ಬೆಂಗಳೂರು: “ಮಾಧ್ಯಮ ಅನೇಕ’ ಸಂಸ್ಥೆಯಿಂದ ‘ತೇಜಸ್ವಿ ಎಂಬ ವಿಸ್ಮಯ’ ಸಾಕ್ಷ್ಯ ಚಿತ್ರ ಸರಣಿ ಅನಾವರಣವನ್ನು ಜುಲೈ 28ರಂದು ಬೆಂಗಳೂರಿನ ರವೀಂದ್ರ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಧ್ಯಮ ಅನೇಕ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರಾದ ಅರವಿಂದ ವೈ ಮೋಥಿ ಅವರು ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದವರು,ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಬಹುಮುಖ ವ್ಯಕ್ತಿತ್ವದವರು. ಕನ್ನಡ ಸಾಹಿತ್ಯಲೋಕದಲ್ಲಿ ಸಮಪ್ಪಿ ಜೀವಿಗಳಲ್ಲಿನ ಸಮಾನತೆಯನ್ನು ಪ್ರತಿಪಾದಿಸು,ಪರಿಸರ ಕೇಂದ್ರಿತ ಕಥನಗಳನ್ನು ಕಟ್ಟಿದ್ದಷ್ಟೇ ಅಲ್ಲದೆ ಪರಿಸರ ಪ್ರಿಯನಾಗಿ, ಕೃಷಿಕನಾಗಿ, ಸಾಹಿತಿಯಾಗಿ, ಪಕ್ಷಿತಜ್ಞನಾಗಿ, ಪ್ರಕೃತಿ ತಜ್ಞನಾಗಿ, ಛಾಯಾಗ್ರಾಹಕನಾಗಿ, ವಿಜ್ಞಾನಿಯಾಗಿ, ವಿದ್ವಾಂಸನಾಗಿ ಹಲವಾರು ಬದುಕುಗಳನ್ನು ತಮ್ಮಜೀವಾವಧಿಯಲ್ಲಿ ಶೋಧಿಸಿದವರು ನಮ್ಮ ತೇಜಸ್ವಿ.
ತಮ್ಮ ಕೃತಿಗಳಲ್ಲಿ ದಾಖಲಿಸಿದವರು, ಹೇಳಿದಷ್ಟೂ ಮುಗಿಯದ ಇಂತಹ ಅಪ್ರತಿಮ ಪ್ರತಿಭೆಯ ವ್ಯಕ್ತಿಚಿತ್ರಣವನ್ನು ಕೆಲವು ಸಂಚಿಕೆಗಳಲ್ಲಿ ಬಿಚ್ಚಿಡುವ ಪ್ರಯತ್ನ ಈ “ತೇಜಸ್ವಿ ಎಂಬ ವಿಸ್ಮಯ” ಸಾಕ್ಷ್ಯಚಿತ್ರ ಸರಣಿ.ಮಾಧ್ಯಮ ಅನೇಕ’ ಸಂಸ್ಥೆ ನಿರ್ಮಾಣದ ಕೆ ಪಿ ಪೂರ್ಣಚಂದ್ರ ತೇಜಸ್ವಿ ಅವರ ಕುರಿತಾದ ಬಹು ನಿರೀಕ್ಷಿತ, 6 ಕಂತುಗಳ “ತೇಜಸ್ವಿ ಎಂಬ ವಿಸ್ಮಯ” ಹೆಸರಿನ ಬೃಹತ್ ಸಾಕ್ಷ್ಯಚಿತ್ರ ಸರಣಿಯ ಮೂಲ ಉದ್ದೇಶ ತೇಜಸ್ವಿಯವರ ಬದುಕು, ಬರಹ ಮತ್ತು ವಿಚಾರಧಾರೆಗಳನ್ನು ದೃಶ್ಯಮಾಧ್ಯಮದ ಮೂಲಕ ಅನಾವರಣಗೊಳಿಸುವುದು.
ತೇಜಸ್ವಿಯವರ ನೆನಪು ಹಂಚಿಕೊಂಡ ಗಣ್ಯರು
ಈ ಸಾಕ್ಷ್ಯಚಿತ್ರದಲ್ಲಿ ತೇಜಸ್ವಿಯವರ ಬಗ್ಗೆ 30 ಕ್ಕೂ ಹೆಚ್ಚು ಗಣ್ಯರು, ಕುಟುಂಬ ಸದಸ್ಯರು ಮತ್ತು ಅಪ್ತ ಸ್ನೇಹಿತರು ತೇಜಸ್ವಿಯವರೊಂದಿಗಿನ ತಮ್ಮನೆನಪು, ಅನುಭವ, ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.ಈ ಸರಣಿಯ ಪ್ರಾಸ್ತಾವಿಕ ಕಂತು ‘ತೇಜಸ್ವಿ ಎಂಬ ವಿಸ್ಮಯ – ಸಾಕ್ಷ್ಯಚಿತ್ರದ ಮುನ್ನುಡಿ’ ಈಗಾಗಲೇ ಬಿಡುಗಡೆಯಾಗಿದ್ದು ಓದುಗರು,ಸಾಹಿತ್ಯಾಭಿಮಾನಿಗಳು, ವೀಕ್ಷಕರು ಬಹುಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದೀಗ ಸಾಕ್ಷ್ಯಚಿತ್ರ ಸರಣಿಯು 28ನೇ ಜುಲೈ 2024 ರಂದು ಭಾನುವಾರ ಬೆಳಿಗ್ಗೆ 10:00 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಮಾಜಿ ಉಪ-ಮುಖ್ಯಮಂತ್ರಿ ಹಾಗು ಮಲ್ಲೇಶ್ವರಂನ ಹಾಲಿ ಶಾಸಕರುಗಳಾದ ಡಾ ಸಿ.ಎನ್. ಅಶ್ವಥ್ ನಾರಾಯಣ್ ಅವರಿಂದ ಲೋಕಾರ್ಪಣೆಯಾಗಲಿದೆ.29 ಜುಲೈ 2024 ರಂದು ಸೋಮವಾರ ಮಧ್ಯಾಹ್ನ 12:00-1:30 ರವರೆಗೆ ಸಾಕ್ಷ್ಯಚಿತ್ರ ಸರಣಿಯನ್ನು ಪ್ರದರ್ಶಿಸಲಾಗುತ್ತದೆ.
‘ತೇಜಸ್ವಿ ಎಂಬ ವಿಸ್ಮಯ’ ಎಂಬ ಸಾಕ್ಷ್ಯಚಿತ್ರ ಸರಣಿಯ ಮೂಲಕ ತೇಜಸ್ವಿಯವರ ಜೀವನ ಮತ್ತು ಕೃತಿಗಳನ್ನು ಸಂಸ್ಕರಿಸಲು, ಆಚರಿಸಲು ಮಾಧ್ಯಮ ಅನೇಕ ಸಂಸ್ಥೆ ನಿಮ್ಮನ್ನು ಅದರಪೂರ್ವಕವಾಗಿ ಆಹ್ವಾನಿಸುತ್ತಿದೆ.