ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಗಾಳಿಯ ರಭಸಕ್ಕೆ ಈ ಕೆಳಕಂಡ ಸ್ಥಳಗಳಲ್ಲಿ ಮರ / ರೆಂಬೆ ಕೊಂಬೆಗಳು ರಸ್ತೆಗೆ ಮುರಿದು ಬಿದ್ದಿದ್ದು, ಅದರ ವಿವರ ಈ ಕೆಳಕಂಡಂತಿರುತ್ತದೆ.
1. ರೆಸಿಡೆನ್ಸಿ ರಸ್ತೆ ಬಳಿ ಮರ ಬಿದ್ದಿರುವ ಬಗ್ಗೆ:
ಬೆಂಗಳೂರು ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ಮೆಹಕ್ ಪರ್ಫ್ಯೂಮ್ಸ್ ಅಂಡ್ ಅಕ್ಸೆಸರೀಸ್, ರಾಡೋ ಸರ್ವೀಸ್ ಸೆಂಟರ್, ನಂ. 101, ನಿವಾರಣಾ ಕಟ್ಟಡ, ರಿಚ್ಮಂಡ್ ರಸ್ತೆ, ರಿಚ್ಮಂಡ್ ವೃತ್ತ, ಬೆಂಗಳೂರು 560025 ಇಲ್ಲಿ ನಿವೇಶನದ ಒಳಭಾಗದಲ್ಲಿ ಬೆಳೆದಿದ್ದ ಗುಲ್ಮರ್ ಮರವು ಗಾಳಿಯ ರಭಸಕ್ಕೆ ರಸ್ತೆಯಲ್ಲಿ ಸಂಚರಿಸುತ್ತಿದ್ದು ಆಟೋ ರಿಕ್ಷಾ ಸಂಖ್ಯೆ: KA 53 A 3832 ಮೇಲೆ ಮುರಿದು ಬಿದ್ದಿರುತ್ತದೆ.
ಆಟೋದಲ್ಲಿದ್ದ ಆಟೋ ಚಾಲಕರಾದ ದಿವಾಕರ, ವಯಸ್ಸು 42 ವರ್ಷ, ನಂ. 64, 4ನೇ ಅಡ್ಡರಸ್ತೆ, ಶಕ್ತಿ ಗಣಪತಿ ನಗರ, ಬಸವೇಶ್ವರನಗರ, ಬೆಂಗಳೂರು ಹಾಗೂ ಪ್ರಯಾಣಿಕರಾದ ಶ್ರೀ ಸ್ಟಾಲಿನ್, ನಂ. 42/5, 1ನೇ ಮಹಡಿ, ಅಡ್ವಾನ್ಸ್ ಎಲ್ಮರ್ ಕೇರ್ ಹತ್ತಿರ, ಸಿ.ಎಸ್.ಐ. ಕಾಲೋನಿ, ಹೆಣ್ಣೂರು ಮುಖ್ಯರಸ್ತೆ, ಕೊತ್ತನೂರು, ಬೆಂಗಳೂರು ಇವರಿಗೆ ಸಣ್ಣ ಗಾಯಗಳಾಗಿದ್ದು, ಗಾಯಾಳುಗಳಿಗೆ ರಿಪಬ್ಲಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಾಲಿಕೆಯ ವತಿಯಿಂದ ಕೊಡಿಸಲಾಗುತ್ತಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯಗಳಾಗಿರುವುದಿಲ್ಲ.
2. ಗವಿಪುರಂ ಎಕ್ಸ್ಟೆಂಷನ್ ಬಳಿ ಮರದ ಕೊಂಬೆ ಬಿದ್ದಿರುವ ಬಗ್ಗೆ:
ಬೆಂಗಳೂರು ನಗರದ ಗವಿಪುರಂ ಎಕ್ಸ್ಟೆಂಷನ್, ಕೆಂಪೇಗೌಡ ನಗರ, ಬೆಂಗಳೂರು ಇಲ್ಲಿನ ಸುಂಕೇನಹಳ್ಳಿ ಉದ್ಯಾನವನದಲ್ಲಿ ಗಾಳಿಯ ರಭಸಕ್ಕೆ ಮರದ ಸಣ್ಣ ಕೊಂಬೆಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನದ ಮುಂಭಾಗದ ಮೇಲೆ ಮುರಿದು ಬಿದ್ದಿದ್ದು, ಕೊಂಬಗಳು ಬಿದ್ದ ರಭಸಕ್ಕೆ ವಾಹನವು ಅಪಘಾತಕ್ಕೆ ಒಳಗಾಗಿರುತ್ತದೆ. ಸದರಿ ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಶ್ರೀ ಗಗನ್, ವಯಸ್ಸು 38 ವರ್ಷ ಹಾಗೂ ಇವರ ಮಗನಾದ ಯುವ, ವಯಸ್ಸು 10 ವರ್ಷ ಇವರಿಗೆ ಸಣ್ಣ ಗಾಯಗಳಾಗಿದ್ದು, ಗಾಯಾಳುಗಳಿಗೆ ಪಾಲಿಕೆಯ ವತಿಯಿಂದ ಶೇಖರ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗಿರುತ್ತದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯಗಳಾಗಿರುವುದಿಲ್ಲ.
3. ಬಿನ್ನಿಮಿಲ್ ಎಂಪ್ಲಾಯಿಸ್ ಕಾಲೋನಿ, 14ನೇ ಮುಖ್ಯರಸ್ತೆ, ಹಂಪಿನಗರ, ಅತ್ತಿಗುಪ್ಪೆ, ಬೆಂಗಳೂರು 560040 ಇಲ್ಲಿ ರಸ್ತೆ ಬದಿಯಲ್ಲಿ ಬೆಳೆದಿದ್ದ ಪೆಲ್ಟೋಪಾರಂ ಮರದ ಕೊಂಬೆಯು ಗಾಳಿ ರಭಸಕ್ಕೆ ರಸ್ತೆಯಲ್ಲಿದ್ದ ವಾಹನದ ಮೇಲೆ ಮುರಿದು ಬಿದ್ದಿದ್ದು, ರೆಂಬೆಯು ಬಿದ್ದ ರಭಸಕ್ಕೆ ವಾಹನವು ಸ್ಥಳದಲ್ಲಿಯೇ ಜಖಂಗೊಂಡಿರುತ್ತದೆ.
4. ವಾರ್ಡ್ ನಂ. 124, ಹೊಸಹಳ್ಳಿಯ 2ನೇ ಅಡ್ಡರಸ್ತೆ, ಅಂಬಾ ಭವಾನಿ ದೇವಸ್ಥಾನ ಹತ್ತಿರ, ಟೆಲಿಕಾಂ ಲೇಔಟ್, ಬೆಂಗಳೂರು ಇಲ್ಲಿ ರಸ್ತೆ ಬದಿಯಲ್ಲಿ ಬೆಳೆದಿದ್ದ ಮರದ ರೆಂಬೆಯು ಗಾಳಿಯ ರಭಸಕ್ಕೆ ರಸ್ತೆಯಲ್ಲಿದ್ದ ವಾಹನದ ಮೇಲೆ ಮುರಿದು ಬಿದ್ದಿದ್ದು, ರೆಂಬೆಯು ಬಿದ್ದ ರಭಸಕ್ಕೆ ವಾಹನವು ಸ್ಥಳದಲ್ಲಿಯೇ ಜಖಂಗೊಂಡಿರುತ್ತದೆ.
5. ಸುರಾನ ಕಾಲೇಜು ಹತ್ತಿರ, ಸೌತ್ಎಂಡ್ ಸರ್ಕಲ್ ರಸ್ತೆ, ಬಸವನಗುಡಿ, ಬೆಂಗಳೂರು ಇಲ್ಲಿ ರಸ್ತೆ ಬದಿಯಲ್ಲಿ ಬೆಳೆದಿದ್ದ ಪೆಲೋಪಾರಂ ಮರದ ರೆಂಬೆಯು ಗಾಳಿಯ ರಭಸಕ್ಕೆ ರಸ್ತೆಗೆ ಅಡ್ಡಲಾಗಿ ಬಿದ್ದಿರುವುದನ್ನು ಸಂಚಾರಿ ಪೋಲಿಸ್ ಸಿಬ್ಬಂದಿಗಳು ತಿಳಿಸಿದ ಮೇರೆಗೆ ಅರಣ್ಯ ಘಟಕದ ಮರಗಳ ವ್ಯವಸ್ಥಿತ ನಿರ್ವಹಣಾ ತಂಡದಿಂದ ತೆರವುಗೊಳಿಸಲಾಗಿರುತ್ತದೆ. ಇದರಿಂದಾಗಿ ಕೆಲವು ಸಮಯ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿರುತ್ತದೆ.
ಮೇಲ್ಕಂಡ ಸ್ಥಳಗಳಲ್ಲಿ ಗಾಳಿಯ ರಭಸಕ್ಕೆ ಬಿದ್ದ ಮರಗಳನ್ನು ಬಿಬಿಎಂಪಿ – ಅರಣ್ಯ ಘಟಕದ ಮರಗಳ ನಿರ್ವಹಣಾ ತಂಡಗಳಿಂದ ತುರ್ತಾಗಿ ಮರ / ರೆಂಬೆ ಕೊಂಬೆಗಳು ತೆರವುಗೊಳಿಸಿ, ಸಾರ್ವಜನಕರಿಗೆ ಹಾಗೂ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಅನುವುಮಾಡಿಕೊಡಲಾಗಿರುತ್ತದೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರಾಣ ಹಾನಿಯಾಗಿರುವುದಿಲ್ಲ ಎಂದು ಪಾಲಿಕೆ ಅರಣ್ಯ ವಿಭಾಗದ ಉಪ ಸಂರಕ್ಷಣಾ ಅಧಿಕಾರಿಯಾದ ಬಿ.ಎಲ್.ಜಿ ಸ್ವಾಮಿ ರವರು ತಿಳಿಸಿರುತ್ತಾರೆ.