ಬೆಂಗಳೂರು: ಬ್ಯಾಂಕ್ ಎಂಬುದು ಒಂದು ನಂಬಿಕೆಯಾಗಿದ್ದು, ನಂಬಿಕೆ ಬಂದಲ್ಲಿ ಮಾತ್ರ ಬ್ಯಾಂಕ್ ಬೆಳವಣಿಗೆಯಾಗಲು ಸಾಧ್ಯ, ಈ ಮೂಲಕ ಸಹಕಾರಿ ಬ್ಯಾಂಕ್ ಗಳು ಕೇರಳದ ನಿರ್ವಹಿಸಬೇಕು ಎಂದು ರಾಜ್ಯ ಹೈಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಪಿ.ಎಸ್. ದಿನೇಶ್ ಕುಮಾರ್ ಹೇಳಿದ್ದಾರೆ.
ಸಹಕಾರಿ ರಂಗದಲ್ಲಿ ಮಹತ್ವದ ಹೆಗ್ಗುರುತುಗಳನ್ನು ಮೂಡಿಸುತ್ತಿರುವ ಶ್ರೀ ಚರಣ್ ಸೌಹಾರ್ದ ಕೋ ಆಪರೇಟೀವ್ ಬ್ಯಾಂಕ್ ನ 10 ನೇ ಶಾಖೆಯನ್ನು ಸಹಕಾರಿ ನಗರ ಸಮೀಪದ ಕೊಡಿಗೆಹಳ್ಳಿಯಲ್ಲಿ ಶುಭಾರಂಭ ಮಾಡಿ ಮಾತನಾಡಿದ ಅವರು, ಬ್ಯಾಂಕಿನಲ್ಲಿ ಹಣವನ್ನು ಠೇವಣಿಯಾಗಿ ಇಡಬಹುದು ಎಂಬ ನಂಬಿಕೆ ಬಂದಿದ್ದೇ ಆದಲ್ಲಿ ಬ್ಯಾಂಕಿನ ಘನತೆ ಹೆಚ್ಚಾಗುತ್ತದೆ. ಬ್ಯಾಂಕ್ ಗಳು ಗ್ರಾಹಕರ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದರು.
ಆಧುನಿಕ ಯುಗದಲ್ಲಿ ಬ್ಯಾಂಕಿಂಗ್ ಸೇವೆ ಹೆಚ್ಚಾಗಬೇಕು. ಉತ್ತಮ ಬೆಳವಣಿಗೆ ಮೂಲಕ ಸಮಾಜಕ್ಕೆ ಅತ್ಯುತ್ತಮ ಸೇವೆ ದೊರಕಿಸಿಕೊಡುವಂತಾಗಬೇಕು. ಬ್ಯಾಂಕ್ ಹೆಚ್ಚು ಶಾಖೆಗಳು ತೆರೆದರೆ ಆರ್ಥಿಕ ಚಟುವಟಿಕೆ ಹೆಚ್ಚಾಗುತ್ತದೆ. ದ್ವಾರಕಾನಾಥ್ ಮತ್ತವರ ತಂಡ ಶ್ರೀ ಚರಣ್ ಸೌಹಾರ್ದ ಕೋ ಆಪರೇಟೀವ್ ಬ್ಯಾಂಕ್ ಅನ್ನು ಅತ್ಯಂತ ದಕ್ಷತೆಯಿಂದ ಮುನ್ನಡೆಸುವ ಮೂಲಕ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.
ಖಾಸಗಿ ಸುದ್ದಿ ಸಂಸ್ಥೆಯ ಮುಖ್ಯಸ್ಥರಾದ ಹೆಚ್.ಆರ್. ರಂಗನಾಥ್ ಮಾತನಾಡಿ, ಸತ್ಯ, ಧರ್ಮದಿಂದ ಕೆಲಸ ಮಾಡುವುದು ಕಷ್ಟ. ಬ್ಯಾಂಕಿಂಗ್ ವಲಯಕ್ಕೆ ನಂಬಿಕೆಯೇ ಅತಿ ದೊಡ್ಡ ಕೊರತೆ ಇದೆ. ಸಹಕಾರಿ ಬ್ಯಾಂಕಿಂಗ್ ವಲಯದಲ್ಲಿ ಏನು ನಡೆಯಬಾರದು ಎಂದುಕೊಂಡಿದ್ದೇವೆಯೋ ಅದೆಲ್ಲವೂ ನಡೆದುಹೋಗಿದೆ. ಇಂತಹ ಕಾಲಘಟ್ಟದಲ್ಲಿ ಶ್ರೀ ಚರಣ್ ಸೌಹಾರ್ದ ಕೋ ಆಪರೇಟೀವ್ ಬ್ಯಾಂಕ್ ಇದಕ್ಕೆ ಅಪವಾದವಾಗಿದ್ದು, 10 ನೇ ಶಾಖೆಯ ಮೂಲಕ ಬ್ಯಾಂಕ್ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಈ ಸಂದರ್ಭದಲ್ಲಿ ಎಚ್ಚರಿಕೆ ಅಗತ್ಯವಾಗಿದೆ. ಬ್ಯಾಂಕಿನಲ್ಲಿ ಹಣ ಇಡುವವರು ಕಷ್ಟಪಟ್ಟು ದುಡಿದಿರುತ್ತಾರೆ ಎಂಬುದನ್ನು ಮರೆಯಬಾರದು ಎಂದರು. ಜನತೆಗೆ ಹಾಗು ಬ್ಯಾಂಕಿನ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸವನ್ನು ಮಾಡಿಕೊಂಡು ಹೋದಾಗ ಮಾತ್ರ ಸಹಕಾರಿ ಬ್ಯಾಂಕ್ ಗಳು ಇನ್ನು ಎತ್ತರಕ್ಕೆ ಬೆಳೆಯಲು ಸಹಕಾರಿಯಾಗಲಿದೆ ಎಂದರು.
ಚರಣ್ ಸೌಹಾರ್ದ ಕೋ ಆಪರೇಟೀವ್ ಬ್ಯಾಂಕ್ ನ ಸಂಸ್ಥಾಪಕ ಅಧ್ಯಕ್ಷ ಬಿ.ವಿ. ದ್ವಾರಕಾನಾಥ್, ಗಾಯಾತ್ರಿ ದ್ವಾರಕಾನಾಥ್, ನಿರ್ದೇಶಕರಾದ ಎಂ. ಗೋಪಿನಾಥ್, ಉಪಾಧ್ಯಕ್ಷರಾದ ಶುಭಪ್ರದ, ಹಿರಿಯ ವ್ಯವಸ್ಥಾಪಕರಾದ ಟಿ.ಎನ್. ಗೀತಾ ಮತ್ತಿತರರು ಉಪಸ್ಥಿತರಿದ್ದರು.