– ಬೆಂಗಳೂರು ಜಲಮಂಡಳಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಭಾಗಿ
– ಬೆಂಗಳೂರು ನಗರದ ಅಂತರ್ಜಲ ಹೆಚ್ಚಳಕ್ಕೆ ಹಾಗೂ ಕೆರೆಗಳ ಅಭಿವೃದ್ದಿಗೆ ಹೊಸ ಕಾರ್ಯಕ್ರಮ
– ಬರಗಾಲವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದ ಜಲಮಂಡಳಿಗೆ ಶ್ಲಾಘನೆ
– ಅಧಿವೇಶನ ಮುಗಿದ ನಂತರ ಸಿಬ್ಬಂದಿ ನೇಮಕಾತಿ ಬಗ್ಗೆ ತೀರ್ಮಾನ
ಬೆಂಗಳೂರು: ನಾಡಪ್ರಭು ಕೆಂಪೇಗೌಡರು ಹಾಕಿದ್ದ ಗಡಿಯನ್ನು ಮೀರಿ ಬೆಳೆಯುತ್ತಿರುವ ಬೆಂಗಳೂರಿನ ಸಮರ್ಪಕ ನಿರ್ವಹಣೆಗೆ ಗ್ರೇಟರ್ ಬೆಂಗಳೂರು ಬಿಲ್ ತರಲಾಗಿದೆ. ಸುಮಾರು 70 ಸಾವಿರ ಸಲಹೆಗಳನ್ನು ಕ್ರೋಢಿಕರಿಸುವ ಮೂಲಕ ಅಂತಿಮವಾದ ಬಿಲ್ನ್ನ ಪ್ರಸ್ತುತಪಡಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ನೌಕರರ ಸಂಘ ಹಾಗೂ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಬಳಗ, ಬೆಂಗಳೂರು ಜಲಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬರಗಾಲದಲ್ಲಿ ನೀರು ಕೊಟ್ಟಿದ್ದಕ್ಕೆ ಶ್ಲಾಘನೀಯ ಕಾರ್ಯ:
ಬೆಂಗಳೂರು ಜಲಮಂಡಳಿ ಸಿಬ್ಬಂದಿಗಳು ಹಾಗೂ ನೌಕರರು ನಗರದಲ್ಲಿ ಎದುರಾಗಿದ್ದ ಬರಗಾಲವನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸಿದ್ದೀರಿ. ಚುನಾವಣೆಯ ಸಂಧರ್ಭದಲ್ಲಿ ೨೪ ಗಂಟೆಗಳ ಕಾಲ ಯಾವುದೇ ತೊಂದರೆ ಆಗದೇ ಇರುವ ರೀತಿಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದಿರಿ. ಕಷ್ಟಕಾಲದಲ್ಲಿ ಸುಮಾರು 1.40 ಕೋಟಿ ಜನರಿಗೆ ಸಮರ್ಪಕ ನೀರು ಒದಗಿಸುವ ಹಾಗೂ ಒಳಚರಂಡಿ ವ್ಯವಸ್ಥೆ ಮೂಲಕ ಸೇವೆ ನೀಡಿದ ರೀತಿ ಬಹಳ ಶ್ಲಾಘನೀಯ ಎಂದು ಹೇಳಿದರು.
ಗ್ರೇಟರ್ ಬೆಂಗಳೂರು ಬಿಲ್:
ಬೆಂಗಳೂರು ನಗರಾಭಿವೃದ್ದಿ ಸಚಿವನಾಗಿ, ನಗರವನ್ನ ಸಮಗ್ರ ಆಭಿವೃದ್ದಿ ಮಾಡುವ ನಿಟ್ಟಿನಲ್ಲಿ ಹಲವಾರು ಕನಸನ್ನ ಹೊಂದಿದ್ದೇನೆ. ಬ್ರಾಂಡ್ ಬೆಂಗಳೂರು ಯೋಜನೆಯ ಅಡಿಯಲ್ಲಿ ಸ್ವೀಕೃತಿಯಾಗಿರುವ ಸುಮಾರು 70 ಸಾವಿರಕ್ಕೂ ಹೆಚ್ಚು ಸಲಹೆಗಳನ್ನ ಕ್ರೋಢೀಕರಿಸಿ, ಬೆಂಗಳೂರು ಜನಪ್ರತಿನಿಧಿಗಳು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಗ್ರೇಟರ್ ಬೆಂಗಳೂರು ಬಿಲ್ ನ್ನ ಸಿದ್ದಪಡಿಸಲಾಗಿದೆ. ಬೆಳೆಯುತ್ತಿರುವ ಬೆಂಗಳೂರಿಗೆ ಅಗತ್ಯ ಸೌಲಭ್ಯಗಳ ಅಳವಡಿಕೆಗೆ ಇದು ಇಂಬು ನೀಡಲಿದೆ. ಭವಿಷ್ಯಕ್ಕೆ ನಮ್ಮ ನಗರ ಸಜ್ಜಾಗಿರಬೇಕು ಎನ್ನುವ ದೂರದೃಷ್ಟಿಯನ್ನು ಇಲ್ಲಿ ಹೊಂದಿದ್ದೇವೆ ಎಂದರು.
ನೀರಿನ ದರದ ಬಗ್ಗೆ ಸದ್ಯದಲ್ಲೇ ಅಂತಿಮ ತೀರ್ಮಾನ:
ಕಳೆದ 12 ವರ್ಷಗಳಿಂದ ನೀರಿನ ದರವನ್ನು ಹೆಚ್ಚಿಸಲಾಗಿಲ್ಲ. ಇದರಿಂದ ಜಲಮಂಡಳಿಯ ಆರ್ಥಿಕ ಸ್ಥಿತಿಯ ಮೇಲೆ ಬಹಳಷ್ಟು ಒತ್ತಡ ಉಂಟಾಗಿದೆ. ಇದರ ಬಗ್ಗೆ ಸದ್ಯದಲ್ಲೇ ಸರಕಾರದ ಮಟ್ಟದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ಕೆರೆಗಳನ್ನ ಉಳಿಸಲು ಹಾಗೂ ಬೆಳೆಸಲ ಹೊಸ ಯೋಜನೆ:
ಬೆಂಗಳೂರು ನಗರದ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕೆಂಪೇಗೌಡರು ತಮ್ಮ ದೂರದೃಷ್ಟಿಯಿಂದ ಕೆರೆಗಳನ್ನು ನಿರ್ಮಿಸಿದ್ದರು. ಬದಲಾದ ಕಾಲಘಟ್ಟದಲ್ಲಿ ಕೆರೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುವ ಮೂಲಕ ನಿಧಾನವಾಗಿ ಕಣ್ಮರೆಯಾಗುತ್ತಿವೆ. ನಗರ ಹಾಗೂ ಹೊರವಲಯ ವ್ಯಾಪ್ತಿಯಲ್ಲಿ ಇರುವಂತಹ ಕೆರೆಗಳನ್ನು ಉಳಿಸಿ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು. ಕರ್ನಾಟಕ ರಾಜ್ಯ ಕೆರೆ ಅಭಿವೃದ್ದಿ ಪ್ರಾಧಿಕಾರದ ಜೊತೆ ಸಭೆಯನ್ನು ನಡೆಸಿ, ನಗರ ಹಾಗೂ ಹೊರವಲಯ ವ್ಯಾಪ್ತಿಯಲ್ಲಿ ಇರುವಂತಹ ಕೆರೆಗಳನ್ನು ಬೆಂಗಳೂರು ಜಲಮಂಡಳಿ ವಶಕ್ಕೆ ತಗೆದುಕೊಳ್ಳಲು ಚಿಂತನೆ ನಡೆಸಲಾಗುತ್ತಿದೆ. ಇವುಗಳನ್ನ ಸಂಸ್ಕರಿಸಿದ ನೀರಿನಿಂದ ತುಂಬಿಸುವ ಮೂಲಕ ಕೆರೆಗಳನ್ನು ಉಳಿಸುವುದು ಹಾಗೂ ಅಂತರ್ಜಲವನ್ನು ಅಭಿವೃದ್ದಿಗೊಳಿಸುವುದು ನಮ್ಮ ಗುರಿಯಾಗಿದೆ ಎಂದರು.
Bwssbಯಲ್ಲಿ ಸಿಬ್ಬಂದಿಗಳ ನೇಮಕಾತಿಗೆ ಕ್ರಮ:
ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲದೇ ಇರುವ ಕಾರಣದಿಂದಾಗಿ ಹಲವಾರು ವರ್ಷಗಳಿಂದ ಜಲಮಂಡಳಿಯಲ್ಲಿ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಅಧಿವೇಶನ ಮುಗಿದ ನಂತರ ಈ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾಣ ಕೈಗೊಳ್ಳಲಾಗುವುದು. ಸಿಬ್ಬಂದಿಗಳ ನೇಮಕಾತಿ ಹಾಗೂ ಸಮರ್ಪಕ ನಿರ್ವಹಣೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ನಾವು ಬದ್ದರಾಗಿದ್ದೇವೆ ಎಂದು ಭರವಸೆ ನೀಡಿದರು.
ನಾಡಪ್ರಭು ಕೆಂಪೇಗೌಡರು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಅವರು ನೀಡಿದ ಕೊಡುಗೆ ಎಲ್ಲರಿಗೂ ಸಲ್ಲುತ್ತದೆ. ಅವರು ಕಟ್ಟಿದ ನಗರವನ್ನ ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಜೊತೆಯಾಗೋಣ ಎಂದು ಕರೆ ನೀಡಿದರು.
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಮಾತನಾಡಿ, ಬೆಂಗಳೂರು ನಗರದ ಸರ್ವತೋಮುಖ ಅಭಿವೃದ್ದಿಗೆ ಡಿ.ಕೆ ಶಿವಕುಮಾರ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಮೋಸ್ಟ್ ಹಾರ್ಡ್ ವರ್ಕಿಂಗ್ ಸಚಿವರು ಎಂದರೆ ತಪ್ಪಾಗಲಾರದು. ಮುಂದಿನ ೨೦ ವರ್ಷಗಳಲ್ಲಿ ಇನ್ನು 1 ಕೋಟಿ ಜನಸಂಖ್ಯೆ ಹೆಚ್ಚಾಗಬಹುದು. ಅಂದು ಸುಮಾರು 2.5 ಕೋಟಿ ಜನರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವ ಜೊತೆಗೆ ಎದುರಾಗುವ ಜ್ವಲಂತ ಸಮಸ್ಯೆಗಳ ನಿವಾರಣೆಗೂ ನಾವು ಸಜ್ಜಾಗಬೇಕಾಗಿದೆ. ಈ ನಿಟ್ಟಿನಲ್ಲಿ ಕೆಂಪೇಗೌಡರು ಕಟ್ಟಿದ ಕೆರೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಾಗಿದೆ ಎಂದರು.
ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ನಾಡಪ್ರಭು ಕೆಂಪೇಗೌಡರು ನಮಗೆಲ್ಲಾ ಸ್ಪೂರ್ತಿಯಾಗಿದ್ದಾರೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವು ಜನರ ಸೇವೆಯನ್ನು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಎಸ್ ರವಿ, ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್ ಸೇರಿದಂತೆ ಜಲಮಂಡಳಿಯ ಅಧಿಕಾರಿಗಳು, ನೌಕರರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಡಾ. ಖ್ಯಾತ ಇತಿಹಾಸ ತಜ್ಞರು ಹಾಗೂ ಸಂಶೋಧಕರಾದ ತಲಕಾಡು ಚಿಕ್ಕರಂಗೇಗೌಡ, ಜಲಮಂಡಳಿ ಮುಖ್ಯ ಆಡಳಿತಾಧಿಕಾರಿ ಹಾಗೂ ಕಾರ್ಯದರ್ಶಿ ಮದನ್ ಮೋಹನ್ ಸಿ, ಆರ್ಥಿಕ ಸಲಹೆಗಾರರಾದ ಸುಬ್ರಮಣ್ಯ, ಮುಖ್ಯ ಅಭಿಯಂತರರಾದ ಬಿ ಸುರೇಶ್, ಮಂಡಳಿ ನೌಕರರ ಸಂಘದ ಅಧ್ಯಕ್ಷ ಬಿ ಕೆ ಮರಿಯಪ್ಪ, ಸ್ಯಾನಿಟರಿ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಸಿದ್ದಪ್ಪ, ಎಸ್ ಸಿ ಅಂಡ್ ಎಸ್ ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸದಾಶಿವ ಕಾಂಬಳೆ ಉಪಸ್ಥಿತರಿದ್ದರು.