವುದು. ಇನ್ನು ಯುವಕರಿಗೆ ವಾರ್ಷಿಕ 1 ಲಕ್ಷ ಶಿಷ್ಯ ವೇತನ ನೀಡಲಾಗುವುದು. ರೈತರಿಗೆ ಸಾಲ ಮನ್ನಾ ಹಾಗೂ ರೈತರ ಬೆಳೆಗೆ ಬೆಂಬಲ ಬೆಲೆ ನಿಗದಿ. ನರೇಗಾ ಕೂಲಿ 400 ರೂ. ನೀಡಲಾಗುವುದು. 25 ಲಕ್ಷವರೆಗಿನ ಆರೋಗ್ಯ ವಿಮೆ ನೀಡಲಾಗುವುದು. ಇದು ಹಸ್ತದ ಗುರುತಿನ ಗ್ಯಾರಂಟಿ ಯೋಜನೆಗಳು.
ಹುಟ್ಟಿದ ಸೂರ್ಯ ಮುಳುಗಿದಂತೆ, ಅರಳಿದ್ದ ಕಮಲ ಬಾಡುತ್ತಿದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಈ ಕೈ ಅಧಿಕಾರಕ್ಕೆ ಬಂದ ಕಾರಣ ಇಂದು ನಿಮಗೆ ಗ್ಯಾರಂಟಿ ಯೋಜನೆಗಳು ಸಿಗುತ್ತಿವೆ. ಐದು ಬೆರಳು ಸೇರಿ ಕೈ ಮುಷ್ಟಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಾಮಾಜಿಕ ನ್ಯಾಯ ನೀಡಲಿದೆ. ಎಲ್ಲಾ ವರ್ಗದವರಿಗೆ ಸಾಮಾಜಿಕ ಭದ್ರತೆ ನೀಡಲಾಗುವುದು.
ಸೋಲಿನ ಭೀತಿಯಿಂದ ಬಿಜೆಪಿಯ ಅರ್ಧದಷ್ಟು ಹಾಲಿ ಸಂಸದರಿಗೆ ಟಿಕೆಟ್ ನೀಡಿಲ್ಲ. ಬಿಜೆಪಿ ದೇಶದಲ್ಲಿ 200ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುವುದಿಲ್ಲ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ನಿಮ್ಮೆಲ್ಲರಿಗೂ ಅನುಕೂಲವಾಗಲಿದೆ.
ಕುರುಡುಮಲೆಯಲ್ಲಿ ವಿನಾಯಕನಿಗೆ ಪೂಜೆ ಮಾಡಿ ರಾಜ್ಯದ ಕಷ್ಟ ನಿವಾರಣೆ ಮಾಡಲು ಪ್ರಾರ್ಥಿಸಿ ಈ ಪ್ರಚಾರ ಆರಂಭಿಸಿದ್ದೇವೆ. ನಾವು ಕಳೆದ ಚುನಾವಣೆಯಲ್ಲಿ ನುಡಿದಂತೆ ನಡೆದಿದ್ದೇವೆ. ಈಗ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ದೇಶಕ್ಕೆ ಶಕ್ತಿ ತುಂಬಲು ಮುಂದಾಗಿದ್ದಾರೆ. ನೀವು ನಮ್ಮೆಲ್ಲರ ಕೈ ಬಲಪಡಿಸಬೇಕು.
ಕೋಲಾರ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಒಮ್ಮೆ ದಳ, ಒಮ್ಮೆ ಬಿಜೆಪಿ ಆಕಸ್ಮಿಕವಾಗಿ ಇಲ್ಲಿ ಗೆದ್ದಿದೆ. ಕೋಲಾರದವರು ಚಿನ್ನದ ಮಕ್ಕಳು. ಹಾಲು, ತರಕಾರಿ, ರೇಷ್ಮೆ ಬೆಳೆಯುತ್ತಿದ್ದಾರೆ. ಈ ಭಾಗದಲ್ಲಿ ಅಂತರ್ಜಲ ಹೆಚ್ಚಿಸಲು ರಮೇಶ್ ಕುಮಾರ್ ಸೇರಿದಂತೆ ಈ ಭಾಗದ ನಾಯಕರು ಹೋರಾಟ ಮಾಡಿದ್ದಾರೆ. ಆಮೂಲಕ ಬೆಂಗಳೂರಿನ ನೀರನ್ನು ಇಲ್ಲಿಗೆ ತಂದು ರೈತರ ಬದುಕು ಹಸನು ಮಾಡಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಪಕ್ಷ ಕಾರಣ.
ಗೌತಮ್ ಬಹಳ ವಿದ್ಯಾವಂತ, ಬುದ್ಧಿವಂತ, ಪ್ರಜ್ಞಾವಂತ. ಈತ ಎಲ್ಲಾ ವರ್ಗದ ಜನರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಲಿದ್ದಾನೆ. ಈತನನ್ನು ನಿಮ್ಮ ಮಗನಂತೆ ಸ್ವೀಕಾರ ಮಾಡಿ ಆಶೀರ್ವಾದ ಮಾಡಬೇಕು.