*||*ಮೂಡಾದಲ್ಲಿ ಕುಮಾರಸ್ವಾಮಿ ಅವರದ್ದೂ ಸೈಟಿದೆ ಎಂದ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ಕೇಂದ್ರ ಸಚಿವ HDK*||*
*||*ಹಣ ಕಟ್ಟಿ 40 ವರ್ಷ ಆಗಿದೆ, ನನಗಿನ್ನೂ ನಿವೇಶನವನ್ನೇ ಕೊಟ್ಟಿಲ್ಲ*||*
*||*ಡಿನೋಟಿಫಿಕೇಷನ್ ಮಾಡಿ ಎಂದು ನಿಂಗಪ್ಪ ಸ್ವರ್ಗದಿಂದ ಬಂದು ಸಿದ್ದರಾಮಯ್ಯಗೆ ಅರ್ಜಿ ಕೊಟ್ಟರಾ?*||*
*||*ಭೈರತಿ ಸುರೇಶ್ ಆರ್ಭಟ ನೋಡಿದೆ; ಅವರ ಬಂಡವಾಳ ಬಿಚ್ಚಿಟ್ಟರೆ ಬೇಕಾಷ್ಟಿದೆ!*||*
*||*ನಾನು ಪ್ರಾಮಾಣಿಕ ಎಂದು ಎಷ್ಟು ದಿನ ಹೇಳಿಕೊಳ್ಳುತ್ತೀರಿ? ಇದು ಮುಗಿದ ಆಟ ಸಿದ್ದರಾಮಯ್ಯನವರೇ ಎಂದು ಕುಟುಕಿದ ಕೇಂದ್ರ ಸಚಿವರು*||*
-*-
ನವದೆಹಲಿ: ಮೂಡಾದಲ್ಲಿ ತಮಗೂ ನಿವೇಶನವಿದೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ನೀಡಿರುವ ಹೇಳಿಕೆ ಬಗ್ಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಸಿದ್ದರಾಮಯ್ಯ ಅವರಂತೆ ನಾನು ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ ಎಂದಿದ್ದಾರೆ.
ನವದೆಹಲಿಯಲ್ಲಿ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು; ಮೈಸೂರಿನಲ್ಲಿ ನನಗೆ ನಿವೇಶನ ಕೊಟ್ಟಿದ್ದಾರೆ ಎಂದಿದ್ದಾರೆ ಅವರಿಬ್ಬರು. ಆದರೆ, ಈವರೆಗೆ ಆ ನಿವೇಶನವನ್ನೇ ನನಗೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
2006ರಲ್ಲಿಯೇ ನಾನು ಸಿಎಂ ಆಗಿದ್ದೆ. ಅಧಿಕಾರ ದುರುಪಯೋಗ ಮಾಡಿಕೊಳ್ಳಬೇಕು ಎಂದು ನನಗೆ ಅನ್ನಿಸಿದಿದ್ದರೆ ಆಗಲೇ ಆ ನಿವೇಶನವನ್ನು ನನ್ನ ಹೆಸರಿಗೆ ಬರೆಸಿಕೊಳ್ಳಬಹುದಾಗಿತ್ತು. ಆದರೆ, ಸಿದ್ದರಾಮಯ್ಯ ಅವರಂತೆ ನಾನು ಅಧಿಕಾರ ದುರುಪಯೋಗ ಮಾಡಿಕೊಳ್ಳಲಿಲ್ಲ ಎಂದು ಕುಮಾರಸ್ವಾಮಿ ಅವರು ತಿರುಗೇಟು ಕೊಟ್ಟರು.
ಈ ನಿವೇಶನದ ಬಗ್ಗೆ ರಾಮಕೃಷ್ಣ ಹೆಗಡೆ ಅವರ ಕಾಲದಿಂದಲೂ ತನಿಖೆ ನಡೆಯುತ್ತಿದೆ. ಲೋಕಾಯುಕ್ತ, ಸಿಐಡಿ ತನಿಖೆಗಳು ನಡೆದು ಹೋಗಿವೆ. 500 ನಿವೇಶನಗಳನ್ನು ದೇವೇಗೌಡರು ಪಡೆದುಕೊಂಡಿದ್ದಾರೆ ಎಂದು ಅಪಪ್ರಚಾರ ಮಾಡಲಾಗಿತ್ತು. ಕೊನೆಗೆ ತನಿಖೆಯಲ್ಲಿ ಒಂದು ನಿವೇಶನವನ್ನಷ್ಟೇ ಪಡೆದುಕೊಂಡಿದ್ದಾರೆ ಎಂದು ಗೊತ್ತಾಯಿತು ಎಂದು ಸಚಿವರು ಮಾಹಿತಿ ನೀಡಿದರು.
2012ನೇ ಇಸವಿಯಲ್ಲಿ ನಾನು ಮೂಡಕ್ಕೆ ಪತ್ರ ಬರೆದು ಹಂಚಿಕೆ ಮಾಡಿರುವ ನಿವೇಶನ ಕೊಡಿ ಎಂದು ಮನವಿ ಮಾಡಿದ್ದೆ. 2017ರಲ್ಲಿ ಮತ್ತೊಂದು ಪತ್ರವನ್ನೂ ಬರೆದಿದ್ದೆ. ನಾನು ಅಧಿಕಾರ ದುರುಪಯೋಗಪಡಿಸಿಕೊಳ್ಳಲಿಲ್ಲ. ಅಂಥ ಆಲೋಚನೆಯನ್ನೂ ಮಾಡಲಿಲ್ಲ. ನಾನೆಂದೂ ಸಿದ್ದರಾಮಯ್ಯ ಅವರಂತೆ ಅಧಿಕಾರ ದುರುಪಯೋಗ ಮಾಡಿಕೊಳ್ಳಲಿಲ್ಲ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು ಕುಮಾರಸ್ವಾಮಿ ಅವರು.
*40 ವರ್ಷವೇ ಆಗಿದೆ, ನಿವೇಶನ ಕೊಟ್ಟಿಲ್ಲ*
ಈ ನಿವೇಶನವನ್ನು ಅವರು ನನಗೆ ಧರ್ಮಕ್ಕೆ ಕೊಡುತ್ತಿಲ್ಲ. ನಾನು 34,000 ರೂ. ಹಣ ಕಟ್ಟಿದ್ದೇನೆ. ಆ ಹಣ ಕಟ್ಟಿ 40 ವರ್ಷಗಳೇ ಆಗಿದೆ. ಇದು ನಿಜವಾದ ಪರಿಸ್ಥಿತಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಹೇಳಿದರು.
ಇವತ್ತು ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಆರ್ಭಟ ನೋಡಿದೆ. ಈ ವ್ಯಕ್ತಿ ಯಾವ ಹಿನ್ನೆಲೆಯಿಂದ ಬಂದಿರುವುದು ಎನ್ನುವುದು ನನಗೆ ಗೊತ್ತಿದೆ. ಬೆಂಗಳೂರು ನಗರದಲ್ಲಿ ಈ ಮಹಾಶಯ ಏನೆಲ್ಲಾ, ಯಾವೆಲ್ಲಾ ಭ್ರಷ್ಟಾಚಾರ ಎಸಗಿದ್ದಾರೆ ಎಂದು ತೆಗೆದರೆ ಈ ವ್ಯಕ್ತಿಯ ಅಸಲಿ ಬಂಡವಾಳ ಗೊತ್ತಾಗುತ್ತದೆ. ಬೆಂಗಳೂರು ಸುತ್ತಮುತ್ತಾ ಮಾಡಿದ್ದಾರಲ್ಲ.. ಅದನ್ನಷ್ಟೇ ತೆಗೆದಿಟ್ಟರೆ ಸಾಕು ಎಂದು ಕುಮಾರಸ್ವಾಮಿ ಅವರು ಭೈರತಿ ಸುರೇಶ್ ಗೆ ತಿರುಗೇಟು ಕೊಟ್ಟರು.
ನನ್ನ ಹೆಸರಿನಲ್ಲಿರುವ ನಿವೇಶನವನ್ನು ಬೇಕಿದ್ದರೆ ನೀವೇ ನಿಮ್ಮ ಮಗನಿಗೋ ಅಥವಾ ನಿಮ್ಮ ಧರ್ಮಪತ್ನಿ ಹೆಸರಿಗೋ ಅಥವಾ ನಿಮ್ಮ ಪರಮಾಪ್ತ ಭೈರತಿ ಸುರೇಶ್ ಹೆಸರಿಗೋ ಇಲ್ಲವೇ ಯಾವುದಾದರೂ ಅನಾಥಾಶ್ರಮಕ್ಕೋ ಬರೆದುಕೊಟ್ಟುಬಿಡಿ. ನನಗೆ ಯಾವ ತಕರಾರೂ ಇಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟರು ಕುಮಾರಸ್ವಾಮಿ ಅವರು.
*ನಿಂಗಪ್ಪ ಸ್ವರ್ಗದಿಂದ ಬಂದು ಸಿದ್ದರಾಮಯ್ಯಗೆ ಅರ್ಜಿ ಕೊಟ್ಟರಾ?*
16/2 ಮಾಡಿದ ಮೇಲೆ ಪುನಾ ನಿವೇಶನವನ್ನು ಪಡೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ. ನಿಂಗಪ್ಪ ಎನ್ನುವ ವ್ಯಕ್ತಿ ಜಮೀನನ್ನು ಡಿನೋಟಿಫಿಕೇಷನ್ ಮಾಡಿ ಎಂದು ಸ್ವರ್ಗದಿಂದ ಇಳಿದುಬಂದು ನಿಮಗೆ ಅರ್ಜಿ ಕೊಟ್ಟಿದ್ದರಾ ಸಿದ್ದರಾಮಯ್ಯ ಅವರೇ? ನಿಂಗಪ್ಪ ಸತ್ತ ಮೇಲೆ ಡಿನೋಟಿಫಿಕೇಶನ್ ಮಾಡಲು ಅರ್ಜಿ ಸಲ್ಲಿಸಲಾಗಿದೆ. 2001, 2003ರಲ್ಲಿ ಸಿಎಂ ಪತ್ನಿಗೆ ಮೈಸೂರಿನ ವಿಜಯನಗರದಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. 2005ರಲ್ಲಿ ಕೃಷಿಭೂಮಿ ಎಂದಿದ್ದ ಭೂಮಿಯನ್ನು ಇವರು ಹೇಗೆ ಖರೀದಿ ಮಾಡಿದರು? ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ಮಾಡದೆಯೇ ಭೂ ಪರಿವರ್ತನೆ ಮಾಡಿಕೊಟ್ಟರು. ಅದು ಹೇಗೆ ಮಾಡಿಕೊಟ್ಟರು? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಆಗಲೂ ಈ ರಾಜ್ಯದ ಉಪ ಮುಖ್ಯಮಂತ್ರಿ ಆಗಿದ್ದರು. ಆಗ ಈ ಮಹಾನುಭಾವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರು. ಈ ಹಗರಣವನ್ನು ಬಯಲು ಮಾಡಿದ್ದು, ಎಲ್ಲಾ ದಾಖಲೆಗಳನ್ನು ಹೊರಗೆ ಬಿಟ್ಟಿದ್ದು ಮುಖ್ಯಮಂತ್ರಿ ಕುರ್ಚಿಯ ಟವೆಲ್ ಹಾಕಿದ ಮಹಾಶಯರು ಎಂದು ಯಾರ ಹೆಸರನ್ನೂ ಹೇಳದೆ ಕಾಂಗ್ರೆಸ್ ಪಕ್ಷದ ಒಳರಾಜಕೀಯದ ಬಗ್ಗೆ ಸ್ಫೋಟಕ ವಿಷಯವನ್ನು ಬಹಿರಂಗ ಮಾಡಿದರು ಅವರು.
ನಿಮ್ಮವರೇ ಕೊಟ್ಟ ದಾಖಲೆಗಳನ್ನು ವಿಪಕ್ಷಗಳು ಚರ್ಚೆ ಮಾಡತ್ತಿವೆ. ಸರಕಾರಿ ಭೂಮಿಯನ್ನು ನೀವೇ ಕಬಳಿಕೆ ಮಾಡಿ, ಈಗ 64 ಕೋಟಿ ಪರಿಹಾರ ಕೊಡಿ ಎಂದು ಯಾವ ನೈತಿಕತೆ ಮೇಲೆ ಕೇಳುತ್ತಿದ್ದೀರಿ ಸಿದ್ದರಾಮಯ್ಯನವರೇ..? ಇಂತಹ ಆರೋಪ ಹೊತ್ತು ಯಾವ ನೈತಿಕತೆ ಇಟ್ಟುಕೊಂಡು ಸಿಎಂ ಕುರ್ಚಿಯಲ್ಲಿ ಕೂತಿದ್ದೀರಿ ಸಿದ್ದರಾಮಯ್ಯನವರೇ ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.
***
*//ಅಯೋಗ್ಯ ಅಧಿಕಾರಿಗಳನ್ನು ಇಟ್ಟುಕೊಂಡವರನ್ನು ಏನೆಂದು ಕರೆಯಬೇಕು?//*
ವಾಲ್ಮಿಕಿ ಹಗರಣ ಸಿದ್ದರಾಮಯ್ಯ ಸರಕಾರದ ಮಾನವನ್ನು ಬೀದಿಯಲ್ಲಿ ಹರಾಜು ಹಾಕಿದೆ. ಹಗರಣ ನಡೆದಿರುವ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯನವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಹಾಗಾದರೆ ಹಗರಣದ ಜವಾಬ್ದಾರಿ ಯಾರು ಹೊರಬೇಕು? ಈ ಹಗರಣವನ್ನು ಮಾಡಿರುವವರು ಅಯೋಗ್ಯ ಅಧಿಕಾರಿಗಳು ಎಂದು ಹೇಳಿಕೆ ನೀಡಿದ್ದಾರೆ. ಅಂತಹ ಅಯೋಗ್ಯ ಅಧಿಕಾರಿಗಳನ್ನು ಇಟ್ಟುಕೊಂಡವರನ್ನು ಏನೆಂದು ಕರೆಯಬೇಕು ಎಂದು ಕುಮಾರಸ್ವಾಮಿ ಅವರು ಡಿಸಿಎಂ ಡಿಕೆಶಿ ಮೇಲೆ ಚಾಟಿ ಬೀಸಿದರು.
ಅಧಿಕಾರಿ ಕಲ್ಲೇಶರನ್ನು ಅಮಾನತು ಮಾಡಿದ್ದೀರಿ. ಅವರ ಕೈಯಲ್ಲಿ ಜಾರಿ ನಿರ್ದೇಶನಾಲಯದ ವಿರುದ್ಧ ಪೋಲಿಸರಿಗೆ ದೂರು ಕೊಡಿಸಿ ಎಫ್ ಐಆರ್ ಮಾಡಿಸಿದ್ದೀರಿ. ಅದಕ್ಕೆ ಹೈಕೋರ್ಟ್ ತಡೆ ನೀಡಿದೆ. ನಿಮಗೆ ಯಾರು ಈ ಐಡಿಯಾ ಕೊಟ್ಟರೋ ಗೊತ್ತಿಲ್ಲ, ಆದರೆ; ಅವರು ಸರಿಯಾದ ಐಡಿಯಾನಾದರೂ ನಿಮಗೆ ಕೊಡಬೇಕಿತ್ತು ಎಂದು ಸಿಎಂಗೆ ಕುಟುಕಿದರು ಕೇಂದ್ರ ಸಚಿವರು.
ಎಂಟು ಬಾರಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದೇನೆ. ತೆರಿಗೆ ಪಾಲು, ರಾಜ್ಯದ ಹಣ ಬಿಡುಗಡೆ ಮಾಡಿ ಎಂದು ಕೇಳಿದ್ದೇನೆ. ಈ ಬಗ್ಗೆ ಕೇಂದ್ರ ಸರಕಾರ ಉತ್ತರ ಕೊಟ್ಟಿಲ್ಲ ಎಂದು ಹೇಳಿದ್ದೀರಲ್ಲ ಸಿದ್ದರಾಮಯ್ಯನವರೇ.. ನಾನು ಪ್ರಾಮಾಣಿಕ ಎಂದು ಎಷ್ಟು ದಿನ ಹೇಳಿಕೊಳ್ಳುತ್ತೀರಿ. ಇದು ಮುಗಿದ ಆಟ ಸಿದ್ದರಾಮಯ್ಯನವರೇ.. ಕಾಂಗ್ರೆಸ್ ನವರು ಮೈಸೂರಿಂದ ಬೆಂಗಳೂರಿಗಲ್ಲ, ದೆಹಲಿಗೆ ಪಾದಯಾತ್ರೆ ಬರಲಿ ಎಂದು ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು.
ಮೂಡಾ ಹಗರಣದ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಜಂಟಿಯಾಗಿ ಹೋರಾಟ ನಡೆಸಲಿವೆ. ಈ ಬಗ್ಗೆ ರೂಪುರೇಶೆ ಸಿದ್ಧ ಮಾಡಲು ಎನ್ ಡಿಎ ಸಭೆ ಕರೆದಿದ್ದೇವೆ. ಆ ಸಭೆಯಲ್ಲಿ ಮುಂದಿನ ಹೋರಾಟ ಮತ್ತು ಪಾದಯಾತ್ರೆ ಬಗ್ಗೆ ನಿರ್ಧಾರ ಮಾಡುತ್ತೆವೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.
ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಹಾಗೂ ಸಂಸದ ಮಲ್ಲೇಶ್ ಬಾಬು ಅವರು ಸಚಿವರ ಜತೆಯಲ್ಲಿ ಇದ್ದರು.