ಬೆಂಗಳೂರು: ಕಳೆದ 15 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವೆಲ್ಲಾರ ಜಂಕ್ಷನ್ ಹಾಗೂ ವೈಟ್ ಫೀಲ್ಡ್ ವರೆಗಿನ ಸಿಗ್ನಲ್ ಫ್ರೀ ಕಾರಿಡಾರ್ ಕಾಮಗಾರಿ ಯನ್ನು ಶೀಘ್ರದಲ್ಲಿ ಕೈಗೆತ್ತಿಕೊಳ್ಳಬೇಕೆಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರುಗಳು ಇಂದು ಸ್ಥಳದಲ್ಲಿ ಪ್ರತಿಭಟನೆ ಮಾಡುವ ಮೂಲಕ ಸರ್ಕಾರವನ್ನು ಒತ್ತಾಯ ಪಡಿಸಿದರು.
ನಗರದ ಹಳೆ ಏರ್ ಪೋರ್ಟ್ ರಸ್ತೆಯ ಮಣಿಪಾಲ ಆಸ್ಪತ್ರೆಯ ಜಂಕ್ಷನ್ ಬಳಿ ಸೇರಿದ್ದ ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಜಗದೀಶ್ ಬಾಬು ಮಾಧ್ಯಮಗಳೊಂದಿಗೆ ಮಾತನಾಡುತ್ತಾ , ಕಳೆದ 15 ವರ್ಷಗಳ ಹಿಂದೆಯೇ ಈ ಕಾಮಗಾರಿಗೆ ಚಾಲನೆ ಸಿಕ್ಕಿತ್ತು. ಆದರೆ ಸರ್ಕಾರವು ಈ ರಸ್ತೆಯಲ್ಲಿ ದೇಶದ ಪ್ರಧಾನ ಮಂತ್ರಿಗಳು, ಪ್ರಮುಖ ಮಂತ್ರಿಗಳು ಸೇರಿದಂತೆ ಅನೇಕ ಪ್ರತಿಷ್ಠಿತ ರಾಜಕಾರಣಿಗಳು ಓಡಾಡುತ್ತಾರೆ ಎಂಬ ಕಾರಣ ನೀಡಿ ಈ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ. ಸರ್ಕಾರಕ್ಕೆ ಪ್ರಭಾವಿ ರಾಜಕಾರಣಿಗಳ ಹಿತಾಸಕ್ತಿಯೇ ಮುಖ್ಯವಾಗಿದೆಯೇ ಹೊರತು , ಪ್ರತಿನಿತ್ಯ ಸಂಚಾರ ಸಮಸ್ಯೆಯಿಂದ ಯಾತನೆ ಅನುಭವಿಸುತ್ತಿರುವ ಲಕ್ಷಾಂತರ ಪ್ರಯಾಣಿಕರ ಸಮಸ್ಯೆಯನ್ನು ಬಗೆಹರಿಸುವ ಇಚ್ಛಾಶಕ್ತಿಯೇ ಇಲ್ಲದಾಗಿದೆ.
ಈ ಭಾಗದಲ್ಲಿ ಎಚ್ಎಎಲ್,ಎನ್ಎಎಲ್ ಹಾಗೂ ಡಿ ಆರ್ ಡಿ ಓ ದಂತಹ ರಕ್ಷಣಾ ಸಂಸ್ಥೆಗಳ ಸ್ಥಾಪನೆಯಿಂದ ಬೆಂಗಳೂರಿಗೆ ಬ್ರಾಂಡ್ ತಂದಿರುವ ಹಿರಿಮೆ ಈ ರಸ್ತೆಗೆ ಇದೆ. ಸದಾ ಬ್ರಾಂಡ್ ಬೆಂಗಳೂರೆಂದು ಮಾತನಾಡುವ ಉಪ ಮುಖ್ಯಮಂತ್ರಿ ಡಿ.ಕೆ .ಶಿವಕುಮಾರ್ ಈ ಕಡೆ ಗಮನಹರಿಸಿ ಕೂಡಲೇ ಈ ಭಾಗದ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಪಕ್ಷದ ಮುಖಂಡರುಗಳಾದ ಅನಿಲ್ ನಾಚಪ್ಪ, ಲೋಕೇಶ್ ಕುಮಾರ್, ಭಾನುಪ್ರಿಯ ಸೇರಿದಂತೆ ಅನೇಕ ಕಾರ್ಯಕರ್ತರುಗಳು ಭಾಗವಹಿಸಿದ್ದರು.