ಮಂಡ್ಯ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಬಸವ ತತ್ವದ ಆಧಾರದ ಮೇಲೆ ಆಡಳಿತ ನಡೆಸುತ್ತಿದೆ. ಹಾಗಾಗಿ ವೀರಶೈವ- ಲಿಂಗಾಯತ ಸಮುದಾಯ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
ನಗರದ ಕನಕ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಬೆಂಬಲಿತ ವೀರಶೈವ-ಲಿಂಗಾಯತ ಸಮಾಜ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಸಮಾನತೆಯ ಹರಿಕಾರ ಬಸವಣ್ಣನವರ ತತ್ವ ಸಿದ್ಧಾಂತವನ್ನು ಎಂದಿಗೂ ಒಪ್ಪುವುದಿಲ್ಲ; ಅಷ್ಟೇ ಅಲ್ಲದೆ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂಬುದನ್ನೂ ಆ ಪಕ್ಷ ಒಪ್ಪುವುದಿಲ್ಲ. ಆದರೆ, ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರ ಸಂವಿಧಾನ ಮತ್ತು ಬಸವಣ್ಣನವರ ಸಿದ್ಧಾಂತದ ಮೇಲೆ ಹೆಚ್ಚಿನ ನಂಬಿಕೆ ಇಟ್ಟಿದೆ ಎಂದು ವಿವರಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತ ಹಿನ್ನೆಲೆಯಲ್ಲಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಆ ಪಕ್ಷ ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ ಎಂದರು.
ವೀರಶೈವ-ಲಿಂಗಾಯತ ಸಮುದಾಯ ಓಲೈಕೆ ಮಾಡಲು ಈ ತಂತ್ರ ಮಾಡಿರುವ ಬಿಜೆಪಿ ವರಿಷ್ಠರು ವಿಜಯೇಂದ್ರ ಅವರ ಅವಧಿಯನ್ನು ಕೇವಲ 3 ವರ್ಷ ಮಾತ್ರ ನಿಗದಿಗೊಳಿಸಿದ್ದಾರೆ. ಅಂದರೆ, ಮುಂದಿನ ಅಸೆಂಬ್ಲಿ ಚುನಾವಣೆ ಹೊತ್ತಿಗೆ ಅವರು ಆ ಸ್ಥಾನದಲ್ಲಿ ಇರುವುದಿಲ್ಲ. ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಆ ಪಕ್ಷದ ಅಧ್ಯಕ್ಷ ಸ್ಥಾನವು ಲಿಂಗಾಯತ ಸಮುದಾಯದ ಕೈತಪ್ಪಲಿದೆ. ಆದರೆ ಕಾಂಗ್ರೆಸ್ ಪಕ್ಷ ಸಮುದಾಯದ ಹೆಚ್ಚಿನವರನ್ನು ಮುಖ್ಯಮಂತ್ರಿಯಾಗಲು ಅವಕಾಶ ಕಲ್ಪಿಸಿದೆ ಎಂದು ಪಾಟೀಲ ನುಡಿದರು.
ಈ ಹಿಂದೆ 20-20 ತಿಂಗಳ ಅಧಿಕಾರ ಹಂಚಿಕೆ ಸೂತ್ರದಂತೆ ಮುಖ್ಯಮಂತ್ರಿಯಾದ ಎಚ್.ಡಿ.ಕುಮಾರಸ್ವಾಮಿ 20 ತಿಂಗಳು ಆಡಳಿತ ನಡೆಸಿದ ಬಳಿಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಧಿಕಾರ ವಹಿಸಿಕೊಳ್ಳಲು ಬಿಡದೆ ವಂಚಿಸಿದ್ದನ್ನು ವೀರಶೈವ- ಲಿಂಗಾಯತರು ಮರೆತಿಲ್ಲ. ಈ ರೀತಿಯಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿ, ಈಗ ಯಡಿಯೂರಪ್ಪನವರನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವ ಕುಮಾರಸ್ವಾಮಿ ಅವರಿಗೆ ಈ ಬಾರಿ ಮಂಡ್ಯ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.
ಗ್ಯಾರಂಟಿ ಯೋಜನೆಗಳಿಂದ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಮಹಿಳೆಯರಿಗೆ ಹೆಚ್ಚಿನ ಸವಲತ್ತು ದೊರಕಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೇಂದ್ರದಿಂದ ಮಹಿಳೆಯರು, ರೈತರು, ಕಾರ್ಮಿಕರಿಗೆ ಇನ್ನಷ್ಟು ಹೆಚ್ಚು ಲಾಭ ಸಿಗಲಿದೆ. ಈ ನಿಟ್ಟಿನಲ್ಲಿ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡರಿಗೆ ಮತ ನೀಡುವ ಮೂಲಕ ಸಮುದಾಯದ ಜನತೆಯು ಪಕ್ಷಕ್ಕೆ ಬಲ ತುಂಬಬೇಕು ಎಂದರು.
ಮುಂದಿನ ದಿನಗಳಲ್ಲಿ ವೀರಶೈವ- ಲಿಂಗಾಯತ ಸಮುದಾಯದ ಜನತೆಗೆ ರಾಜಕೀಯ ಸ್ಥಾನಮಾನ ದೊರಕಿಸಿಕೊಡಲು ಬದ್ಧವಾಗಿರುವುದಾಗಿಯೂ ತಿಳಿಸಿದರು.
ಈ ಸಮಾವೇಶದ ಆಯೋಜಕರಾದ ವೀರಶೈವ-ಲಿಂಗಾಯತ ಮುಖಂಡರಾದ ಆಲಕೆರೆ ಮಹದೇಶ್, ಪ್ರಫುಲ್ಲಚಂದ್ರ, ವಕೀಲ ಎಂ.ಗುರುಪ್ರಸಾದ್, ಸುಂಡಹಳ್ಳಿ ಸೋಮಶೇಖರ್, ಮಲ್ಲಿಗೆರೆ ಆನಂದ್, ಬೇವುಕಲ್ಲು ಮೋಹನ್, ಸೌದೇನಹಳ್ಳಿ ರಮೇಶ್, ಅಮೃತಿ ರಾಜಶೇಖರ್ ಮತ್ತಿತರರನ್ನು ಸಚಿವ ಎನ್.ಚಲುವರಾಯಸ್ವಾಮಿ ಅಭಿನಂದಿಸಿದರು.
ಬಳಿಕ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ ಅವರು, ಮಂಡ್ಯ ಜಿಲ್ಲೆಯ ಜನರು ಮರೆಯದಿರುವಂತಹ ಯಾವುದಾದರೂ ಕೊಡುಗೆಯನ್ನು ಎಚ್.ಡಿ.ಕುಮಾರಸ್ವಾಮಿ ನೀಡಿದ್ದಾರಾ? ನಿಜವಾಗಲೂ ಅವರ ಕೊಡುಗೆ ದೊಡ್ಡ ಶೂನ್ಯ. ಇಲ್ಲಸಲ್ಲದ ಸುಳ್ಳ ಭರವಸೆಗಳನ್ನು ಹೇಳಿದರೆ ನಂಬಲು ಸಾಧ್ಯವೇ ಎಂದು ಛೇಡಿಸಿದರು.
ಈ ವೇಳೆ ಜಿಪಂ ಮಾಜಿ ಉಪಾಧ್ಯಕ್ಷೆ ಜಗದಾಂಬಾ ಶಿವರಾಜ್, ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ, ಆಲಕೆರೆ ಸರ್ವಮಂಗಳಾ ಸೇರಿದಂತೆ ಸೇರಿದಂತೆ ಜೆಡಿಎಸ್, ಬಿಜೆಪಿ ತೊರೆದ ನೂರಾರು ಜನರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ರಮೇಶ್ ಬಂಡಿಸಿದ್ದೇಗೌಡ, ರವಿಕುಮಾರ್ ಗಣಿಗ, ಮಾಜಿ ಶಾಸಕ ಎಂ.ಶ್ರೀನಿವಾಸ್, ಎಂ.ಎಸ್.ಚಿದಂಬರ್, ಕುರುಬರ ಸಂಘದ ಅಧ್ಯಕ್ಷ ಸುರೇಶ್ ಮತ್ತಿತರರು ಇದ್ದರು.
‘ಬಸವ ಭವನ, ಬಸವೇಶ್ವರ ಪುತ್ಥಳಿ’
ಮಂಡ್ಯದಲ್ಲಿ ಬಸವ ಭವನ ನಿರ್ಮಾಣ ಮಾಡಬೇಕು ಹಾಗೂ ಅಶ್ವಾರೂಢ ಬಸವೇಶ್ವರರ ಪುತ್ಥಳಿ ಸ್ಥಾಪಿಸಬೇಕೆಂಬ ವೀರಶೈವ-ಲಿಂಗಾಯತರ ಹಲವು ದಿನಗಳ ಬೇಡಿಕೆಯನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರ ಸಹಕಾರದಲ್ಲಿ ಈಡೇರಿಸಲು ನಮ್ಮ ಸರ್ಕಾರ ಸಿದ್ಧವಿದೆ. ಅಲ್ಲದೆ, ಲಿಂಗಾಯತರಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ಕಾಂಗ್ರೆಸ್ ಬದ್ಧವಾಗಿದೆ. ಈ ಬಾರಿ ಜಿಲ್ಲೆಯ ಲಿಂಗಾಯತ ಸಮುದಾಯದವರು ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸುವ ಮೂಲಕ ಕೋಮುವಾದಿ ಬಿಜೆಪಿಗೆ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಧಿಕಾರ ನೀಡದೆ ವಚನ ಭ್ರಷ್ಟರಾದ ಕುಮಾರಸ್ವಾಮಿ ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ಸಚಿವ ಎಂ.ಬಿ.ಪಾಟೀಲ ಕರೆ ನೀಡಿದರು.