ಬೆಂಗಳೂರು: ಭಾರತದಲ್ಲೇ ತಯಾರಾದ ಕೋವ್ಯಾಕ್ಸಿನ್ ಇದ್ದರೂ ಕೋವಿಶೀಲ್ಡ್ ಅನ್ನು ದೇಶದ 80 ಪ್ರತಿಶತ ಜನಕ್ಕೆ ನೀಡಲು ಕಾರಣವೇನು? ಕೋವ್ಯಾಕ್ಸಿನ್ ಕಂಪನಿ ಕೇಂದ್ರ ಸರ್ಕಾರಕ್ಕೆ ಕಿಕ್ಬ್ಯಾಕ್ ನೀಡದಿರುವುದಕ್ಕೆ ಆ ಲಸಿಕೆಯನ್ನು ಶಿಫಾರಸ್ಸು ಮಾಡಲಿಲ್ಲವಾ? ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಪ್ರಶ್ನೆ ಮಾಡಿದ್ದಾರೆ.
ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 2022 ರಲ್ಲಿ 32,457 ಹೃದಯಾಘಾತ 2021ರಲ್ಲಿ 28,413 ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕೋವಿಡ್ ಲಸಿಕೆ ಪಡೆದ ನಂತರ 2022 ರಲ್ಲಿ 30 ವರ್ಷದೊಳಗಿನ 3,329 ಯುವಕರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.
ವಿಶ್ವ ಸಂಸ್ಥೆ ಲಸಿಕೆಯ ಅಡ್ಡಪರಿಣಾಮದ ಬಗ್ಗೆ ವಿಸ್ತೃತವಾಗಿ ಹೇಳಿದೆ. ಇದನ್ನು ಅರಿತ ಅನೇಕ ದೇಶಗಳು ಆ ಲಸಿಕೆಯನ್ನು ಬ್ಯಾನ್ ಮಾಡಿವೆ. ಆದರೆ ಪ್ರಧಾನಿ ಮೋದಿ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳಲು, ಜನರ ₹35,000 ಕೋಟಿ ಖರ್ಚು ಮಾಡಿ ದೇಶದ 80 ಪ್ರತಿಶತ ಮಂದಿಗೆ ವ್ಯಾಕ್ಸಿನ್ ನೀಡಲಾಗಿದೆ ಎಂದರು. ಕೋವ್ಯಾಕ್ಸಿನ್ ಅನ್ನು 20 ಪ್ರತಿಶತ ಮಂದಿಗೆ ಮಾತ್ರ ನೀಡಲಾಗಿದೆ ಎಂದು ಹೇಳಿದರು.
ವಿಶ್ವದ ಅತಿ ದೊಡ್ಡ ಲಸಿಕೆ ಕಾರ್ಯಕ್ರಮದಲ್ಲಿ ಅತಿ ದೊಡ್ಡ ಹಗರಣ ನಡೆದಿದೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಕೋವಿಶೀಲ್ಡ್ ಹಾಕಿಸಿಕೊಳ್ಳುವ ಕಾರಣ ರಕ್ತ ಹೆಪ್ಪುಗಟ್ಟುತ್ತದೆ ಎಂದು ಅಸ್ಟ್ರಾಜನಿಕ ಒಪ್ಪಿಕೊಂಡಿದೆ. ಇಷ್ಟು ಗಂಭೀರ ಅಡ್ಡಪರಿಣಾಮ ಇದ್ದಾಗ ಹೇಗೆ ಲಸಿಕೆ ಹಾಕಲು ಒಪ್ಪಿಗೆ ನೀಡಿದಿರಿ? ಇವತ್ತು ತಮ್ಮಿಂದಾದ ತಪ್ಪನ್ನು ಒಪ್ಪಿಕೊಳ್ಳಲು ಕೂಡ ಮೋದಿ ಸಿದ್ದವಾಗಿಲ್ಲ, ಕೆಲವು ವೈದ್ಯರಿಗೆ ಹಣ ನೀಡಿ ಅಡ್ಡ ಪರಿಣಾಮ ಇಲ್ಲ ಎಂದು ಹೇಳಿಸುತ್ತಿದ್ದಾರೆ. ಹೃದಯಾಘಾತದ ಸಂಖ್ಯೆ ಕಣ್ಮುಂದೆನೇ ಇದೆ. ಸರ್ಕಾರ ಬಂದು ತಮ್ಮ ತಪ್ಪಿಕೊಂಡು, ಲಸಿಕೆ ಪಡೆದುಕೊಂಡ ಬಳಿಕ, ಹೃದಯಾಘಾತದಿಂದ ಸಾವನ್ನಪ್ಪಿದ ಜನರಿಗೆ ಲಸಿಕಾ ಕಂಪನಿಯಿಂದ ಪರಿಹಾರ ಕೊಡಿಸಬೇಕು ಎಂದು ಮೋಹನ್ ದಾಸರಿ ಒತ್ತಾಯಿಸಿದ್ದಾರೆ.
ಅಷ್ಟು ಆರೋಗ್ಯವಾಗಿದ್ದು, ಫಿಟ್ ಆಗಿದ್ದ ಪುನೀತ್ ರಾಜ್ಕುಮಾರ್ ಕೂಡ ಇದ್ದಕ್ಕಿದ್ದಂತೆ ಹೃದಯಾಘತದಿಂದ ಸಾವನ್ನಪ್ಪುತ್ತಾರೆ ಎಂದರೆ ಇದು ಕೂಡ ಒಂದು ಕಾರಣ ಇರಬಹುದಲ್ಲವಾ ಎಂದು ಅನುಮಾನ ವ್ಯಕ್ತಪಡಿಸಿದರು.
ಎಎಪಿ ಬೆಂಗಳೂರು ಸಂಘಟನಾ ಕಾರ್ಯದರ್ಶಿ ಅಶೋಕ್ ಮೃತ್ಯುಂಜಯ ಮಾತನಾಡಿ, ಕೋವಿಶೀಲ್ಡ್ ತಯಾರಿ ಮಾಡಿದ್ದ ಅಸ್ಟ್ರಾಜನಿಕಾ ಕಂಪನಿ ಮೇಲೆ ಕೇಸು ದಾಖಲಾದ ಬಳಿಕ, ಕಂಪನಿ ಅಂತಿಮವಾಗಿ ತಮ್ಮ ಔಷಧಿಯಿಂದ ಅಡ್ಡ ಪರಿಣಾಮ ಇದೆ ಎಂದು ಕೋರ್ಟ್ನಲ್ಲಿ ಒಪ್ಪಿಕೊಂಡಿದೆ. ವಿಶ್ವಸಂಸ್ಥೆಯವರು ಕೂಡ ಲಸಿಕೆಯಿಂದ ಅಡ್ಡ ಪರಿಣಾಮ ಇದ್ದು ಜನರಿಗೆ ಮಾಹಿತಿ ನೀಡುವಂತೆ ತಿಳಿಸಿದರೂ, ಕೇಂದ್ರ ಸರ್ಕಾರ ಮಾತ್ರ ಔಷಧಿಯಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ ಎಂದು ವಾದಿಸಿತು. ಲೋಕಸಭೆಯಲ್ಲೇ ಅಧಿಕೃತವಾಗಿ ಸರ್ಕಾರ ಘೋಷಣೆ ಮಾಡಿತ್ತು ಎಂದರು.
ಯಾವುದೇ ಲಸಿಕೆಯಾದರೂ ಅಡ್ಡ ಪರಿಣಾಮ ಇರುತ್ತದೆ. ಆದರೆ ಯಾಕೆ ಭಾರತದಲ್ಲಿ 80 ಪ್ರತಿಶತ ಜನಕ್ಕೆ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ. ಭಾರತದ ಕೋವ್ಯಾಕ್ಸಿನ್ ಅನ್ನು ಯಾಕೆ ಶಿಫಾರಸ್ಸು ಮಾಡಲಿಲ್ಲ, ಅಸ್ಟ್ರಾಜನಿಕಾ ಕಂಪನಿ ಯಾಕೆ ₹50 ಕೋಟಿ ಚುನಾವಣಾ ಬಾಂಡ್ ಖರೀದಿ ಮಾಡಿದೆ ಎಂದು ಕೇಳಿದರು.
₹35 ಸಾವಿರ ಕೋಟಿ ಜನಗಳ ದುಡ್ಡು ಖರ್ಚು ಮಾಡಿ ವ್ಯಾಕ್ಸಿನ್ ನೀಡಲಾಗಿದೆ. ಯಾಕೆ ಇದೇ ಕಂಪನಿಯ ಲಸಿಕೆಯನ್ನು ಕೇಂದ್ರ ಸರ್ಕಾರ ಶಿಫಾರಸ್ಸು ಮಾಡಿದೆ ಎಂದು ಸಮಸ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.