ಪೀಠಿಕೆ
ಮನೆ ಬಾಗಿಲಿಗೆ ತೆರಳಿ ಸಮಸ್ಯೆಗಳನ್ನ ಪರಿಹರಿಸಲು ಅಧಿಕಾರಿಗಳಿಗೆ ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಸೂಚನೆ
– ಬೆಂಗಳೂರು ಜಲಮಂಡಳಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ
– ಸೇವಾ ಕೇಂದ್ರಗಳ ವ್ಯಾಪ್ತಿಯಲ್ಲಿ ದೂರುಗಳನ್ನ ನಿರ್ವಹಿಸಿ
– ಹಿರಿಯ ಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸುವಂತೆ ಸೂಚನೆ
ಬೆಂಗಳೂರು: ಮಳೆಯಿಂದಾಗಿ ಹಾಗೂ ನೀರು ಸರಬರಾಜಿನಲ್ಲಿ ಉದ್ಭವವಾಗುವ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು ಮನೆ ಬಾಗಿಲಿಗೆ ತೆರಳಿ ದೂರುಗಳನ್ನು ನಿರ್ವಹಿಸಬೇಕು ಎಂದು ಬೆಂಗಳೂರು ಜಲಮಂಡಳಿ ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು ಜಲಮಂಡಳಿ ಕೇಂದ್ರ ಕಚೇರಿಯಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆ, ವೇಸ್ಟ್ ವಾಟರ್ ಮ್ಯಾನೇಜ್ಮೆಂಟ್, ಮುಖ್ಯಅಭಿಯಂತರರು, ವಲಯವಾರು ಅಭಿಯಂತರರು ಹಾಗೂ ಎಇಇಗಳ ಜೊತೆ ಸಭೆ ನಡೆಸಿ ಸೂಚನೆ ನೀಡಿದರು.
ಜೂನ್ ಮೊದಲ ವಾರದಲ್ಲಿ ಕಾವೇರಿ 5 ನೇ ಹಂತದ ಯೋಜನೆಯ ಪರಿಶೀಲನೆಗಾಗಿ ನಗರದಾದ್ಯಂತ ಶಟ್ಡೌನ್ ಮಾಡಲಾಗಿತ್ತು. ಆ ನಂತರ ನಗರದ ಕೆಲವು ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಅಲ್ಲದೇ, ಮಳೆನೀರಿನಿಂದಾಗಿ ಒಳಚರಂಡಿ ಉಕ್ಕಿ ಹರಿಯುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಿಯಾಶೀಲರಾಗಬೇಕು. ಬೇಸಿಗೆಯಲ್ಲಿ ನೀರಿನ ಸಮರ್ಪಕ ನಿರ್ವಹಣೆ ಮಾಡುವ ಮೂಲಕ ದೇಶದ ಗಮನ ಸೇಳೆಯುವಲ್ಲಿ ಯಶಸ್ವಿಯಾಗಿದ್ದೇವೆ. ಅದೇ ರೀತಿಯಲ್ಲಿ ಮಳೆಗಾಲವನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯತತ್ಪರರಾಗಬೇಕು ಎಂದು ಸೂಚಿಸಿದರು.
ವಲಯದ ಮುಖ್ಯ ಅಭಿಯಂತರರು ತಮ್ಮ ಅಧೀನ ಅಧಿಕಾರಿಗಳ ಜೊತೆ ತಂಡ ನಿರ್ಮಾಣ ಮಾಡಿಕೊಳ್ಳಬೇಕು. ನಗರದಲ್ಲಿ 143 ಸೇವಾ ಕೇಂದ್ರಗಳಿವೆ. ಈ ಸೇವಾ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವಂತಹ ದೂರುಗಳನ್ನು ಖುದ್ದಾಗಿ ಹಿರಿಯ ಅಧಿಕಾರಿಗಳು ಪರಿಹರಿಸಬೇಕು. ವಾರ್ಡ್ಗಳು ಹಾಗೂ ರಸ್ತೆಗಳ ವ್ಯಾಪ್ತಿಯಲ್ಲಿ ನೀರು ಸರಬರಾಜು ಆಗುತ್ತಿಲ್ಲ ಎನ್ನುವ ದೂರುಗಳು ಮರುಕಳಿಸದಂತೆ ಹಾಗೂ ಒಳಚರಂಡಿ ನೀರು ಹೊರಗಡೆ ಹರಿಯದಂತೆ ಕ್ರಮ ವಹಿಸಬೇಕು ಎಂದು ಜಲಮಂಡಳಿ ಅಧ್ಯಕ್ಷ ಡಾ ರಾಮ್ ಪ್ರಸಾತ್ ಮನೋಹರ್ ನಿರ್ದೇಶನ ನೀಡಿದರು.
ಮುಂದಿನ ವಾರದಿಂದ ಸೇವಾ ಕೇಂದ್ರಗಳ ವ್ಯಾಪ್ತಿಯಲ್ಲಿ ಪರಿಶೀಲನೆ ಪ್ರಾರಂಭಿಸಲಾಗುವುದು. ಹೆಚ್ಚಿನ ದೂರುಗಳು ಬಂದ ಪ್ರದೇಶಗಳಿಂದ ಪರಿಶೀಲನೆ ಪ್ರಾರಂಭಿಸುವುದಾಗಿ ಅಧ್ಯಕ್ಷರು ತಿಳಿಸಿದರು.