ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಕಿ ಆಸ್ತಿ ತೆರಿಗೆ ಪಾವತಿಸುವವರಿಗಾಗಿ ಜಾರಿಗೊಳಿಸಿರುವ ಒಂದು ಬಾರಿ ಪರಿಹಾರ ಯೋಜನೆ(ಒಟಿಎಸ್)ಯು ಇದೇ ಜುಲೈ 31ಕ್ಕೆ ಮುಗಿಯಲಿದ್ದು, ನಾಗರೀಕರು ಕೂಡಲೆ ಇದರ ಸದುಪಯೋಗವನ್ನು ಪಡೆದುಕೊಳ್ಳಲು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪಾಲಿಕೆ ಕೇಂದ್ರ ಕಛೇರಿಯ ಮುಖ್ಯ ಆಯುಕ್ತರ ಕಛೇರಿಯಲ್ಲಿ ನಡೆದ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಒಂದು ಬಾರಿ ಪರಿಹಾರ ಯೋಜನೆಯಡಿ ಸುಮಾರು 4 ಲಕ್ಷ ಸುಸ್ತಿದಾರರು ಬರಲಿದ್ದು, ಈ ಪೈಕಿ ಇದುವರೆಗೆ 80 ಸಾವಿರ ಸುಸ್ತಿದಾರರು ಇದರ ಸದುಪಯೋಗ ಪಡೆದು ಬಾಕಿ ಆಸ್ತಿ ತೆರಿಗೆಯನ್ನು ಪಾವತಿಸಿದ್ದಾರೆ. ಉಳಿದ 3.20 ಲಕ್ಷ ಸುಸ್ತಿದಾರರಿಗೆ ಜುಲೈ 31 ರವರೆಗೆ ಮಾತ್ರ ಅವಕಾಶವಿದ್ದು, ಕೂಡಲೆ ಇದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.
1533 ಸಹಾಯವಾಣಿಗೆ ಕರೆ ಮಾಡಿ OTS ಬಗ್ಗೆ ಅಗತ್ಯ ಮಾಹಿತಿ ಪಡೆಯಿರಿ:
ಒಂದು ಬಾರಿ ಪರಿಹಾರ(OTS) ಯೋಜನೆಯಡಿ ಬಾಕಿ ಆಸ್ತಿ ತೆರಿಗೆ ಪಾವತಿಸುವವರಿಗೆ ಎಷ್ಟು ಪಾವತಿಸಬೇಕಿದೆ, ಎಲ್ಲಿ ಪಾವತಿಸಬೇಕು ಎಂಬುದು ಸೇರಿದಂತೆ ಇನ್ನಿತ್ಯಾದಿ ಗೊಂದಲಗಳಿದ್ದರೆ ಪಾಲಿಕೆಯ ಉಚಿತ ಸಹಾಯವಾಣಿ ಸಂಖ್ಯೆಯಾದ 1533ಗೆ ಕರೆ ಮಾಡಿ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.
ಡೆಂಘೀ ನಿಯಂತ್ರಣಕ್ಕೆ ಕ್ರಮವಹಿಸಿ:
ನಗರದಲ್ಲಿ ಡೆಂಘೀ ನಿಯಂತ್ರಣಕ್ಕಾಗಿ ಕಿರಿಯ ಆರೋಗ್ಯ ವೈದ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಎ.ಎನ್.ಎಂಗಳು, ಲಿಂಕ್ ವರ್ಕರ್ಸ್ಗಳು ಹಾಗೂ ಸ್ವಯಂ ಸೇವಕರನ್ನೊಳಗೊಂಡಂತೆ 3000ಕ್ಕೂ ಹೆಚ್ಚು ತಂಡಗಳನ್ನು ನಿಯೋಜಿಸಲಾಗಿದ್ದು, ನಗರಲ್ಲಿರುವ ಎಲ್ಲಾ 25 ಲಕ್ಷ ಮನೆಗಳಿಗೂ ಮನೆ-ಮನೆ ಭೇಟಿ ನೀಡಿ ಸಮೀಕ್ಷೆಯನ್ನು ನಡೆಸುವ ಜೊತೆಗೆ ಡೆಂಘೀ ನಿಯಂತ್ರಣ ಕುರಿತ ಬಿತ್ತಿಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಗರದಲ್ಲಿ 2024 ಜನವರಿಯಿಂದ ಇದುವರೆಗೆ 3815 ಡೆಂಘೀ ಪ್ರಕರಣಗಳು ಕಂಡುಬಂದಿದ್ದು, ಜುಲೈ 1 ರಿಂದ 6ನೇ ತಾರೀಖಿನವರೆಗೆ 776 ಪ್ರಕರಣಗಳು ದೃಡಪಟ್ಟಿವೆ. ಪ್ರತಿನಿತ್ಯ ಸರಾಸರಿ 130 ರಿಂದ 140 ಪ್ರಕರಣಗಳು ದೃಢಪಡುತ್ತಿದ್ದು, ಹೆಚ್ಚು ಪ್ರಕರಣಗಳು ಕಂಡುಬರುವ ಪ್ರದೇಶಗಳಲ್ಲಿ ಔಷಧಿ ಸಿಂಪಡಣೆ ಹಾಗೂ ಫಾಗಿಂಗ್ ಅನ್ನು ಹೆಚ್ಚಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.
ಪಾಲಿಕೆ ಸಿಬ್ಬಂದಿ ಮನೆ-ಮನೆ ಭೇಟಿ ನೀಡಿ ನಾಗರೀಕರಲ್ಲಿ ಜಾಗೃತಿ ಮೂಡಿಸಉವ ಕೆಲಸ ಮಾಡುತ್ತಿದ್ದಾರೆ, ನಾಗರೀಕರು ತಮ್ಮ-ತಮ್ಮ ಮನೆಗಳಲ್ಲಿ ಸೊಳ್ಳೆ ನಿಯಂತ್ರಣ ಕ್ರಮಗಳನ್ನು ತಪ್ಪದೆ ಅನುಸರಿಸಿದಲ್ಲಿ ಮಾತ್ರ ಡೆಂಘೀ ನಿಯಂತ್ರಿಸಲು ಸಾಧ್ಯವಾಗುತ್ತದೆ. ಡೆಂಘೀ ನಿಂತ್ರಣಕ್ಕೆ ನಾಗರೀಕರ ಸಹಕಾರವೇ ಪ್ರಮುಖ ಪಾತ್ರ ವಹಿಸಲಿದ್ದು, ಅದಕ್ಕೆ ಎಲ್ಲರ ಸಹಕಾರ ಅತ್ಯಗತ್ಯವಗಿದೆ ಎಂದು ತಿಳಿಸಿದರು.
ಮಳೆ ನಿಂತು-ನಿಂತು ಬರುತ್ತಿರುವ ಪರಿಣಾಮ ನೀರು ನಿಂತಲ್ಲೇ ನಿಂತು ಲಾರ್ವಾ ಉತ್ಪತ್ತಿಯಾಗಿ ಸೊಳ್ಳೆಗಳು ಹೆಚ್ಚಾಗುತ್ತಿವೆ. ಒಮ್ಮೆಲೆ ಜೋರಾಗಿ ಮಳೆ ಬಂದರೆ ಸೊಳ್ಳೆಗಳ ಉತ್ಪತ್ತಿ ತಾಣಗಳು ನಾಶವಾಗಲಿದೆ. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಪಡಿಸುವ ಉದ್ದೇಶದಿಂದ ಔಷಧಿ ಸಿಂಪಡಣೆ ಮಾಡುವ ಹಾಗೂ ಫಾಗಿಂಗ್ ಮಾಡುವ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಕಾರ್ಯನಿರ್ವಹಿಸಲು ವಲಯ ಆಯುಕ್ತರಿಗೆ ಸೂಚಿಸಲಾಗಿದೆ ಹೇಳಿದರು.
ರಸ್ತೆ ಗುಂಡಿಗಳನ್ನು ಮುಚ್ಚುವ ಕುರಿತು ವಿನೂತನ ತಂತ್ರಾಂಶ:
ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ರಸ್ತೆ ಗುಂಡಿಗಳನ್ನು ನಿರಂತರವಾಗಿ ಮುಚ್ಚಲಾಗುತ್ತಿದ್ದು, ಹೊಸದಾಗಿ ಸೃಷ್ಠಿಯಾಗುವ ರಸ್ತೆ ಗುಂಡಿಗಳನ್ನು ಗುರುತಿಸಿ ಮುಚ್ಚುವ ಕಾರ್ಯ ಮಾಡಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವ ನಿಟ್ಟಿನಲ್ಲಿ ವಿನೂತನ ತಂತ್ರಾಂಶವನ್ನು ಬಿಡುಗಡೆಗೊಳಿಸಲಾಗುತ್ತಿದೆ. ಈ ತಂತ್ರಾಂಶದಲ್ಲಿ ಅಧಿಕಾರಿಗಳು ಮಾತ್ರವಲ್ಲದೆ ನಾಗರೀಕರಿಗೂ ರಸ್ತೆ ಗುಂಡಿಗಳು ಬಿದ್ದಿರುವ ಬಗ್ಗೆ ಅಪ್ಲೋಡ್ ಮಾಡಲು ಅವಕಾಶ ನೀಡಲಾಗುವುದು. ಇದರಿಂದ ತ್ವರಿತಗತಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಕೆ. ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಶಿವಾನಂದ್ ಕಲ್ಕೆರೆ, ವಲಯ ಆಯುಕ್ತರಾದ ಡಾ. ಆರ್.ಎಲ್. ದೀಪಕ್, ರಮೇಶ್, ಶಿವಾನಂದ್ ಕಪಾಶಿ, ಸ್ನೇಹಲ್, ವಿನೋತ್ ಪ್ರಿಯಾ, ರಮ್ಯಾ, ಪ್ರೀತಿ ಗೆಹ್ಲೋಟ್, ವಲಯ ಮುಖ್ಯ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.