ನವದೆಹಲಿ: ಬೆಂಗಳೂರು ದಕ್ಷಿಣ ಹೆಸರನ್ನು ಬದಲಿಸುವುದು ಹೆಚ್.ಡಿ.ಕುಮಾರಸ್ವಾಮಿ ಅವರ ಹಣೆಯಲ್ಲಿ ಬರೆದಿಲ್ಲ ಎಂದು ಹೇಳಿಕೆ ನೀಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ಕೊಟ್ಟಿರುವ ಕೇಂದ್ರ ಸಚಿವರು, ಇಂಥ ಹೇಳಿಕೆಗಳನ್ನು ಕೊಟ್ಟವರು ಏನೇನಾಗಿದ್ದಾರೆ ಎನ್ನುವುದು ಗೊತ್ತಿದೆ ಎಂದು ಕುಟುಕಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು; ರಾಮನಗರದ ಹೆಸರು ಮರುಸ್ಥಾಪನೆ ಸಾಧ್ಯವಿಲ್ಲ. ಹಾಗಂತ ಡಿಸಿಎಂ ಹೇಳಿಕೆ ನೀಡಿದ್ದಾರೆ. ಹಿಂದೆ ಈ ರೀತಿಯ ಹೇಳಿಕೆಯನ್ನು ಬಹಳ ಜನ ಹೇಳಿದ್ದಾರೆ. ಆಮೇಲೆ ಅವರು ಏನೇನಾಗಿದ್ದಾರೆ ಎನ್ನುವುದನ್ನೂ ನೋಡಿದ್ದೇನೆ ಎಂದು ಮಾರ್ಮಿಕವಾಗಿ ಹೇಳಿದರು.
ಮುಂದಿನ ಹತ್ತು, ಇಪ್ಪತ್ತು ವರ್ಷ ಕರ್ನಾಟಕದಲ್ಲಿ ನಮ್ಮದೇ ಸರಕಾರ ಎಂದು ಅವರು ಹೇಳಿದ್ದಾರೆ. ಇಂತಹ ಹೇಳಿಕೆ ನೀಡಿ ಒಂದೇ ವರ್ಷದಲ್ಲಿ ಹೋದವರು ಬಹಳ ಜನ ಇದ್ದಾರೆ. ಈ ಸರಕಾರ ಮಾಡಿರುವ ಅಕ್ರಮಗಳು, ಜನವಿರೋಧಿ ಚಟುವಟಿಕೆಗಳು ಎಷ್ಟಿವೆ ಎಂದರೆ ನಾಳೆ ಬೆಳಗ್ಗೆ ಚುನಾವಣೆ ನಡೆದರೆ ಜನರೇ ಇವರನ್ನು ಮನೆಗೆ ಕಳಿಸುತ್ತಾರೆ. ಮುಂದಿನ ಹತ್ತು ವರ್ಷದ ಆಮೇಲೆ ಇರಲಿ ಎಂದು ಕುಮಾರಸ್ವಾಮಿ ಅವರು ಟಾಂಗ್ ಕೊಟ್ಟರು.
ನಾನು ಈ ಹೇಳಿಕೆಯನ್ನು ಕಾಟಾಚಾರಕ್ಕೆ ಹೇಳಿಲ್ಲ, ಇದು ನನ್ನ ಜೀವನದ ಗುರಿ. ಯಾವ ಘನಂಧಾರಿ ಕೆಲಸ ಮಾಡಿದ್ದಾರೆ ಎಂದು ಜನ ಇವರಿಗೆ ಮತ ಕೊಡುತ್ತಾರೆ? ಶಾಶ್ವತವಾಗಿ ಕೂರಲು ಗೂಟ ಹೊಡೆದುಕೊಂಡು ಇರಲಿ, ಅಲ್ಲಿರುತ್ತಾರೋ, ಇನ್ನೆಲ್ಲಿ ಇರುತ್ತಾರೋ ನೊಡೊಣ.. ರಾಮನಗರದ ವಿಚಾರದಲ್ಲಿ ಅವರ ನಿರ್ಧಾರಕ್ಕೆ ಅವರೇ ಪ್ರಾಯಶ್ಚಿತ ಪಡೆಬೇಕಾಗುತ್ತದೆ. ದೊಡ್ಡಮಟ್ಟದಲ್ಲಿ ಬೆಲೆ ತೆರಬೇಕಾಗುತ್ತದೆ ಎಂದು ಕೇಂದ್ರ ಸಚಿವರು ಎಚ್ಚರಿಕೆ ಕೊಟ್ಟರು.