ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಸ್ವಯಂ ಸೇವಕರಾಗಿ ನಿಯೋಜನೆಗೊಂಡಿರುವ ಎನ್.ಸಿ.ಸಿ, ಎನ್.ಎಸ್.ಎಸ್, ಭಾರತ್ ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳು ಜವಾಬ್ದಾರಿಯಿಂದ ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ತಿಳಿಸಿದರು.
ನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಸ್ವಯಂ ಸೇವಕರಿಗೆ ಹಮ್ಮಿಕೊಂಡಿದ್ದ ಸರದಿ ನಿರ್ವಹಣಾ ತರಬೇತಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಎಲ್ಲಾ ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ಮುಂದೆ ಬಂದಿರು ಸಂತಸದ ವಿಷಯವಾಗಿದ್ದು, ಮೊದಲು ತಾವು ತಪ್ಪದೆ ಮತ ಚಲಾಯಿಸಿ ಬಳಿಕ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಬೇಕೆಂದು ಹೇಳಿದರು.
ನಗರದಲ್ಲಿ ಸುಮಾರು 1052 ಮತಗಟ್ಟೆಗಳಿಗೆ ಸ್ವಯಂ ಸೇವಕರನ್ನು ನಿಯೋಜನೆ ಮಾಡಲಾಗುತ್ತಿದ್ದು, ಸ್ವಯಂ ಸೇವಕರು ಸರತಿ ಸಾಲಿನ ಸ್ಥಿತಿ ಹಾಗೂ ಪಾರ್ಕಿಂಗ್ ವ್ಯವಸ್ಥೆಯ ಕುಇರತು ತಂತ್ರಾಂಶದಲ್ಲಿ ಪ್ರತಿ ಅರ್ಧಗಂಟೆಗೊಮ್ಮೆ ಅಪ್ಡೇಟ್ ಮಾಡುತ್ತಿರಬೇಕು. ಅದನ್ನು ನೋಡಿಕೊಂಡು ಮತದಾರರು ಮತಗಟ್ಟೆಗಳಿಗೆ ಬಂದು ಮತದಾನ ಮಾಡಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಸ್ವಯಂ ಸೇವಕರು ಸರತಿ ಸಾಲಿನ ಸ್ಥಿತಿ ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ನೋಡಿಕೊಳ್ಳುವುದ ಜೊತೆಗೆ ಮತಗಟ್ಟೆಗಳಿಗೆ ಬರುವ ಹಿರಿಯ ನಾಗರಿಕರು, ವಿಶೇಷ ಚೇತನರು ಹಾಗೂ ಗರ್ಭಿಣಿಯರಿಗಾಗಿ ಸ್ಥಾಪಿಸಿರುವಂತಹ ಪ್ರತ್ಯೇಖ ಸಾಲಿನಲ್ಲಿ ಕಳುಹಿಸಿ ಮತದಾನ ಮಾಡಿಸುವ ಕೆಲಸ ಮಾಡಬೇಕು ಎಂದರು.
ಉತ್ತಮವಾಗಿ ಕಾರ್ಯನಿರ್ವಹಿಸದ ಸ್ವಯಂಸೇವಕರಿಗೆ ಪ್ರಶಸ್ತಿ ವಿತರಣೆ
ಈ ಬಾರಿಯ ಲೋಕಸಭಾ ಚುನಾವಣೆಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವ 100 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಉಪಯೋಗವಾಗುವಂತ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದು ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಸೆಲ್ವಮಣಿ ರವರು ತಿಳಿಸಿದರು.
ಈ ವೇಳೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಕಾಂತರಾಜು, ಬೆಂಗಳೂರು ನಗರ ಸ್ವೀಪ್ ನೋಡಲ್ ಅಧಿಕಾರಿಯಾದ ಅನಿತಾ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ದೇವರಾಜ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು, ಎನ್.ಸಿ.ಸಿ, ಎನ್.ಎಸ್.ಎಸ್ ಹಾಗೂ ಭಾರತ್ ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.