ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಗಾಲದ ವೇಳೆ ಧರೆಗುರುಳುವ ಮರ, ಮರದ ರೆಂಬೆ/ಕೊಂಬೆಗಳನ್ನು ತೆರವುಗೊಳಿಸುವ ಸಲುವಾಗಿ “ಮರ ಕಟಾವು ತಂಡಗಳು” ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಧರಗುರುಳಿದ ಮರಗಳನ್ನು ಕಾಲಮಿತಿಯೊಳಗಾಗಿ ತೆರವುಗೊಳಿಸಲಾಗುತ್ತಿದೆ.
ನಗರಲ್ಲಿ ಮಳೆಗಾಲ ಪ್ರಾರಂಭವಾಗಿದ್ದು, ಮಳೆಯಾಗುವ ವೇಳೆ ಮರಗಳು, ಮರದ ರೆಂಬೆ/ಕೊಂಬೆಗಳು ಧರೆಗುರುಳಲಿವೆ. ಇದರಿಂದ ನಾಗರೀಕರಿಗೆ ಹಾಗೂ ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆಯಾಗಲಿದೆ. ಈ ನಿಟ್ಟಿನಲ್ಲಿ ಪಾಲಿಕೆಯ ಅರಣ್ಯ ವಿಭಾಗವು ಮರ ಕಟಾವು ತಂಡಗಳನ್ನು ನಿಯೋಜಿಸಿದೆ.
ಪಾಲಿಕೆಯ ನಿಯಂತ್ರಣ ಕೊಠಡಿಗಳಿಗೆ ಮರ, ಮರದ ರೆಂಬೆ/ಕೊಂಬೆಗಳು ಬಿದ್ದಂತಹ ದೂರುಗಳು ಬಂದ ಕೂಡಲೆ, ಆ ದೂರುಗಳನ್ನು ಆಯಾ ವಲಯದ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಿದ್ದಾರೆ. ಅನಂತರ ಅಧಿಕಾರಿಗಳು ಮರ, ಮರದ ರೆಂಬೆ/ಕೊಂಬೆ ಬಿದ್ದಿರುವ ಸ್ಥಳಕ್ಕೆ ಮರ ಕಟಾವು ತಂಡಗಳನ್ನು ಕಳುಹಿಸಿ ಧರೆಗುರುಳಿದ ಮರಗಳನ್ನು ಕಟಾವು ಮಾಡಿ ನಾಗರೀಕರು/ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದ್ದಾರೆ.
ಒಟ್ಟು 39 ಮರ ಕಟಾವು ತಂಡಗಳ ನಿಯೋಜನೆ:
ಪಾಲಿಕೆ ವ್ಯಾಪ್ತಿಯಲ್ಲಿ 28 ವಿಧಾನಸಭಾ ಕ್ಷೇತ್ರಗಳಿದ್ದು, ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ 28 ಮರ ಕಟಾವು ತಂಡಗಳು ಕಾರ್ಯನಿರ್ವಹಿಸುತ್ತಿವೆ. ಇದರ ಜೊತೆಗೆ ತುರ್ತಾಗಿ ಮರಗಳನ್ನು ತೆರವುಗೊಳಿಸುವ ಸಲುವಾಗಿ ಹೆಚ್ಚುವರಿಯಾಗಿ 11 ತಂಡಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಪ್ರತಿ ತಂಡದಲ್ಲೂ ಏಳು ಕಾರ್ಮಿಕರು, ಒಬ್ಬರು ಮೇಲ್ವಿಚಾರಕರು ಇರುತ್ತಾರೆ. ಮರಗಳನ್ನು ತೆರವುಗೊಳಿಸುವ ಅವಶ್ಯಕತೆಯಿರುವ ಗರಗಸ, ಕೊಂಬೆಗಳನ್ನು ತುಂಡರಿಸುವ ಯಂತ್ರ, ಹಾರೆ, ಹಗ್ಗ ಸೇರಿದಂತೆ ಇನ್ನಿತರೆ ಸಲಕರಣೆಗಳಿರಲಿವೆ. ಜೊತೆಗೆ ಕಟಾವು ಮಾಡಿದ ಮರದ ತುಂಡುಗಳ ಸಾಗಣೆಗಾಗಿ ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ.
5 ಬೈಕ್ ರೂಪದಲ್ಲಿ ತಂಡಗಳ ನಿಯೋಜನೆ:
ಮಳೆಗಾಲದಲ್ಲಿ ಬಿದ್ದಂತಹ ಮರಗಳನ್ನು ತೆರವುಗೊಳಿಸುವ ಸಲುವಾಗಿ ಈ ಬಾರಿ ವಿನೂತನವಾಗಿ 5 ಬೈಕ್(ದ್ವಿಚಕ್ರ ತಂಡ) ತಂಡಗಳನ್ನು ನಿಯೋಜಿಸಿಕೊಳ್ಳಲಾಗಿದೆ. ಅದರಂತೆ ರಸ್ತೆ ಮೇಲೆ ಬಿದ್ದಂತಹ ಅಥವಾ ತುರ್ತಾಗಿ ಮರಗಳನ್ನು ತೆಗೆಯಬೇಕಾದ ಸ್ಥಳಗಳಿಗೆ ಬೈಕ್ ತಂಡಗಳು ಕೊಂಬೆ ಕಟಾವು ಯಂತ್ರವನ್ನು ತೆಗೆದುಕೊಂಡು ಸ್ಥಳಕ್ಕೆ ತೆರಳಿ ಮರವನ್ನು ಕಟಾವು ಮಾಡಿ ತೆರವುಗೊಳಿಸಲಿದ್ದಾರೆ.
ಬಿದ್ದ ಮರ ತೆರವಿಗೆ ಕ್ರೇನ್, ಜೆಸಿಬಿಗಳ ನಿಯೋಜನೆ:
ಮಳೆಗಾಲದ ವೇಳೆ ಬೃಹತ್ ಮರಗಳು ಬಿದ್ದರೆ ಅವುಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸುವ ಸಲುವಾಗಿ ಪಾಲಿಕೆ ಅರಣ್ಯ ವಿಭಾಗವು 2 ಕ್ರೇನ್ ಹಾಗೂ 2 ಜೆಸಿಬಿ ಗಳನ್ನು ನಿಯೋಜನೆ ಮಾಡಿಕೊಂಡಿದೆ. ಅಲ್ಲದೆ ಅದನ್ನು ಸಾಗಾಣೆ ಮಾಡುವ ಸಲುವಾಗಿ 8 ಟ್ರ್ಯಾಕ್ಟರ್ ಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ.
ಕಟಾವು ಮಾಡಿದ ಮರದ ದಿಮ್ಮಿಗಳ ವಿಲೇವಾರಿಗೆ ಡಂಪಿಂಗ್ ಯಾರ್ಡ್ ವ್ಯವಸ್ಥೆ:
ಧರೆಗುಳಿದ ಮರಗಳನ್ನು ಕಟಾವು ಮಾಡಿದ ನಂತರ ಮರದ ದಿಮ್ಮಿಗಳು, ರೆಂಬೆ, ಕೊಂಬೆಗಳ ವಿಲೇವಾರಿಗಾಗಿ ವಲಯಕ್ಕೆ ಒಂದರಂತೆ ಆಯಾ ವಲಯಗಳಲ್ಲಿ 8 ಡಂಪಿಂಗ್ ಯಾರ್ಡ್ಗಳಿದ್ದು, ಹೆಚ್ಚುವರಿಯಾಗಿ ತಾತ್ಕಾಲಿಕವಾಗಿ 6 ಕಡೆ ಡಂಪಿಂಗ್ ಯಾರ್ಡ್ಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ಮರದ ದಿಮ್ಮಿ/ರೆಂಬೆ/ಕೊಂಬೆಗಳನ್ನು ವಿಲೇವಾರಿ ಮಾಡಲಾಗುತ್ತದೆ.
271 ಮರ, 483 ರೆಂಬೆ/ಕೊಂಬೆಗಳ ತೆರವು:
ನಗರದಲ್ಲಿ ಈಗಾಗಲೇ ಮಳೆ ಪ್ರಾರಂಭವಾಗಿದ್ದು, ದಿನಾಂಕ: 06.05.2024 ರಿಂದ 10.05.2024 ರವರೆಗೆ 271 ಮರ ಹಾಗೂ 483 ರೆಂಬೆ/ಕೊಂಬೆಗಳು ಧರೆಗುರುಳಿದಿವೆ. ಮರ ಕಟಾವು ತಂಡಗಳ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ನಾಗರೀಕರಿಂದ ದೂರುಗಳು ಬಂದ ಕೂಡಲೆ ಸ್ಥಳಕ್ಕೆ ತೆರಳಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.