ಬೆಂಗಳೂರು: ಬರದಿಂದ ಕಂಗೆಟ್ಟಿದ್ದ ಬೆಂಗಳೂರಿಗರು ಮೇ ತಿಂಗಳಲ್ಲಿ ಸುರಿಯುತ್ತಿರುವ ಅಲ್ಪಸ್ವಲ್ಪ ಮಳೆಯಿಂದ ತೃಪ್ತಿಗೊಂಡಿದ್ದರು. ಆದರೆ ಸಣ್ಣ ಪ್ರಮಾಣದ ಮಳೆಗೆ ರಸ್ತೆಗಳಲ್ಲಿ ನೀರು ನಿಲ್ಲುತ್ತಿರುವುದನ್ನು, ಕಾಲುವೆಗಳು ಉಕ್ಕಿ ಹರಿಯುತ್ತಿರುವುದನ್ನು ನೋಡಿದರೆ ಪುನಃ ಎರಡು ವರ್ಷಗಳ ಹಿಂದಿನ ಭಾರಿ ನೆರೆ ಪರಿಸ್ಥಿತಿಯೇ ಬೆಂಗಳೂರಿಗೆ ಬಂದೊದಗಲಿದೆ ಎಂಬ ಆತಂಕ ಸೃಷ್ಟಿಯಾಗಿದೆ. ಕಾರಣ ಇನ್ನೂ ತೆರವಾಗದ ರಾಜಕಾಲುವೆ ಒತ್ತುವರಿ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಬೇಸರ ವ್ಯಕ್ತಪಡಿಸಿದ್ದಾರೆ.
ಶೀಘ್ರವಾಗಿ ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು, ನೆರೆ ಭೀತಿಯಿಂದ ಬೆಂಗಳೂರಿಗರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಚಂದ್ರು ಅವರು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಐಟಿ ಹಬ್ ಮಹದೇವಪುರ ಕ್ಷೇತ್ರದ ಹೊರ ವರ್ತುಲ ರಸ್ತೆಯ ಎಕೋಸ್ಪೇಸ್, ರೈನ್ಬೋ ಡೈವ್ ಬಡಾವಣೆ, ಟಿ.ಝಡ್ ಅಪಾರ್ಟ್ಮೆಂಟ್ ಸೇರಿದಂತೆ ವಿವಿಧೆಡೆ ಭಾರಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಜೆಸಿಬಿಗಳ ಮೂಲಕ ರಕ್ಷಣಾ ಕಾರ್ಯ ನಡೆಸಲಾಗಿತ್ತು. ಶಾಶ್ವತ ಪರಿಹಾರದ ನಿಟ್ಟಿನಲ್ಲಿ ಒತ್ತುವರಿ ತೆರವುಗೊಳಿಸಬೇಕು ಎಂದು ಎಎಪಿ ಸೇರಿದಂತೆ ಅನೇಕ ಸಂಘಟನೆಗಳು ತೀವ್ರ ಹೋರಾಟ ನಡೆಸಿದ್ದವು. ರಾಜಕಾಲುವೆ ಒತ್ತುವರಿ ತೆರವಿಗೆ ವಿಳಂಬ ನೀತಿ ಅನುಸರಿಸಿದ ಕಾರಣಕ್ಕೆ ತಹಸೀಲ್ದಾರ್ ಒಬ್ಬರನ್ನು ಅಮಾನತುಗೊಳಿಸುವ ಮೂಲಕ ಅಂದಿನ ಬಿಜೆಪಿ ಸರ್ಕಾರ ಹೋರಾಟವನ್ನು ತಣಿಸುವ ಪ್ರಯತ್ನವನ್ನು ನಡೆಸಿತ್ತು. ವಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್, ಒತ್ತುವರಿ ತೆರವುಗೊಳಿಸದೆ ಬೆಂಗಳೂರಿಗರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ 40% ಕಮಿಷನ್ ಸರ್ಕಾರ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಪಾದಿಸಿತ್ತು. ಆದರೆ ಅಧಿಕಾರಕ್ಕೆ ಬಂದು 1 ವರ್ಷ ಕಳೆದರೂ ಒತ್ತುವರಿ ತೆರವು ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ? ಒತ್ತುವರಿ ತೆರವು ಎಂಬುದು ಬಡವರ ಮನೆಗಷ್ಟೇ ಸೀಮಿತವೇ? ರಾಜಕಾರಣಿಗಳು, ಹಣ ಹೊಂದಿರುವವರು, ಬಿಲ್ಡರ್ ಸಂಸ್ಥೆಗಳ ಕಟ್ಟಡಗಳನ್ನು ಏಕೆ ತೆರವುಗೊಳಿಸಿಲ್ಲ? ಎಂದು ಮುಖ್ಯಮಂತ್ರಿ ಚಂದ್ರು ಅವರು ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಳೆಯಿಂದ ಪ್ರವಾಹ ಉಂಟಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಎಸ್ಎನ್ಡಿಎಂಸಿ ವತಿಯಿಂದ ರಾಜಕಾಲುವೆಗಳಿಗೆ 124 ಸೆನ್ಸಾರ್ಗಳನ್ನು ಅಳವಡಿಸಲಾಗಿದೆ. ಬಿಬಿಎಂಪಿ ರಾಜಕಾಲುವೆಗಳಿಗೆ 24×7 ಕಾರ್ಯನಿರ್ವಹಿಸುವ 455ಕ್ಕೂ ಅಧಿಕ ಕ್ಯಾಮೆರಾಗಳನ್ನು ಅಳವಡಿಸುತ್ತಿದೆ. ಆದರೆ ಇವೆಲ್ಲವೂ ತಾತ್ಕಾಲಿಕ ಪರಿಹಾರ ಉಪಾಯಗಳಾಗಿವೆ. ಶಾಶ್ವತ ಪರಿಹಾರದ ಭಾಗವಾಗಿ ಯಾವ ಪ್ರಭಾವಿ ವ್ಯಕ್ತಿಗಳಿಗೂ ಸೊಪ್ಪು ಹಾಕದೆ ರಾಜಕಾಲುವೆ ತೆರವುಗೊಳಿಸಬೇಕು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಎಎಪಿ ತೀವ್ರ ಹೋರಾಟವನ್ನು ಸಂಘಟಿಸಲಿದೆ ಎಂದು ತಿಳಿಸಿದ್ದಾರೆ.