ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಬಿಗಿಯಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಖಾಸಗಿ ಹೋಮಿಯೋಪಥಿಕ್ ವೈದ್ಯಕೀಯ ಮಹಾ ವಿದ್ಯಾಲಯಗಳ ಆಡಳಿತ ಸಂಘದ ವತಿಯಿಂದ ಡಾ.ಬಿಆರ್.ಅಂಬೇಡ್ಕರ್ ಭವನದಲ್ಲಿ ಹಮಿಕೊಂಡಿದ್ದ ವಿಶ್ವ ಹೋಮಿಯೋಪತಿ ದಿನಾಚರಣೆ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ನಕಲಿ ವೈದ್ಯಕೀಯ ಚಿಕಿತ್ಸೆ ನೀಡುವುದು ಕಾನೂನು ಬಾಹಿರ
ಇತ್ತೀಚಿನ ದಿನಗಳಲ್ಲಿ ನಕಲಿ ವೈದ್ಯರ ಹಾವಳಿ ವ್ಯಾಪಕವಾಗಿ ಕೇಳಿಬರುತ್ತಿದೆ. ಯಾವುದೇ ವೈದ್ಯಕೀಯ ಕೋರ್ಸ್ ಮುಗಿಸದೆ ಇರುವವರು ಎಲ್ಲೆಂದರಲ್ಲಿ ಕ್ಲಿನಿಕ್ಗಳನ್ನು ತೆರೆದು ಚಿಕಿತ್ಸೆ ನೀಡುತ್ತಾರೆ. ಇದರ ಬಗ್ಗೆ ಸರ್ಕಾರಕ್ಕೆ ಸಾಕಷ್ಟು ದೂರುಗಳು ಬಂದಿವೆ ಎಂದು ಹೇಳಿದರು.
ಗ್ರಾಮೀಣ ಭಾಗದ ಜನರ ಅಮಾಯಕತೆಯನ್ನು ಕೆಲವರು ದುರುಪಯೋಗಪಡಿಸಿಕೊಂಡು ನಕಲಿ ಚಿಕಿತ್ಸೆ ನೀಡುತ್ತಾರೆ. ಇದು ಕಾನೂನು ಬಾಹಿರ ಎಂದು ಗೊತ್ತಿದ್ದರೂ ಕೆಲವರು ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನು ಮುಂದೆ ಇದಕ್ಕೆ ಶಾಶ್ವತವಾದ ಕಡಿವಾಣ ಬೀಳಲಿದೆ ಎಂದರು. ಕೇವಲ ಸರ್ಕಾರದಿಂದ ಮಾತ್ರ ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟಲು ಸಾಧ್ಯವಿಲ್ಲ. ಇದಕ್ಕೆ ಹೋಮಿಯೋಪಥಿಕ್ ವೈದ್ಯಕೀಯ ಮಹಾ ವಿದ್ಯಾಲಯಗಳ ಸಂಘದ ಸಹಭಾಗಿತ್ವವೂ ಅಷ್ಟೇ ಮುಖ್ಯ ಎಂದು ಪಾಟೀಲ್ ಹೇಳಿದರು. ಹೋಮಿಯೋಪತಿ ವೈದ್ಯರು ನಮ್ಮ ಜೊತೆ ಕೈ ಜೋಡಿಸಿದರೆ ಇಂಥ ದಂಧೆಯನ್ನು ತಡೆಗಟ್ಟಬಹುದು. ಕೆಲವು ಸಂದರ್ಭಗಳಲ್ಲಿ ನಕಲಿ ವೈದ್ಯರುಗಳಿಂದ ಅಮಾಯಕರ ಪ್ರಾಣಕ್ಕೂ ಕುತ್ತು ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಾರ್ವಜನಿಕರ ದೂರುಗಳಿದ್ದರೆ ಸರ್ಕಾರಕ್ಕೆ ಮಾಹಿತಿ ನೀಡಲು ಮನವಿ
ಹೋಮಿಯೋಪತಿ ಹಾಗು ಅಲೋಪತಿ ಬ್ರಿಜ್ ಕೋರ್ಸ್ (bridge course) ಮಾಡಲು ಸರ್ಕಾರ ಅವಕಾಶ ಮಾಡಿಕೊಡಬೇಕೆಂದು ಇದೇ ಸಂದರ್ಭದಲ್ಲಿ ಸಚಿವರಿಗೆ ಸಂಘದ ವತಿಯಿಂದ ಮನವಿ ಮಾಡಲಾಯಿತು.
ಇದಕ್ಕೆ ಸಚಿವರು ಈ ಸಮಸ್ಯೆ ಇತ್ಯರ್ಥವಾಗಬೇಕಾದರೆ ಹೋಮಿಯೋಪತಿ ವೈದ್ಯರ ಸಂಘದವರು ರಾಷ್ಟ್ರೀಯ ವೈದ್ಯಕೀಯ ಆಯೋಗ ಹಾಗು ಕೇಂದ್ರ ಸರ್ಕಾರ ಸರ್ಕಾರಕ್ಕೆ ಮನವಿ ಕೊಡಬೇಕು ಎಂದು ಸಲಹೆ ಮಾಡಿದರು. ಅಂತಿಮವಾಗಿ ಇದನ್ನು ಕೇಂದ್ರವೇ ನಿರ್ಧರಿಸಬೇಕಾಗಿರುವುದರಿಂದ ರಾಜ್ಯ ಸರ್ಕಾರದ ಪಾತ್ರ ಇದರಲ್ಲಿ ಏನೂ ಇಲ್ಲ ಎಂದು ಪಾಟೀಲ್ ಪುನರುಚ್ಚರಿಸಿದರು.
ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಹೋಮಿಯೋಪತಿಯ ಪ್ರತಿನಿಧಿಯೊಬ್ಬರನ್ನು ಸಿಂಡಿಕೇಟ್ ಸದಸ್ಯನಾಗಿ ನೇಮಿಸಬೇಕೆಂದು ಸಂಘದ ಪ್ರತಿನಿಧಿಗಳು ಮನವಿ ಮಾಡಿದರು. ಇದಕ್ಕೂ ಸಕಾರಾತವಾಗಿ ಸ್ಪಂದಿಸಿದ ಶರಣಪ್ರಕಾಶ್ ಪಾಟೀಲ್ ಅವರು ಈ ಕುರಿತು ವಿಶ್ವವಿದ್ಯಾನಿಲಯದ ಕುಲಪತಿಗಳ ಜೊತೆ ಮಾತುಕತೆ ನಡೆಸುವ ಆಶ್ವಾಸನೆಯನ್ನು ನೀಡಿದರು.
ಹೋಮಿಯೋಪತಿಯಲ್ಲಿರುವ ಸಮಸ್ಯೆಗಳ ಬಗ್ಗೆ ಸಿಎಂ ಜೊತೆ ಚರ್ಚೆ : ದಿನೇಶ್ ಗುಂಡೂರಾವ್
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಪ್ರಸ್ತುತ ಹೋಮಿಯೋಪತಿ ಚಿಕಿತ್ಸಾ ಪದ್ಧತಿ ಎಲ್ಲರಿಗೂ ಬೇಕಾಗಿದೆ, ಸರ್ಕಾರಗಳ ಬೇಜವಾಬ್ದಾರಿತನಗಳಿಂದ ಹೋಮಿಯೋಪತಿಯನ್ನು ಮೂಲೆಗುಂಪಾಗಿ ಮಾಡಿದ್ದಾರೆ, ಕಾಂಗ್ರೆಸ್ ಸರ್ಕಾರದಲ್ಲಿ ಇಲಾಖೆಯ ಸಾಧಕ ಬಾಧಕಗಳ, ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಚರ್ಚಿಸಲಾಗುತ್ತದೆ ಎಂದರು.
ಹೋಮಿಯೋಪತಿ ಪುರಾತನ ಕಾಲಗಳಿಂದಲೂ ಸಹ ಬೆಳೆದುಕೊಂಡು ಬಂದಿರುವ ಪದ್ಧತಿಯಾಗಿದ್ದು, ರೋಗಿಗಳಿಗೆ ಪ್ರಥಮ ಚಿಕಿತ್ಸೆಯನ್ನು ಹೋಮಿಯೋಪತಿ ವೈದ್ಯರು ನೀಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಹೋಮಿಯೋಪತಿ ಪದ್ಧತಿಯಲ್ಲಿರುವ ಹಾಗೂ ಇಲಾಖೆಯಲ್ಲಿರುವ ಸಮಸ್ಯೆಗಳ ಬಗ್ಗೆ ಶೀಘ್ರದಲ್ಲಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಲಾಗುತ್ತದೆ ಎಂದು ಸಂಸ್ಥೆಗೆ ಅಭಯ ಹಸ್ತವನ್ನು ನೀಡಿದರು. ಈ ಎಲ್ಲದರ ನಡುವೆ ಸಂಸ್ಥೆಯ ಜೊತೆ ಒಂದು ಸಭೆಯನ್ನು ಸಹ ಕರೆದು ಅದರಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮೆಡಿಕಲ್ ಕೋರ್ಸ್ ಗೆ ನೀಟ್ ಪರೀಕ್ಷೆ ಅಳವಡಿಕೆ, ಹೋಮಿಯೋಪತಿಗೆ ದಾಖಲಾಗದ ವಿದ್ಯಾರ್ಥಿಗಳು
ಇದೆ ವೇಳೆ ಕರ್ನಾಟಕ ಖಾಸಗಿ ಹೋಮಿಯೋಪತಿಕ್ ವೈದ್ಯಕೀಯ ಮಹಾವಿದ್ಯಾಲಯ ಸಂಘದ ರಾಷ್ಟ್ರೀಯ ಅಧ್ಯಕ್ಷ ವಿನೋದ್ ದೊಡ್ಡಣ್ಣನವರ್ ಮಾತನಾಡಿ, ಈಗಿನ ಪ್ರಸ್ತುತ ವಿದ್ಯಮಾನಗಳಿಗೆ ತಕ್ಕಂತೆ ಅಲೋಪತಿ ಮುಂದೆ ಹೋಮಿಯೋಪತಿ ಚಿಕಿತ್ಸಾ ವಿಧಾನ ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ, ಯಾವ ಸರ್ಕಾರಗಳು ಸಹ ಹೋಮಿಯೋಪತಿಗೆ ಮುತುವರ್ಜಿಯನ್ನು ವಹಿಸುತ್ತಿಲ್ಲ, ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆಯನ್ನು ನಡೆಸುತ್ತಿಲ್ಲ, ಹೀಗಾಗಿ ಹೋಮಿಯೋಪತಿ ಮೂಲೆಗುಂಪಾಗಿದೆ, ರೋಗಿಗಳಿಗೆ ಪ್ರಥಮ ಚಿಕಿತ್ಸೆಯನ್ನು ಹೋಮಿಯೋಪತಿಯವರೇ ನೀಡುತ್ತಿರುವುದು ಬಹಳ ವಿಶೇಷವಾದಂತಹ ಸಂಗತಿಯಾಗಿದೆ ಎಂದರು. ಕೆಲವೊಂದು ಘಟನೆಗಳಿಗೆ ಸಂಬಂಧಿಸಿದಂತೆ ಹೋಮಿಯೋಪತಿಯು ವೈದ್ಯರನ್ನು ದೂಷಣೆ ಮಾಡಿ ಪ್ರಕರಣಗಳಲ್ಲಿ ಸಿಲುಕಿಸಿ ಕಾನೂನು ಕಟ-ಕಟೆಯಲ್ಲಿ ನಿಲ್ಲಿಸುತ್ತಿರುವುದು ದುರಂತ ಸಂಗತಿ ಆಗಿದೆ ಎಂದರು.
ಸರ್ಕಾರದ ಮುಂದೆ ಸಂಸ್ಥೆ ವತಿಯಿಂದ ಹಲವು ಬೇಡಿಕೆಗಳನ್ನು ಇಟ್ಟಿದ್ದು ಅದರಲ್ಲಿ ಪ್ರಮುಖವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೋಮಿಯೋ ಪದ್ಧತಿಯನ್ನು ಅಳವಡಿಸುವುದು ಹಾಗೂ ಹೊಸದಾಗಿ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಸಹ ಹೋಮಿಯೋ ಕೇಂದ್ರಗಳನ್ನು ತೆರೆಯುವುದು ಹಾಗೂ ಪ್ರತ್ಯೇಕವಾಗಿ ಹೋಮಿಯೋ ವೈದ್ಯರನ್ನು ನಿಯೋಜನೆ ಮಾಡುವುದು ಬಹಳ ಮುಖ್ಯವಾಗಿದ್ದು ಅಲ್ಲದೆ ಮೆಡಿಕಲ್ ಕೋರ್ಸ್ ಗಳಿಗೆ ಮಾಡುವ ನೀಟ್ ಪರೀಕ್ಷೆಯನ್ನು ಹೊರತುಪಡಿಸಿದರೆ ಹೋಮಿಯೋ ಕೋರ್ಸ್ ಗಳಿಗೆ ಹೆಚ್ಚಿನದಾಗಿ ವಿದ್ಯಾರ್ಥಿಗಳು ಸೇರುತ್ತಾರೆ ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಹಲವು ಸರ್ಕಾರಗಳಿಗೆ ಈಗಾಗಲೇ ಹೋಮಿಯೋಪತಿಯಲ್ಲಿ ಇರತಕ್ಕಂತ ಸಮಸ್ಯೆಗಳ ಬಗ್ಗೆ ಹಲವು ಬಾರಿ ಹಲವು ವರ್ಷಗಳಿಂದ ತಮ್ಮ ನಿವೇದನೆಗಳನ್ನು ಮಾಹಿತಿಗಳನ್ನು ಸರ್ಕಾರದ ಮುಂದೆ ಇಟ್ಟರೂ ಸಹ ಇಲ್ಲಿಯ ತನಕ ಯಾವುದೇ ಪ್ರಯೋಜನವಾಗಿಲ್ಲ ಮೊದಲನೇದಾಗಿ ಮೆಡಿಕಲ್ ಕಾಲೇಜುಗಳಿಗೆ ನೀಟ್ ಪರೀಕ್ಷೆಯನ್ನು ಅಳವಡಿಸಿರುವುದರಿಂದ ಹೋಮಿಯೋಪತಿಗೆ ದೊಡ್ಡ ಕುತ್ತುಬದಂತಾಗಿದೆ, ಯಾರು ಸಹ ಹೋಮಿಯೋಪತಿಗೆ ಸೇರಲು ಮುಂದೆ ಬರುತ್ತಿಲ್ಲ, ರಾಜ್ಯದಲ್ಲಿ ಒಟ್ಟು 18 ಹೋಮಿಯೋಪತಿ ಕಾಲೇಜುಗಳಿದ್ದು ಅದರಲ್ಲಿ 17 ಕಾಲೇಜುಗಳು ಖಾಸಗಿದ್ದಾಗಿದ್ದು ಒಂದು ಕಾಲೇಜು ಮಾತ್ರ ಸರ್ಕಾರಿ ಸೌಮ್ಯದಲ್ಲಿ ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಹೋಮಿಯೋಪಥಿಕ್ ವೈದ್ಯಕೀಯ ಮಹಾ ವಿದ್ಯಾಲಯಗಳ ಆಡಳಿತ ಸಂಘದ ಪ್ರಮುಖರಾದ ವಿನೋದ್ ದೊಡ್ಡಣ್ಣನವರ್, ಸಂಸ್ಥೆಯ ಖಜಾಂಚಿ ಡಾ. ಬಾಮನೆ ಕೆ.ಚಂದ್ರಶೇಖರ್, ಡಾ. ಆನಂದ್ ಕುಲಕರ್ಣಿ, ಪ್ರಭಾಕರ್ ಸೇರಿದಂತೆ ಸಾವಿರಾರು ಜನ ಹೋಮಿಯೋಪತಿ ವಿದ್ಯಾರ್ಥಿಗಳು ಅಧ್ಯಾಪಕರು ಸಂಸ್ಥೆಗಳ ಪ್ರಿನ್ಸಿಪಾಲ್ಗಳು, ಉಪಸ್ಥಿತರಿದ್ದರು.