ಬೆಂಗಳೂರು: ನಗರದ ಸಿಲ್ಕ್ ಬೋರ್ಡ್ ಮೇಲ್ಸೇತುವೆಯನ್ನು (ಫ್ಲೈ ಓವರ್) ಸಂಚಾರಕ್ಕೆ ಮುಕ್ತಗೊಳಿಸಲು ಕಾಂಗ್ರೆಸ್ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಇದರಿಂದ ವಾಹನ ಸವಾರರು ನಿತ್ಯವೂಕಿಲೊಮೀಟರ್ ಗಟ್ಟಲೆ ಸಂಚಾರ ದಟ್ಟಣೆ ಯಲ್ಲಿ ಸಿಲುಕುವಂತಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಅಶೋಕ್ ಮೃಂತ್ಯುಂಜಯ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸಿಲ್ಕ್ ಬೋರ್ಡ್ ಬಳಿ ನಿರ್ಮಿಸಿರುವಮೇಲ್ಸೇತುವೆ ಬಳಿ ರಾಜ್ಯ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಮೇಲ್ಸೇತುವೆಯ ತಳದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಪಕ್ಷದ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಅಶೋಕ್, 2018ರಲ್ಲಿ ಆರಂಭಗೊಂಡ
ಮೇಲ್ಸೇತುವೆ ಕಾಮಗಾರಿ, 2019ರಲ್ಲಿ ಪೂರ್ಣಗೊಳ್ಳಬೇಕಿತ್ತು. ಕಳೆದ ಹದಿನೈದು ದಿನಗಳ ಹಿಂದೆ ಕಾಮಗಾರಿ ಪೂರ್ಣಗೊಂಡಿದೆ. ಬೆಂಗಳೂರು ದಕ್ಷಿಣದಿಂದ ಪಶ್ಚಿಮ ಭಾಗಕ್ಕೆ, ಎಲೆಕ್ಟ್ರಾನಿಕ್ ಸಿಟಿ, ಮಡಿವಾಳ ಕಡೆ ಹೊರಡುವ ವಾಹನ ಸಂಚಾರರು ನಿತ್ಯವೂ ಸಂಚಾರ ದಟ್ಟಣೆಯಿಂದ ಪರದಾಡುವಂತಾಗಿದೆ ಎಂದರು.
ಸಿ.ಎಂ. ಸಿದ್ದರಾಮಯ್ಯ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ವಾರದೊಳಗೆ ಕ್ರಮವಹಿಸದಿದ್ದರೆ ಜನರೊಂದಿಗೆ ಸೇರಿ ನಾವೇ ಮೇಲ್ಸೇತುವೆಯನ್ನು ಸಂಚಾರ ಮುಕ್ತಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಮಾತನಾಡಿ, ಪ್ರತಿ ಸಿಗ್ನಲ್ ನಲ್ಲೂ ವಾಹನ ಸವಾರರು ಅರ್ಧಗಂಟೆ ನಿಲ್ಲಲೇಬೇಕಾದ ಪರಿಸ್ಥಿತಿ ಉಂಟಾಗಿದೆ. ಐ.ಟಿ ಉದ್ಯೋಗಿಗಳು ಸಂಚಾರ ದಟ್ಟಣೆಯಿಂದ ತೀರ ತೊಂದರೆಗೊಳಗಾಗಿದ್ದಾರೆ ಎಂದರು.
ಮೇಲ್ಸೇತುವೆ ಜನರ ಅನುಕೂಲಕ್ಕಾಗಿ ನಿರ್ಮಿಸಿದ್ದರೂ ಸಕಾಲಕ್ಕೆ ಸಂಚಾರ ಮುಕ್ತ ಮಾಡದೆ ಜನರ ಹಣ ವ್ಯರ್ಥ ಮಾಡಲಾಗುತ್ತಿದೆ. ಬ್ರ್ಯಾಂಡ್ ಬೆಂಗಳೂರು ಜನರಿಗೆ ಅನುಕೂಲ ಮಾಡಬೇಕೆ ವಿನಃ ನಷ್ಟವನ್ನಲ್ಲ. ಸಂಚಾರ ದಟ್ಟಣೆಯಿಂದ ಆಂಬುಲೆನ್ಸ್ ಸಹ ಕನಿಷ್ಠ ಇಪ್ಪತ್ತು ನಿಮಿಷ ನಿಲ್ಲಬೇಕಾದ ಸ್ಥಿತಿ ಉಂಟಾಗಿದೆ. ಜನರ ಸಮಯ ಮತ್ತು ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದೆ. ಮೇಲ್ಸೇತುವೆ ಸಂಚಾರ ಮುಕ್ತಗೊಳಿಸಿ, ಆದಷ್ಟು ಬೇಗ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ವೇಳೆ ಪಕ್ಷದ ಇನ್ನಿತರ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.