ರಾಣೆಬೆನ್ನೂರು: ಸರಣಿ ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ ಅವರ ಕೃತ್ಯಗಳ ಬಗ್ಗೆ ಅರಿವಿದ್ದು ಹಾಸನದಲ್ಲಿ ತನ್ನ ಮೈತ್ರಿ ಅಭ್ಯರ್ಥಿಯನ್ನಾಗಿ ಬಿಜೆಪಿ ಕಣಕ್ಕಿಳಿಸಿದೆ. ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಮಗನಿಗೆ ಬಿಜೆಪಿ ಟಿಕೆಟ್ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಬಚಾವೋ ಭೇಟಿ ಪಡಾವೋ ಎಂದರೆ ಅತ್ಯಾಚಾರಿಗಳಿಗೆ ಟಿಕೆಟ್ ನೀಡುವುದೇ? ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಪ್ರಶ್ನಿಸಿದ್ದಾರೆ.
ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ ಗಡ್ಡದೇವರ ಮಠ ಅವರ ಗೆಲುವಿನ ಸಂದೇಶ ನೀಡಲು ಶುಕ್ರವಾರ ನಡೆಸಿದ ಜನಸಮಾವೇಶದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಚಂದ್ರು, ರಾಷ್ಟ್ರದಲ್ಲಿ ಸಂವಿಧಾನವನ್ನು ಉಳಿಸಬೇಕಾಗಿದೆ, ಪ್ರಜಾಪ್ರಭುತ್ವಕ್ಕೆ ಗೌರವ ತರಬೇಕಾಗಿದೆ. ಸರ್ವನಾಶಕ್ಕೆ ನಾಂದಿ ಹಾಡಿರುವ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರ ನಿರ್ನಾಮ ಮಾಡಬೇಕಾಗಿದೆ. ಹಾಗಾಗಿ ‘ಇಂಡಿಯಾ’ ಒಕ್ಕೂಟದ ಪಾಲುದಾರರಾಗಿ ಕಾಂಗ್ರೆಸ್ಗೆ ಹೆಗಲಾಗಿ ನಿಂತಿದ್ದೇವೆ ಎಂದರು.
ಐದು ಗ್ಯಾರಂಟಿಗಳನ್ನು ಜಾರಿ ಮಾಡುವ ಮೂಲಕ ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಡೆದುಕೊಂಡಿದ್ದಾರೆ. ಎರಡು ಮಹಿಳಾ ಪರ ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯದ ಮಹಿಳೆಯರನ್ನು ಸಬಲೀಕರಣದತ್ತ ಕೊಂಡೊಯ್ದಿದ್ದಾರೆ. ಸರ್ವರಿಗೂ ಸಮಪಾಲು ಸಮಬಾಳು ಎಂಬುದನ್ನು ನಿಜಾರ್ಥದಲ್ಲಿ ಕಲ್ಪಿಸಿದ್ದಾರೆ. ಸಿದ್ದರಾಮಯ್ಯನವರು ರಾಮರಾಜ್ಯ ನಿರ್ಮಾಣ ಮಾಡಲು ಹೊರಟಿದ್ದಾರೆ. ಆದರೆ ನರೇಂದ್ರ ಮೋದಿ ಅವರು ದೇಶವನ್ನು ರಾವಣರಾಜ್ಯವನ್ನಾಗಿಸಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರು ಆಕ್ರೋಷ ವ್ಯಕ್ತಪಡಿಸಿದರು.
ಮೋದಿ, ಅಮಿತ್ ಷಾ ಹಾಗೂ ಬಿಜೆಪಿಗರು ಭ್ರಂಹ್ಮಾಂಡ ಸುಳ್ಳುಗಾರರು, ಮೋಸಗಾರರು, ಧಗಾಕೋರರು, ದರೋಡೆಕೋರರು, ಅನಾಗರಿಕರು, ರಾಕ್ಷಸ ಪ್ರವೃತ್ತಿಯವರು, ಭಯೋತ್ಪಾದಕರು, ಮನುಷ್ಯತ್ವ ಇಲ್ಲದವರು, ದೇಶದ ಆಸ್ತಿ ಮಾರಾಟಕ್ಕಿಟ್ಟವರು ಎಂದು ಜನಸಾಮಾನ್ಯರೂ ಹೇಳುತ್ತಿದ್ದಾರೆ. ಕಾಂಗ್ರೆಸ್ ಕಟ್ಟಿದ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ವಾಧಿಕಾರ ನಡೆಸಲು ಬಿಜೆಪಿಗರು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಈ ಪ್ರಯತ್ನದಲ್ಲಿ ಇಂಡಿಯಾ ಒಕ್ಕೂಟದೆದುರು ವಿಫಲಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡರಾದ ಎಚ್.ಕೆ. ಪಾಟೀಲ್, ವಿನಯ್ ಕುಲಕರ್ಣಿ, ಸಲೀಂ ಮೊಹಮ್ಮದ್, ಕೆ.ಬಿ. ಕೋಳಿವಾಡ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.