ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ಸಂಸ್ಥೆಯು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈಗಾಗಲೇ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 40 ವರ್ಷ ಮೇಲ್ಪಟ್ಟ ಸುಮಾರು 11,200 ಸಿಬ್ಬಂದಿಗಳಿಗೆ ಹೃದಯ ಸಂಬಂಧಿತ ತಪಾಸಣೆಯನ್ನು ಮಾಡಲಾಗಿದೆ.
ಬೆಂಗಳೂರು ನಗರದ ಜನದಟ್ಟಣೆಯ ಸಾರಿಗೆ ವ್ಯವಸ್ಥೆಯಲ್ಲಿ ಸದಾ ಕರ್ತವ್ಯ ನಿರತ ಸಿಬ್ಬಂದಿಗಳ ಶ್ವಾಸಕೋಶ ಸಂಬಂಧಿತ, ಉಸಿರಾಟ ಕಾಯಿಲೆ, ಅಲರ್ಜಿಗಳಿಗೆ ಸಂಬಂಧಿಸಿದ ಸ್ಕ್ರೀನಿಂಗ್ ಮತ್ತು ಸುಧಾರಿತ ಪರೀಕ್ಷೆಗಳನ್ನು ಮಾಡಬೇಕೆಂಬ ಕಾಳಜಿಯೊಂದಿಗೆ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರನ್ .ಆರ್., ಭಾ.ಆ.ಸೇ. ರವರು ಹಾಗೂ ವಾಯು ಚೆಸ್ಟ್ ಅಂಡ್ ಸ್ಲೀಪ್ ಸೆಂಟರ್ ಸ್ಥಾಪಕರು ಹಾಗೂ ನಿರ್ದೇಶಕರಾದ ಡಾ. ರವೀಂದ್ರ ಎಂ. ಮೆಹ್ತಾ ರವರು ಚರ್ಚಿಸಿ, ಈ ತಪಾಸಣಾ ಶಿಬಿರವನ್ನು ಆಯೋಜಿಸಿರುವರು.
ಜಯನಗರದ 5ನೇ ಬ್ಲಾಕ್ ದಲ್ಲಿರುವ ವಾಯು ಚೆಸ್ಟ್ ಅಂಡ್ ಸ್ಲೀಪ್ ಸೆಂಟರ್ನಲ್ಲಿ ಬೆಂ.ಮ.ಸಾ.ಸಂಸ್ಥೆಯ 50 ಸಿಬ್ಬಂದಿಗಳಿಗೆ ಶ್ವಾಸಕೋಶ ಮತ್ತು ಉಸಿರಾಟದ ರೋಗಗಳ ಆರಂಭಿಕ ಪತ್ತೆಗಾಗಿ ಉಚಿತ ತಪಾಸಣಾ ಶಿಬಿರವನ್ನು ಪ್ರಾರಂಭಿಸಲಾಯಿತು. ಈ ಶಿಬಿರವು ಪ್ರತಿ ಶನಿವಾರ ಮತ್ತು ಭಾನುವಾರದಂದು ದಿನಕ್ಕೆ 50 ಸಿಬ್ಬಂದಿಗಳಂತೆ ಈ ಕೆಳಕಂಡ ಚಿಕಿತ್ಸೆಗಳನ್ನು ನಡೆಸಲಾಗುವುದು.
– ಅಧಿಕ ರಕ್ತದೊತ್ತಡ,
– ಆಮ್ಲಜನಕದ ಪ್ರಮಾಣ,
– ರಕ್ತದಲ್ಲಿ ಸಕ್ಕರೆಯ ಅಂಶ,
– ಶ್ವಾಸಕೋಶದ ಶಕ್ತಿ ಚೈತನ್ಯ,
– ಇ.ಎನ್.ಟಿ.(ಕಿವಿ, ಮೂಗು, ಗಂಟಲು),
– ಶ್ವಾಸಕೋಶದ ಎಕ್ಸರೇ,
– ಮತ್ತಿತರ ಉಸಿರಾಟ ಹಾಗೂ ಶ್ವಾಸಕೋಶ ಸಂಬಂಧಿತ ತಪಾಸಣೆ ಮತ್ತು ತಜ್ಞರೊಡನೆ ಸಮಾಲೋಚನೆ.
ಈ ಚಿಕಿತ್ಸೆಗಳನ್ನು ಮಾಡಿದ ಮೇಲೆ ಶ್ವಾಸಕೋಶದ ಸಂಬಂಧಿತ ಕಾಯಿಲೆಗಳು ಇದ್ದಲ್ಲಿ ಉಚಿತ ಆರಂಭಿಕ ಔಷಧಿ ಅಗತ್ಯಕ್ಕನುಗುಣವಾಗಿ ನೀಡಲಾಗುವುದು ಮತ್ತು ಉಸಿರಾಟದ ಸಮಸ್ಯೆಗಳು, ಅಲರ್ಜಿ ಮತ್ತು ನಿಯಂತ್ರಣ ವಿಧಾನಗಳ ಕುರಿತು ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಶ್ರೀಮತಿ ನಂದಿತಾ ಸಾಂಘಾಣಿ ರವರ ಮುಂದಾಳತ್ವದಲ್ಲಿ ಅರಿವು ನೀಡಲಾಗುತ್ತಿದೆ. ವ್ಯವಸ್ಥಾಪಕ ನಿರ್ದೇಶಕರು “ಸಂಸ್ಥೆಯ ಎಲ್ಲ ಸಿಬ್ಬಂದಿಗಳು ಈ ಉಚಿತ ತಪಾಸಣಾ ಶಿಬಿರದ ಸೌಲಭ್ಯವನ್ನು ಪಡೆದುಕೊಂಡು ಪ್ರತಿಯೊಬ್ಬರು ಆರೋಗ್ಯ ಚೆನ್ನಾಗಿಟ್ಟುಕೊಳ್ಳಬೇಕೆಂಬ ಸದುದ್ದೇಶದಿಂದ ಈ ವ್ಯವಸ್ಥೆಯನ್ನು ಕಲ್ಪಿಸಿರುತ್ತಾರೆ” ಎಂದರು.