ಬೆಂಗಳೂರು: ನೇಹಾ ಹಿರೇಮಠ ಅವರ ಕೊಲೆ ಪ್ರಕರಣವನ್ನು ಬಿಜೆಪಿ ರಾಜಕೀಯ ಲಾಭಕ್ಕಾಗಿ ಉಪಯೋಗಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ . ರಾಜ್ಯದಲ್ಲಿ ಏನೂ ಕೆಲಸಗಳನ್ನು ಮಾಡದೆ 40% ಕಮಿಷನ್ ಲೂಟಿಯಲ್ಲೇ ಮೈಮರೆತ್ತಿದ್ದ ಬಿಜೆಪಿ ನಾಯಕರು ಧರ್ಮ ದ್ವೇಷಗಳನ್ನು ಮುನ್ನೆಲೆ ತರುತ್ತಿದ್ದಾರೆ. ಎಲ್ಲೆ ಕೊಲೆಯಾಗಲಿ ಹಂತಕ ಮುಸಲ್ಮಾನನಾಗಿದ್ದರೆ ರಣುಹದ್ದುಗಳಂತೆ ಮುಗಿಬೀಳುತ್ತಾರೆ. ಹಂತಕ ಹಿಂದೂ ಆಗಿದ್ದರೆ ಅತ್ತ ತಿರುಗಿಯೂ ನೋಡುವುದಿಲ್ಲ. ಇಂತಹ ಅಪಾಯಕಾರಿ ಬಿಜೆಪಿಗರನ್ನು ಕನ್ನಡಿಗರು ನಂಬಬಾರದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಕರೆ ನೀಡಿದ್ದಾರೆ.
ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ನಗರದಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಇಡೀ ಕರ್ನಾಟಕಕ್ಕೆ ಕಪ್ಪುಚುಕ್ಕೆ. ಇಂತಹ ಕೃತ್ಯಗಳನ್ನು ಆಮ್ ಆದ್ಮಿ ಪಾರ್ಟಿ ಯಾವುದೇ ಕಾರಣಕ್ಕೂ ಒಪ್ಪಲ್ಲ, ಅಪರಾಧಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಮಹಿಳೆಯರಿಗೆ ರಕ್ಷಣೆ ನೀಡುವ ಕಾನೂನು ತಿದ್ದುಪಡಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಮನ ಕೊಡಬೇಕು. ದೆಹಲಿಯಲ್ಲಿ ನಿರ್ಭಯಾ ಹತ್ಯೆ ಪ್ರಕರಣದ ಬಳಿಕ, ಆಮ್ ಆದ್ಮಿ ಪಾರ್ಟಿ ಅದನ್ನು ಗಂಭೀರವಾಗಿ ಪರಿಗಣಿಸಿ ನಿರ್ಭಯಾ ಕಾನೂನು ರಚನೆ ಮಾಡಿದೆ. ಈ ಕಾನೂನು ರಚನೆಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಪಾತ್ರ ಪ್ರಮುಖವಾಗಿದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ಬಿಜೆಪಿಗೆ ಯಾವುದೇ ವಿಷಯ ಇಲ್ಲ, ಅದಕ್ಕಾಗಿ ಇಂತಹ ಪ್ರಕರಣಗಳನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ನಿರುದ್ಯೋಗ, ಬಡತನ, ಹಣದುಬ್ಬರ, ರೂಪಾಯಿ ಅಪಮೌಲ್ಯ, ಬರಪರಿಹಾರ ಬಿಡುಗಡೆ ಮಾಡದೆ ದರ್ಪ ತೋರಿರುವುದು, ಸಂವಿಧಾನ ವಿರೋಧಿ ನೀತಿಗಳು, ಮೋದಿ ಅವರ ನಿರಂಕುಶ ಪ್ರಭುತ್ವವನ್ನು ಜನರಿಗೆ ತಿಳಿಸಲಾಗದೆ, ಬಿಜೆಪಿ ನಾಯಕರು ನೇಹಾಳ ಕೊಲೆ ವಿಚಾರವನ್ನು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸುತ್ತಿದ್ದಾರೆ. ಕೋಮು ಧ್ರುವೀಕರಣ, ದಂಗೆ, ಹತ್ಯೆಗಳ ಮೇಲೆಯೇ ಬಿಜೆಪಿ ರಾಜಕೀಯ ಮಾಡಿಕೊಂಡು ಬಂದಿದೆ. ಮತದಾರರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು, ರಾಜಕೀಯ ನಾಯಕರ ಪ್ರಚೋದನೆಗೆ ಒಳಗಾಗದೆ ಮತ ನೀಡಬೇಕು ಎಂದು ಜಗದೀಶ್ ಸದಂ ಮನವಿ ಮಾಡಿದರು.
ಆಮ್ ಆದ್ಮಿ ಪಾರ್ಟಿ ರಾಜ್ಯ ಖಜಾಂಚಿ ಪ್ರಕಾಶ್ ನೆಡುಂಗಡಿ ಮಾತನಾಡಿ, ನೇಹಾ ಹಿರೇಮಠ ಅವರ ಹತ್ಯೆ ಪ್ರಕರಣ ಅಕ್ಷಮ್ಯ, ರಾಜ್ಯ ಸರ್ಕಾರ ಈ ಪ್ರಕರಣದಲ್ಲಿ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ರಾಜ್ಯ ಮತ್ತು ದೇಶದಲ್ಲಿ ಮಹಿಳೆಯರ ರಕ್ಷಣೆಗೆ ಸರ್ಕಾರಗಳು ಸೂಕ್ತ ರಕ್ಷಣೆ ನೀಡಬೇಕು ಎಂದು ಹೇಳಿದರು.
ಎಲ್ಲಾ ಭ್ರಷ್ಟರಿಗೂ, ಅತ್ಯಾಚಾರಿಗಳಿಗೆ ಬಿಜೆಪಿಯೇ ಆಸರೆ ನೀಡುತ್ತಿದೆ. ಅವರು ಭ್ರಷ್ಟಾಚಾರ ಮತ್ತು ಮಹಿಳಾ ನ್ಯಾಯದ ಬಗ್ಗೆ ಮಾತನಾಡುವುದೇ ಹಾಸ್ಯಾಸ್ಪದ ಎಂದು ಹೇಳಿದರು. ಜನ ಬಿಜೆಪಿಯ ಕೋಮು ದ್ವೇಷದ ಭಾಷಣಕ್ಕೆ ಮರುಳಾಗದೆ, ಯೋಚಿಸಿ ಮತ ಚಲಾವಣೆ ಮಾಡಬೇಕು ಎಂದು ಮನವಿ ಮಾಡಿದರು.