ಬೆಂಗಳೂರು: ಸರ್ ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿರುವ ಕಗ್ಗದಾಸಪುರ ಕೆರೆಯ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಗಂಭೀರ ಆರೋಪ ಮಾಡಿದರು.
ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮೋಹನ್ ದಾಸರಿ, ಸಿ ವಿ ರಾಮನ್ ನಗರ ಬಿಜೆಪಿ ಶಾಸಕ ಎಸ್ ರಘು 2009 ರಿಂದಲೇ ಕಗ್ಗದಾಸಪುರ ಕೆರೆಯ ಅಭಿವೃಧ್ದಿ ಮಾಡಲು ಮುಂದಾಗಿದ್ದು, 16 ವರ್ಷಗಳಾದರೂ ಕೆರೆಯ ಪರಿಸ್ಥಿತಿ ಹಾಗೇ ಇದೆ, ಆಮೆಗತಿಯಲ್ಲಿ ಸಾಗಿದ್ದರೂ ಈವರೆಗೆ ಮುಗಿಯಬೇಕಿತ್ತು. ಕೋಟಿ ಕೋಟಿಗಳು ಖರ್ಚಾಗುತ್ತಲೇ ಇದೆ, ಕೆಲಸಗಳು ಮಾತ್ರ ಮುಂದೆ ಹೋಗುತ್ತಿಲ್ಲ, ಹಳೇ ಬಿಲ್ಲು, ಕೆಲಸಗಳಾಗದಿದ್ದರೂ ನಕಲಿ ಬಿಲ್ಲುಗಳು, ಕೆರೆಯ ಪ್ರಭಾವಿಗಳ ಅತಿಕ್ರಮಣಗಳನ್ನು ತೆರವುಗೊಳಿಸದಿರುವುದೇ ಕಗ್ಗದಾಸಪುರ ಕೆರೆಯ ಅಭಿವೃದ್ಧಿ ಅನ್ನಬೇಕಷ್ಟೇ. 2017 ರಲ್ಲಿ ಸ್ಥಳೀಯ ನಾಗರೀಕರು ಸೇರಿ ಕೆರೆ ಸ್ವಚ್ಛಗೊಳಿಸಲು ಮುಂದಾಗಿದ್ದರು, ನಮ್ಮೆಲ್ಲರ 26 ವಾರಗಳ ಪ್ರಯತ್ನದಿಂದ ಕಣ್ತೆರೆದ ಸಮ್ಮಿಶ್ರ ಸರ್ಕಾರ ಅಭಿವೃಧ್ದಿಗೆ ಅಂತ 2019 ರಲ್ಲಿ ಹಣ ಬಿಡುಗಡೆ ಮಾಡಿತ್ತು. ಮಾಹಿತಿ ಹಕ್ಕಿನ ಅನ್ವಯದಡಿ 2019 -20 ರಲ್ಲಿ 8 ಕೋಟಿ ಮತ್ತು 2023-24 ರಲ್ಲಿ 4 ಕೋಟಿ ಮಂಜೂರು ಮಾಡಲಾಗಿದೆ ಮತ್ತು ಎಸ್ಟಿಪಿಗೆ ಮಾತ್ರವೇ 27 ಕೋಟಿ ಮಂಜೂರು ಮಾಡಲಾಗಿತ್ತು ಎಂದು ಮೋಹನ್ ದಾಸರಿ ಹೇಳಿದರು.
ಕಳೆದ ಮೂರು ವರ್ಷದಲ್ಲಿ 12 ಕೋಟಿ ರೂಪಾಯಿ ಅನುದಾನ ಕಗ್ಗದಾಸನಪುರ ಅಭಿವೃದ್ಧಿಗೆ ನೀಡಲಾಗಿದೆ. 2021 ರಲ್ಲಿ ಶಾಸಕ ಎಸ್ ರಘು ಕಗ್ಗದಾಸಪುರ ಕೆರೆಯ ಅಭಿವೃಧ್ದಿಯ ಬಗ್ಗೆ ಮಾತನಾಡುವಾಗ, 45 ದಿನದಲ್ಲಿ ಹೂಳೆತ್ತುವ ಕೆಲಸ ಮುಗಿಯಲಿದೆ ಮತ್ತು ಇತರೆ ಕೆಲಸಗಳನ್ನು ಮುಗಿಸಿ 6 ತಿಂಗಳಲ್ಲಿ ಸಂಪೂರ್ಣ ಅಭಿವೃಧ್ದಿ ಕೆಲಸಗಳನ್ನು ಮುಗಿಸಲಾಗುವುದೆಂದು ಮಾದ್ಯಮಗಳ ಮುಂದೆ ಹೇಳಿದ್ದರು, 2024 ರ ಜೂನಲ್ಲಿ ನಾವು ಸ್ಥಳ ಪರೀಷಲನೆ ಮಾಡಿದಾಗಲೂ ಕೆರೆಯ ಪರಿಸ್ಥಿತಿ ಅದೇ ರೀತಿಯಿದೆ. ಕೋಟಿ ಕೋಟಿ ಹಣ ಮಾತ್ರ ಸಮಯ ಸಮಯಕ್ಕೆ ಖರ್ಚು ಮಾತ್ರ ಆಗುತ್ತಲೇ ಇದೆ, ಕೆರೆಯ ಅಭಿವೃಧ್ದಿ ಹೆಸರಲ್ಲಿ ಶಾಸಕ ಎಸ್ ರಘು ಹಗಲು ದರೋಡೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಾಹಿತಿಯೊಂದಿಗೆ ಬಿಎಂಟಿಎಫ್ ಅಥವಾ ಲೋಕಾಯುಕ್ತಕ್ಕೆ ದೂರು ನೀಡುವುದಕ್ಕೆ ಮುಂದಾಗುತ್ತೇವೆ ಎಂದು ಹೇಳಿದರು.
ಬಿಬಿಎಂಪಿ ಕಾರ್ಪೊರೇಟರ್, ಶಾಸಕ, ಸಂಸದ ಎಲ್ಲರೂ ಬಿಜೆಪಿಯವರೇ ಇದ್ದರೂ, ಸರ್ಕಾರ ಕೂಡ ಬಿಜೆಪಿಯದ್ದೇ ಇದ್ದಾಗಲೂ ಕೆರೆ ಅಭಿವೃದ್ಧಿಯನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುವುದು, ಅಕ್ರಮದ ಬಗ್ಗೆ ದೂರು ನೀಡಲಾಗುವುದು ಎಂದರು.
ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಜಗದೀಶ್ ಬಾಬು ಮಾತನಾಡಿ, ಕೆರೆ ಅಭಿವೃದ್ಧಿ ವಿಚಾರದಲ್ಲಿ ಏನೇನು ಅವ್ಯವಹಾರ ಆಗಿದೆ ಎನ್ನುವ ಮಾಹಿತಿ ಪಡೆದಿದ್ದೇವೆ, ಇದನ್ನು ಜನರಿಗೆ ತಿಳಿಸುತ್ತೇವೆ. 4 ಕೋಟಿ ರೂಪಾಯಿ ಪೋಲಾಗಿದೆ. ಇದು ಎಲ್ಲಿ ಹೋಗಿದೆ ಎಂದು ತಿಳಿದುಕೊಳ್ಳುವುದು ಜನರ ಹಕ್ಕು. ಜನರಿಗೆ ಈ ಬಗ್ಗೆ ಮಾಹಿತಿ ಕೊಡಲಿ ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿ ಮುಖಂಡ ಹರಿಹರನ್ ಹಾಜರಿದ್ದರು.