ಹಾಸನ (ಆಲೂರು) : ಪ್ರಕೃತಿ ಮಾನವನ ಅವಶ್ಯಕತೆಗಳನ್ನೆಲ್ಲಾ ಪೂರೈಸುತ್ತದೆ ಆದರೆ ದುರಾಸೆಗಳನ್ನಲ್ಲ ಎಂದು ರಾಷ್ಟçಪಿತ ಮಹಾತ್ಮ ಗಾಂಧೀಜಿಯವರೇ ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ದುರಾಸೆಗೊಳಗಾಗಿ ಪಕೃತಿ ವಿನಾಶ ಮಾಡದೇ ಪರಿಸರ ಕಾಳಜಿಯನ್ನು ನಾವೆಲ್ಲಾ ಸೇರಿ ಮಾಡಬೇಕಿದೆ, ಇದು ನಮ್ಮೆಲ್ಲರ ಹೊಣೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಸಹಾಯಕ ಆಯುಕ್ತ ಎಂ.ಬಾಲಕೃಷ್ಣ ಅಭಿಪ್ರಾಯಪಟ್ಟರು.
ಅವರು ಆಲೂರು ತಾಲ್ಲೂಕು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಆಲೂರು ಹಾಗೂ ಭೈರಾಪುರದ ಬೆಥಸ್ಥ ಶಿಕ್ಷಣ ಸಂಸ್ಥೆ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಮಾತನಾಡಿ ಗಿಡಗಳಿದ್ದರೆ, ಕಾಡು, ಕಾಡಿದ್ದರೆ ನಾಡು ಆದರೆ ನಮ್ಮ ನಮ್ಮ ಅಗತ್ಯಗಳಿಗೆ ಕಾಡುಗಳನ್ನು ಕಡಿದು ನಾಶಗೈದು ಪ್ರಕೃತಿ ಅಸಮಾನತೆಗೆ ನಾವೇ ಕಾರಣವಾಗಿ ವನ್ಯ ಜೀವಿಗಳನ್ನು ಅವಸಾನದಂಚಿಗೆ ತಂದು ನಿಲ್ಲಿಸಿದ್ದೇವೆ. ಹಳ್ಳಿ, ನಗರ, ರಾಜ್ಯ, ದೇಶ, ವಿದೇಶಗಳೆನ್ನದೇ ಪ್ರತಿಯೊಬ್ಬ ಪ್ರಜೆಯೂ ಸಹ ಪರಿಸರ ಕಾಳಜಿಯನ್ನು ಮೈಗೂಡಿಸಿಕೊಂಡು ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಅರಣ್ಯೀಕರಣಗೊಳಿಸಿ ಪ್ರಕೃತಿಯನ್ನು ಪ್ರಫುಲ್ಲಗೊಳಿಸಬೇಕಿದೆ ಎಂದರು.
ತಾಲ್ಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್.ಉಪ್ಪಾರ್ ಮಾತನಾಡಿ ಪರಿಸರ ದಿನಾಚರಣೆ ಕೇವಲ ಜೀನ್ ೫ ಅಥವಾ ಜೂನ್ ಮಾಹೆಗೆ ಸೀಮಿತವಾಗುವುದಲ್ಲ ವರ್ಷದುದ್ದಕ್ಕೂ ನಿರಂತರ ಪ್ರಕ್ರಿಯೆಯಾಗಬೇಕಿದೆ. ಜಗತ್ತಿನ ಸಕಲ ಜೀವಿಗಳ ಉಸಿರಾಗಿರೋ ಗಿಡಮರಗಳ ಪೋಷಣೆ ನಿತ್ಯ ನಿರಂತರವಾಗಬೇಕು. ಪ್ರಕೃತಿಯಲ್ಲಿನ ಆಹಾರ ಸರಪಳಿ ನಿಯಮಿತವಾಗಿ ಸಾಗಬೇಕಾದರೆ ಪರಿಸರ ಸಂರಕ್ಷಣೆಯ ತುರ್ತು ಬಹಳಷ್ಠಿದೆ. ಈಗಾಗಲೇ ಪ್ರಕೃತಿ ನಾಶಗೈದು ಅತಿಯಾದ ಉಷ್ಣತೆಯಲ್ಲಿ ಬೇಯುತ್ತಿದ್ದೇವೆ. ಇಡೀ ಭೂಮಿ ಬಿಸಿ ತಾಪವನ್ನು ಅನುಭವಿಸುತ್ತಿದೆ. ಎಷ್ಟೋ ಜೀವಜಂತುಗಳು ಭೂಮಿಯ ಅನಿಯಮಿತ ತಾಪಮಾನಕ್ಕೆ ತತ್ತರಿಸಿ ಜೀವನ್ಮರಣಗಳ ಮಧ್ಯೆ ಸಿಲುಕಿವೆ. ನಾವೆಲ್ಲಾ ಎಚ್ಚೆತ್ತುಕೊಂಡು ಪ್ರಕೃತಿ ರಕ್ಷಣೆಗೆ ತೊಡಗಿಸಿಕೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಗೈಡ್ ಕ್ಯಾಪ್ಟನ್ ಪ್ರಿಯಾಂಕ, ಪ್ರದೀಪ್ ಗೌಡ, ಬೆಥಸ್ಥ ಶಾಲಾ ಮಕ್ಕಳು ಸೇರಿದಂತೆ ಹಲವರು ಹಾಜರಿದ್ದರು.