ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರಂನ ಭೂಮಿಕಾ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ’ಪತ್ರಿಕಾ ವಿಚಾರ ಸಂಕೀರ್ಣ’ ಹಾಗೂ ’ಸಾಧಕರಿಗೆ ಸನ್ಮಾನ’ ಸಮಾರಂಭವನ್ನು ಆಯೋಜಿಸಲಾಗಿತ್ತು.
ಈ ಹೃದಯಸ್ಪರ್ಶಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಆಯೋಜಕರಿಂದ ಆತ್ಮೀಯವಾಗಿ ಸನ್ಮಾನಿತಗೊಂಡ ಅವಿಸ್ಮರಣೀಯ ಕ್ಷಣಗಳ ಧನ್ಯ ಸ್ಮರಣಿಕೆಯಿದು ಎಂದು ಪತ್ರಕರ್ತ ಎ.ಎನ್.ರಮೇಶ್.ಗುಬ್ಬಿ ತಿಳಿಸಿದರು.
ಶ್ರೀ ಶ್ರೀ ಕೃಷ್ಣ ಸ್ವಾಮೀಜಿಯವರ ದಿವ್ಯ ಸಾನಿಧ್ಯ, ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಡಾ. ವಿನಯಕುಮಾರ್ ಅವರ ಘನ ಅಧ್ಯಕ್ಷತೆ, ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಮಹದೇವಯ್ಯನವರು, ಬಿಜಾಪುರದ ಯೋಗ ಶಿರೋಮಣಿ ಬಸನಗೌಡರು ಹಾಗೂ ಇನ್ನಿತರ ಗಣ್ಯಮಾನ್ಯರ ಉಪಸ್ಥಿತಿ ಸಮಾರಂಭದ ಶೋಭೆಯನ್ನು ನೂರ್ಮಡಿಗೊಳಿಸಿತು. ಕರ್ನಾಟಕದ ವಿವಿಧ ಮೂಲೆಗಳಿಂದ ಆಗಮಿಸಿದ್ದ ನೂರಾರು ಪತ್ರಕರ್ತರು, ಸಾಧಕರು ಹಾಗೂ ಸಭಿಕರು ಸಂಜೆಗೆ ವಿಶೇಷ ಮೆರುಗು ತುಂಬಿದರು. ಸಮಾರಂಭದ ಅಭೂತಪೂರ್ವ ಯಶಸ್ಸಿಗೆ ಕಾರಣರಾದ ವಿನಯಕುಮಾರ್ ಹಾಗೂ ಕಾರ್ಯಕಾರಿ ಬಳಗದವರ ಶ್ರಮ ನಿಜಕ್ಕೂ ಶ್ಲಾಘನೀಯ ಹಾಗೂ ಅಭಿನಂದನೀಯ.
ಎತ್ತಣ ಮಾಮರ? ಎತ್ತಣ ಕೋಗಿಲೆ? ಎತ್ತಣಿಂದೆತ್ತ ಸಂಬಂಧವಯ್ಯಾ.. ಎನ್ನುವಂತೆ ನಿನ್ನೆಯ ಆ ಅಪೂರ್ವ ಸಮಾರಂಭದಲ್ಲಿ ಭಾಗಿಯಾಗಿದ್ದು ನನ್ನ ಸುಕೃತ. ಒಂದು ತಿಂಗಳಿಂದ ಸತತವಾಗಿ ನನಗೆ ಕರೆಮಾಡಿ, ಪ್ರೀತ್ಯಾದರಗಳಿಂದ ಆಗ್ರಹಿಸಿ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಮಾಡಿ, ’ರಮೇಶ್ ನೀವು ಮಾತನಾಡಲೇ ಬೇಕು’ ಎಂದು ಒತ್ತಾಯಿಸಿ, ಕಾವ್ಯ ವಾಚನವನ್ನೂ ಮಾಡಿಸಿ, ಆತ್ಮೀಯವಾಗಿ ಸನ್ಮಾನಿಸಿದ ಡಾ.ವಿನಯಕುಮಾರ್ ಅವರ ಅಕ್ಕರೆ, ಆಪ್ತತೆಗೆ ನಾನು ಆಭಾರಿ. ಡಾ.ಕುಲತುಂಗನ್, ಗಿರಿಜಾ ದಯಾನಂದ್, ಸ್ವರೂಪ್, ಶೋಭಾ ಮುರಳೀಕೃಷ್ಣ, ಮನೀಶ್ ಹಾಗು ವಿವಿಧ ರಂಗದ ಹಲವು ಸಹೃದಯರೊಂದಿಗೆ ಮುಖಾಮುಖಿಯಾಗಿದ್ದು ಸಂಜೆಗೆ ಮತ್ತಷ್ಟು ಸಾರ್ಥಕತೆ ನೀಡಿತು.
ಇಷ್ಟೆಲ್ಲ ನಿಮ್ಮೊಂದಿಗೆ ಅತೀವ ಸಂಭ್ರಮದಿಂದ ಹಂಚಿಕೊಳ್ಳಲು ಕಾರಣ ಮತ್ತು ಪ್ರೇರಣ ನನ್ನೊಲವಿನ ಅಕ್ಷರಬಂಧುಗಳು ನೀವು. ಕರಾವಳಿಯ ಕಾನನದೊಳಗೆ ಎಲೆಮರೆಕಾಯಂತಿದ್ದ ನನ್ನನ್ನು ಇಂತಹ ಮಹೋನ್ನತ ವೇದಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದು ಮತ್ತು ನನ್ನ ಎದೆಯ ಅಕ್ಷರಪ್ರಣತೆಗಳನ್ನು ಎಲ್ಲೆಡೆ ಹರಡುತ್ತಾ, ಹರಸಿ ಹಾರೈಸುತ್ತಿರುವುದು ನೀವು.