ಯಲಹಂಕ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರ ಪರವಾಗಿ ಏಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಣಕಹಳೆ ಮೊಳಗಿಸಿದ್ದಾರೆ.
ನಾಡಪ್ರಭು ಕೆಂಪೇಗೌಡರ ನೆಲ, ದಲಿತ ಸಮುದಾಯದ ಅಸ್ಮಿತೆ, ಹಿರಿಯ ಮುತ್ಸದ್ಧಿ ದಿ. ಬಿ.ಬಸವಲಿಂಗಪ್ಪ ಕರ್ಮಭೂಮಿಯಲ್ಲಿ ಚಿಕ್ಕಬಳ್ಳಾಪುರದ ರಣಕಣದಲ್ಲಿ ಕಾಂಗ್ರೆಸ್ ವರಿಷ್ಠ ನಾಯಕರು ವಿಜಯದ ಕಹಳೆ ಊದಿದರು.
ಮಾದನಾಯಕನ ಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಡಾ. ಎಂ.ಆರ್. ಸೀತಾರಾಂ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಸಂವಿಧಾನ ವಿರೋಧಿ, ರೈತ, ಜನರ ವಿರೋಧಿ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದರು. ಇದಕ್ಕೂ ಮುನ್ನ ರಕ್ಷಾ ರಾಮಯ್ಯ ಅವರ ಪರವಾಗಿ ಬೃಹತ್ ಬೈಕ್ ಜಾಥ ಕೂಡ ನಡೆಯಿತು.
ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರಿಗಳನ್ನೆಲ್ಲಾ ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಭ್ರಷ್ಟರು ಮೋದಿ ತೊಡೆಯ ಮೇಲೆಯೇ ಕುಳಿತಿದ್ದಾರೆ. ಮಹಾರಾಷ್ಟ್ರ ಸಿಎಂ ಸೇರಿದಂತೆ ಹಲವು ಮುಖಂಡರನ್ನು ಭ್ರಷ್ಟರು ಎಂದು ಹೇಳುತ್ತಿದ್ದರು. ಇದೀಗ ಅವರನ್ನೇ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಕಾಂಗ್ರೆಸ್ ನಲ್ಲಿದ್ದಾಗ ಮಾತ್ರ ಭ್ರಷ್ಟರು. ಇವರ ಪಕ್ಷಕ್ಕೆ ಸೇರಿದ ನಂತರ ದೊಡ್ಡ ಪರಿವರ್ತನೆಯಾಗುತ್ತಾರೆ. ಇವರ ಬಳಿ ದೊಡ್ಡ ಲಾಂಡ್ರಿ ಇದೆ. ಅದು ಬಟ್ಟೆ ಒಗೆಯುವ ಲಾಂಡ್ರಿಯಲ್ಲ. ಭ್ರಷ್ಟರೆಲ್ಲಾ ಒಳಗೆ ಹೋಗಿ ಕ್ಲೀನ್ ಆಗಿ ಹೊರ ಬಂದರೆ ಕ್ಲೀನ್ ಆಗುತ್ತಾರೆ ಮೋದಿ ಹೇಳುವುದು ಒಂದು, ಮಾಡುವುದು ಮತ್ತೊಂದು ಎಂದು ವಾಗ್ದಾಳಿ ನಡೆಸಿದರು.
ಮೋದಿ ಅವರು ಹಿಂದಿನ ಚುನಾವಣೆಯಗಳಲ್ಲಿ ನೀಡಿದ ಗ್ಯಾರೆಂಟಿಗಳು ಏನಾಯಿತು. ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಹದಿನೈದು ಲಕ್ಷ ರೂ ನೀಡುವುದಾಗಿ ಹೇಳಿದ್ದರು ಹತ್ತು ವರ್ಷಗಳಲ್ಲಿ ಇಪತ್ತುಕೋಟಿ ನೌಕರಿ ಕೊಡಬೇಕಾಗಿತ್ತು. ಈ ನೌಕರಿ ಯಾರಿಗಾದರೂ ತಲಿಪಿದೆಯಾ ಎಂದು ಪ್ರಶ್ನಿಸಿದರು. ಮೋದಿ ನಿಜನೋ, ನೀವು ಹೇಳುತ್ತಿರುವುದು ಸರಿಯೋ, ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ್ದರು. ಎರಡುಪಟ್ಟು ಆಗಿದೆಯಾ. ಇದು ಕೂಡ ಸತ್ವಯವೋ, ಸುಳ್ಳೋ ಎಂದು ಪ್ರಶ್ನಿಸಿದರು.
ಸುಳ್ಳುಗಳನ್ನು ಪ್ರಶ್ನಿಸಿದರೆ ನಮ್ಮ ಮೇಲೆ ರೇಗುತ್ತಾರೆ. ಇಷ್ಟಾದರೂ ಜನ ಮೋದಿ, ಮೋದಿ ಎಂದು ಹೇಳುತ್ತಾರೆ. ಮೋದಿ ಸುಳ್ಳಿನ ಸರದಾರ. ದೇಶಕ್ಕೆ ನಮ್ಮ ಪಕ್ಷ ನೀಡಿದ ಭರವಸೆಯನ್ನು ನಾವು ಜಾರಿಗೆ ತಂದಿದ್ಧೇವೆ. ಉದ್ಯೋಗ ಖಾತ್ರಿ, ಕಡ್ಡಾಯ ಶಿಕ್ಷಣ, ಆಹಾರ ಖಾತ್ರಿ ಯೋಜನೆಗಳನ್ನು ನಾವು ಹೇಳದಿದ್ದರೂ ಜಾರಿಗೊಳಿಸಿದ್ದೇವೆ. ಮೋದಿ ಅವರೇ ನೀವೇ ಭ್ರಷ್ಟರಾಗಿದ್ದು, ಬೇರೆಯವರನ್ನು ಪ್ರಶ್ನಿಸುತ್ತಿದ್ದೀರಿ ಎಂದರು.
ಜೆಡಿಎಸ್ – ಬಿಜೆಪಿ ಮೈತ್ರಿ ಯಾಕಾಯಿತು ಎಂದು ಗೊತ್ತಾಗುತ್ತಿಲ್ಲ. ಬಿಜೆಪಿಯನ್ನು ಜೆಡಿಎಸ್ ನವರು ಹಗಲು ರಾತ್ರಿ ಬಯ್ಯುತ್ತಿದ್ದವರು ಇದೀಗ ಬಿಜೆಪಿಯನ್ನು ಹಾಡಿ ಹೊಗಳುತ್ತಿದ್ದಾರೆ. ಬಡವರಿಗೆ ತೊಂದರೆ ನೀಡುತ್ತಿದ್ದಾರೆ. ನಮ್ಮ ಗುರಿ ಇರುವುದು ಯುವ ಜನಾಂಗ ಕೆಲಸ ಇಲ್ಲದೇ ಅಡ್ಡಾಡುತ್ತಿದ್ಧಾರೆ. ಬೆಲೆಗಳೂ ಗಗನಕ್ಕೆ ಏರಿಕೆಯಾಗಿದೆ. ಪೆಟ್ರೋಲ್, ಡೀಸೆಲ್, ಉಪ್ಪಿನ ಬೆಲೆ ಒಂದು ರೂಪಾಯಿ ಏರಿಕೆಯಾಗಿದ್ದರೆ ಕಾಂಗ್ರೆಸ್ ಪಕ್ಷವನ್ನು ಬಯ್ಯುತ್ತಿದ್ದರು. ೨೦೧೬ ರಲ್ಲಿ ಪೆಟ್ರೋಲ್ ೬೬ ರೂ ಇತ್ತು. ಇವತ್ತು ೧೦೦ ರೂ ಆಗಿದೆ. ಅಚ್ಚೇದಿನ್ ಬಂತೇ. ಡೀಸೆಲ್ ೫೨ ಇತ್ತು. ಇವತ್ತು ೮೮ ರೂ ಆಗಿದೆ. ಇದು ಅಚ್ಚೇದಿನ್ ಬಂದಿದೆಯಾ. ಅಡುಗೆ ಅನಿಲ ೪೦೦ ರೂ, ಇವತ್ತು ೯೩೦ ರೂಗೆ ಏರಿಕೆಯಾಗಿದೆ. ಇದು ಅಚ್ಚೇದಿನ್ . ತೊಗರಿ ಬೇಳೆ ಇರಬಹುದು. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಎರಡು ಮೂರು ಪಟ್ಟು ಏರಿಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಾ. ಡಿ ಸುಧಾಕರ್ ಕಾಂಗ್ರೆಸ್ ಗೆ ಮತ ಮಾಡಿದ್ದಾರೆ, ಡಿಸಿಎಂ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಸುಧಾಕರ್ ಪರಾಭವಗೊಳ್ಳುವುದು ಖಚಿತ. ರಕ್ಷಾ ರಾಮಯ್ಯ ಗೆಲ್ಲುವುದು ಖಚಿತ ಎಂದು ಭವಿಷ್ಯ ನುಡಿದರು.ಸುಧಾಕರ್ ಕಾಂಗ್ರೆಸ್ ಗೆ ಮೋಸ ಮಾಡಿದವರು, ಕೋವಿಡ್ ಸಂದರ್ಭದಲ್ಲಿ ಭಾರೀ ಭ್ರಷ್ಟಾಚಾರ ನಡೆಸಿದ್ದರು. ಇಂತಹವನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಿ ಎಂದು ಯಲಹಂಕದಲ್ಲಿ ರಕ್ಷಾ ರಾಮಯ್ಯ ಅವರ ಪರವಾಗಿ ಭರ್ಜರಿ ಬ್ಯಾಟಿಂಗ್ ನಡೆಸಿದರು.
ರಕ್ಷಾ ರಾಮಯ್ಯ ಅವರ ಜೊತೆ ನಾನು, ಖರ್ಗೆ ಸಾಹೇಬರು, ಸಿದ್ದರಾಮಯ್ಯ ಅವರು ಇದ್ದೇವೆ. ನಾವು ಆಶೀರ್ವಾದ ಮಾಡಿದ್ದೇವೆ ಜೊತೆಗೆ ಖರ್ಗೆ ಸಾಹೇಬರು ನೆಹರು, ಇಂದಿರಾಗಾಂಧಿ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರು ಕುಳಿತಿದ್ದ ಜಾಗದಲ್ಲಿದ್ಧಾರೆ. ನಾವೆಲ್ಲರೂ ಅವರ ಕೈ ಬಲಪಡಿಸಬೇಕು ಎಂದು ಹೇಳಿದರು.