ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮಗ್ರ ತ್ಯಾಜ್ಯ ನಿರ್ವಹಣೆಗಾಗಿ ಹೆಚ್ಚು ಆದ್ಯತೆ ನೀಡಲಾಗುತ್ತಿದ್ದು, ಅದಕ್ಕಾಗಿ ಸಾಕಷ್ಟು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಆಡಳಿತಗಾರರಾದ ಎಸ್.ಆರ್ ಉಮಾಶಂಕರ್ ರವರು ತಿಳಿಸಿದರು.
ಬಿಬಿಎಂಪಿಯು ಸಿ40 ನಗರಗಳ ಸಹಯೋಗದಲ್ಲಿ “ಹವಾಮಾನ ಕ್ರಿಯೆ” ಕುರಿತಂತೆ ವಿಕಾಸ ಸೌಧದ ಕೊಠಡಿ ಸಂಖ್ಯೆ 419ರಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಕಾರ್ಯಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.ನಗರದಲ್ಲಿ ಘನತ್ಯಾಜ್ಯದ ಸಮಸ್ಯೆಯನ್ನು ನಿವಾರಣೆ ಮಾಡುವ ದೃಷ್ಠಿಯಿಂದ ಸಾಕಷ್ಟು ಉಪಕ್ರಮಗಳನ್ನು ಅಳವಡಿಸಿಕೊಂಡು ಅವುಗಳನ್ನೆಲ್ಲಾ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಸಮಗ್ರ ತ್ಯಾಜ್ಯ ನಿರ್ವಹಣೆಗಾಗಿ ಪಾಲಿಕೆಯ ನಾಲ್ಕು ದಿಕ್ಕುಗಳಲ್ಲಿ 50 ರಿಂದ 100 ಎಕರೆ ಸರ್ಕಾರಿ ಮಾಲಿತ್ವದ ಜಾಗವನ್ನು ರಾಜ್ಯ ಸರ್ಕಾರವು ಗುರುತಿಸಿದ್ದು, ಸದರಿ ಜಾಗವನ್ನು ಪಾಲಿಕೆಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.
ಹಸಿ, ಒಣ ತ್ಯಾಜ್ಯ ಕಡ್ಡಾಯವಾಗಿ ವಿಂಗಡಣೆ ಮಾಡುವ ಕೆಲಸವಾಗಬೇಕು
ನಗರದಲ್ಲಿ ಹಸಿ ಹಾಗೂ ಒಣ ತ್ಯಾಜ್ಯವನ್ನು ಕಡ್ಡಾಯವಾಗಿ ವಿಂಗಡಣೆ ಮಾಡುವ ಕೆಲಸವಾಗಬೇಕು. ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕವನ್ನು ನಗರದಲ್ಲಿ ಸ್ಥಾಪಿಸಲಾಗುತ್ತಿದ್ದು, ಅದಕ್ಕೆ ಶೀಘ್ರ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಪರಿಸರ ಮಾಲಿನ್ಯ ತಡೆಯಲು ನಾವು ಸಾಕಷ್ಟು ಯೋಜನೆಗಳನ್ನು ರೂಪಿಸಿಕೊಂಡು ಅವುಗಳನ್ನು ಕಾರ್ಯರೂಪಕ್ಕೆ ತರುವ ಕೆಲಸ ಮಾಡಬೇಕು. ನಗರದಾದ್ಯಂತ ಹಸಿರೀಕರಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಮನೆ ಹಾಗೂ ಕಟ್ಟಗಳಲ್ಲಿ ಹರಿಸೀಕರಣಕ್ಕೆ ಪ್ರಾಮುಖ್ಯತೆ ನೀಡಿ ಸಸಿಗಳನ್ನು ನೆಟ್ಟು ಬೆಳಸುವಂತಾಗಬೇಕು ಎಂದು ಹೇಳಿದರು.
*ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್* ರವರು ಮಾತನಾಡಿ, ಜಾಗತಿಕ ತಾಪಮಾನದಲ್ಲಿ ಸಾಕಷ್ಟು ಏರುಪೇರಾಗುತ್ತಿದ್ದು, ಇದರಿಂದ ಮಾಲಿನ್ಯ ಮೇಲೆ ತುಂಬಾ ಪರಿಣಾಮ ಬೀಳಲಿದೆ. ನಾವೆಲ್ಲರೂ ಸೇರಿ ಮಾಲಿನ್ಯವನ್ನು ನಿಯಂತ್ರಣ ಮಾಡಬೇಕು. ಇಲ್ಲವಾದಲ್ಲಿ ಯಾರಿಗೂ ಉಳಿಗಾಲವಿರುವುದಿಲ್ಲ ಎಂದು ಹೇಳಿದರು.
ನಗರದಲ್ಲಿ ಕಟ್ಟಡ ಭಗ್ನಾವಶೇಷಗಳನ್ನು ವಿಲೇವಾರಿ ಮಾಡುವ ಕ್ರಮವನ್ನು ನಾವು ಸರಿಪಡಿಸಬೇಕಿದೆ. ಎಲ್ಲೆಂದಲ್ಲಿ ಕಟ್ಟಡ ಭಗ್ನಾವಶೇಷಗಳನ್ನು ಹಾಕುವುದರಿಂದ ವಾಯು ಮಾಲಿನ್ಯ ಉಂಟಾಗುತ್ತದೆ. ಇದಕ್ಕೆ ಸೂಕ್ತ ರೀತಿಯ ಪ್ರಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.
ನಗರದಲ್ಲಿ ಒಂದು ವರ್ಷ ಬಿಡದೆ ಮಳೆ ಬರುತ್ತದೆ, ಈ ವರ್ಷ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಡೆಂಘೀ ಪ್ರಕರಣಗಳು ಕೂಡಾ ಹೆಚ್ಚಾಗುತ್ತಿವೆ. ಇದೆಲ್ಲವೂ ಸಮತೋಲನದಲ್ಲಿರಬೇಕಾದರೆ ಹವಾಮಾನ ಕ್ರಿಯೆಯಲ್ಲಿ ನಾವು ಸಾಕಷ್ಟು ಬದಲಾವಣೆಗಳನ್ನು ತರಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಹವಾಮಾನ ಕ್ರಿಯೆ ಅನುಷ್ಠಾನಕ್ಕಾಗಿ 2 ದಿನಗಳ ಕಾರ್ಯಾಗಾರ
ಬೆಂಗಳೂರು ಹವಾಮಾನ ಕ್ರಿಯಾ ಯೋಜನೆಯನ್ನು ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ ಶಿವಕುಮಾರ್ ರವರು ನವೆಂಬರ್ 2023 ರಲ್ಲಿ ಪ್ರಾರಂಭಿಸಿದರು. ಅದರ ಭಾಗವಾಗಿ ಹವಾಮಾನ ಕ್ರಿಯೆಯ ಅನುಷ್ಠಾನಕ್ಕಾಗಿ ಎರಡು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಬಿಬಿಎಂಪಿ, ಸಿ40 ನಗರಗಳು ಮತ್ತು ಸ್ಥಳೀಯ ಪಾಲುದಾರು, ಭಾರತದಾದ್ಯಂತ 15 ನಗರಗಳ ಅಧಿಕಾರಿಗಳು, ನಗರ ವೈದ್ಯರು, ಪರಿಣಿತ ಸಂಸ್ಥೆಗಳು ಮತ್ತು ಸ್ಥಳೀಯ ಪಾಲುದಾರರನ್ನು ಒಳಗೊಂಡಂತೆ 100ಕ್ಕೂ ಹೆಚ್ಚು ಪ್ರತಿನಿಧಿಗಳು ಕಾರ್ಯಗಾರದಲ್ಲಿ ಪಾಳಗೊಂಡಿದ್ದರು.
ಈ ವೇಳೆ ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆಯ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಬಿ.ಎಸ್.ಡಬ್ಲ್ಯೂ.ಎಂ.ಎಲ್ ನ ಮುಖ್ಯ ಕಾರ್ಯಚರಣ ಅಧಿಕಾರಿಯಾದ ರಮಾಮಣಿ, ಮುಖ್ಯ ಇಂಜಿನಿಯರ್ ಆದ ಬಸವರಾಜ್ ಕಬಾಡೆ, ಸಿ40 ಸಿಟೀಸ್ ಇಂಕ್ಲೂಸಿವ್ ಕ್ಲೈಮೇಟ್ ಆಕ್ಷನ್ ನ ನಿರ್ದೇಶಕರಾದ ಜಾಜ್ಮಿನ್ ಬರ್ಗೆಸ್ ಸೇರಿದಂತೆ ಇನ್ನಿತರೆ ಉಪಸ್ಥಿತರಿದ್ದರು.