ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು, ಧಾರವಾಡ ಜಿಲ್ಲಾ ಘಟಕ ವತಿಯಿಂದ ಸಾಹಿತಿ ಎ. ಎ. ದರ್ಗಾರವರ “ಬೆಂದ ಬೆಳೆಸಿ” ಷಟ್ಪದಿ ಸಂಕಲನ ಲೋಕಾರ್ಪಣೆ ಹಾಗೂ ರಾಜ್ಯದ ವಿವಿಧ ಸಾಹಿತ್ಯ ಸಾಧಕರಿಗೆ ರಾಜ್ಯ ಮಟ್ಟದ ಬೇಂದ್ರೆ ಕಾವ್ಯ ಪುರಸ್ಕಾರ, ಧಾರವಾಡ ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ.
ಧಾರವಾಡ : ಸಾಹಿತಿಗಳು ಪರಂಪರೆಯ ಕೊಂಡಿಗಳು. ಗತದ ಚರಿತ್ರಕಾರರು. ಆದ್ದರಿಂದ ವಾಸ್ತವದ ನೆಲೆಗಟ್ಟಿನಲ್ಲಿ ಸಾಹಿತ್ಯ ರಚನೆಯಾಗಬೇಕು. ಜಾತಿ, ಮತ, ಪಂಥಗಳನ್ನು ಮೀರಿದ ಮೌಲ್ಯಗಳನ್ನು ಪ್ರತಿನಿಧಿಸುವ ಸಾಹಿತ್ಯ ಮಾತ್ರ ನಿಲ್ಲಬಲ್ಲದು. ನಮ್ಮ ಬರಹ ತಳ ಸಮುದಾಯದ ತಲ್ಲಣಗಳಿಗೆ ಧ್ವನಿಯಾಗಬೇಕು ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.
ಅವರು ಧಾರವಾಡ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಧಾರವಾಡ ಜಿಲ್ಲಾ ಘಟಕ ವತಿಯಿಂದ ನಗರದ ರಂಗಾಯಣ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಹಿತಿ ಎ. ಎ. ದರ್ಗಾ ವಿರಚಿತ “ಬೆಂದ ಬೆಳೆಸಿ” ಷಟ್ಪದಿ ಸಂಕಲನ ಲೋಕಾರ್ಪಣೆ ಹಾಗೂ “ಬೇಂದ್ರೆ” ಕಾವ್ಯ ಪುರಸ್ಕಾರ ಮತ್ತು ಕುಂದಗೋಳ ತಾಲೂಕು, ಧಾರವಾಡ ತಾಲೂಕುಗಳ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಧಾರವಾಡ ಜಿಲ್ಲಾ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವರ್ತಮಾನದಲ್ಲಿ ಪ್ರಶಸ್ತಿಗಳು ಮಾರಟಕ್ಕಿವೆ. ಅವಕಾಶಗಳು ರಾಜಕೀಯ ಪ್ರೇರಿತವಾಗಿವೆ. ಇವೆಲ್ಲಾ ಅನಿಷ್ಠಗಳನ್ನು ಮೆಟ್ಟಿನಿಲ್ಲಲೆಂದೇ ನಮ್ಮ ವೇದಿಕೆಯು ಹುಟ್ಟಿದ್ದು. ಎಲೆಮರೆಕಾಯಿಯಂತಹ ಸಾಧಕರನ್ನು ಸಾಮಾಜಿಕ ಮುನ್ನೆಲೆಗೆ ತರುವ ನಿಟ್ಟಿನಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಎ.ಎ.ದರ್ಗಾರವರು ವಿಶಿಷ್ಠ ಬರಹಗಾರರು. ಒಂಭತ್ತನೇ ಶತಮಾನದ ಷಟ್ಪದಿ ಛಂದಸ್ಸಿನ್ನು ಬಳಸಿ ವಾಸ್ತವ ನೆಲೆಗಟ್ಟಿನಲ್ಲಿ ವರ್ತಮಾನದ ತಲ್ಲಣಗಳಿಗೆ ಧ್ವನಿಯಾಗಿರುವುದು ವಿಶೇಷ. ದರ್ಗಾರವರ ಕವಿತೆಗಳಲ್ಲಿ ಸಮಸಮಾಜದ ಕನಸಿದೆ. ಮಾನವೀಯ ಮೌಲ್ಯಗಳ ಹೊಳವಿದೆ, ಅಪ್ಯಾಯಮಾನವಾದ ತುಡಿತವಿದೆ. ಇವರೊಬ್ಬ ನಮ್ಮೊಳಗಿನ ಮೌನ ಬರಹಗಾರರು. ಸಂಘಟಕರಾಗಿ, ಪ್ರಕಾಶಕರಾಗಿ, ಬರಹಗಾರರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ದರ್ಗಾರವರೊಬ್ಬ ಬಹುಮುಖ ಪ್ರತಿಭೆ ಎಂದರೆ ಅತಿಶಯೋಕ್ತಿಯಾಗಲಾರದು. ಬರಹಗಾರರು ಸಮಾಜವನ್ನು ಮೌನಿಯಾಗಿಯೇ ನೋಡಿ ಬರಹದಲ್ಲಿ ತಲ್ಲಣಗಳ ಚಿತ್ರಣವನ್ನು ಮೂಡಿಸಬೇಕಿದೆ. ಕವಿಗಳ ಕಾವ್ಯದೊಳಗಿನ ಮಾತಿನ ಹಿಂದೆ ಮೌನ ಬೆನ್ನತ್ತುತ್ತದೆ. ನಮ್ಮ ಬದುಕೆನ್ನುವುದೇ ಹೀಗೆ; ವೈರುಧ್ಯ ಮತ್ತು ವೈಪರೀತ್ಯಗಳನ್ನು ಒಡಲೊಳಗಿಟ್ಟುಕೊಂಡು ಕುದಿವ ಕಡಲಾಗುವ ಅನುಭವಗಳಿಗೆ, ಕೆಲವೊಮ್ಮೆ ಮಾತು ಸಾಕಾಗುವುದಿಲ್ಲ. ನರಳುವ ಕರುಳು -ಮೌನವನ್ನೇ ಮಾತಿಗೆ ದಾನ ಮಾಡುವ ವಿಪರ್ಯಾಸಕ್ಕೆ, ನಿಘಂಟುಗಳಲ್ಲಿ ಅರ್ಥ ಸಿಗುವುದಿಲ್ಲ. ಕಂಠಪಾಠವೆನ್ನುವಾಗ ನನ್ನ ಶಾಲಾದಿನಗಳ ಪ್ರಸಂಗವೊಂದನ್ನು ಇಲ್ಲಿ ಹೇಳಬೇಕೆನ್ನಿಸುತ್ತದೆ.ನನಗೆ ಷಟ್ಪದಿ ಕವನಗಳ ಬಗ್ಗೆ ಆಸಕ್ತಿ ಶಾಲಾ ದಿನಗಳಲ್ಲೇ ಮುಡಿತ್ತು. ನಮ್ಮಲ್ಲಿ ನಾಡಿನ ಬಗ್ಗೆ ಹೆಮ್ಮೆ ಮೂಡುವಂತೆ ಮಾಡಲು ಈ ಶ್ರೀಮಂತ ರೂಪಕಗಳ ಅವಶ್ಯಕತೆಯಿರಬಹುದು. ಶಾಲಾ ದಿನಗಳಲ್ಲಿ ಹೆಮ್ಮೆಯನ್ನು ಹುಟ್ಟು ಹಾಕುವ ಅಗತ್ಯವೂ ಇದೆ. ಆದರೆ ನನಗೆ ಆಗಲೇ ಪ್ರಶ್ನೆಗಳು ಮೂಡಿದ್ದವು. ಆ ಪ್ರಶ್ನೆಗಳು ನನ್ನ ಬಾಲ್ಯದ ಕೊರಗಾಗಿದ್ದವು ಎಂದು ತಮ್ಮ ಬಾಲ್ಯದ ಸಿಹಿ ನೆನಪುಗಳನ್ನು ಹಂಚಿಕೊಂಡರು.
ಸಾಹಿತಿ ಎ.ಎ.ದರ್ಗಾರವರ “ಬೆಂದ ಬೆಳೆಸಿ” ಕೃತಿ ಲೋಕಾರ್ಪಣೆ
ಹಿರಿಯ ಸಾಹಿತಿ ಶ್ರೀನಿವಾಸ ವಾಡಪ್ಪಿ ಅವರು ಮಾತನಾಡಿ ಎ.ಎ.ದರ್ಗಾರವರ “ಬೆಂದ ಬೆಳೆಸಿ” ಷಟ್ಪದಿ ಸಂಕಲನ ಛಂದಸ್ಸಿನಲ್ಲಿ ರಚಿತವಾದ ವಾಸ್ತವ ತಲ್ಲಣಗಳು. ದರ್ಗಾರವರ ಕವಿತೆಗಳು ಸಾಮಾಜಿಕ ಬದುಕಿನ ದರ್ಶನ ಮಾಡಿಸುತ್ತವೆ. ಆರು ಮುಖ್ಯ ಷಟ್ಪದಿ ಹಾಗೂ ಎರಡು ಉಪ ಷಟ್ಪದಿಗಳನ್ನೊಳಗೊಂಡ ಕಾವ್ಯ ರಸನೆಗಳು ಈ ಸಂಕಲನದಲ್ಲಿ ಒಡಮೂಡಿವೆ. ಶ್ರೀಗಂಧ ಇರಲಿಲ್ಲ; ಜಾಲಿಯ ಮರಗಳಿದ್ದವು. ಕೋಗಿಲೆ ಇರಲಿಲ್ಲ; ಕಾಗೆಗಳಿದ್ದವು. ನದಿಗಳಿರಲಿಲ್ಲ; ಹಳ್ಳಗಳಿದ್ದವು; ಕಡಲು ಇರಲಿಲ್ಲ; ಬಿರುಕು ಬಿಟ್ಟ ಕೆರೆಗಳಿದ್ದವು. ಶ್ರೀಮಂತ ಮಾತ್ರವಾದ ನೈಸರ್ಗಿಕ ರೂಪಿಕೆಗಳಿಗೆ ಮಾತ್ರ ಮನ್ನಣೆ ಕೊಡುವುದು ಅಸಮಾನತೆಯಷ್ಟೇ ಅಲ್ಲ ಅಮಾನವೀಯತೆ ಎನ್ನಿಸಿತು. ತುಂಬಿದ ಕಡಲ ನಾಡೂ ಹೌದು; ಬಿರುಕು ಬಿಟ್ಟ ಕೆರೆಗಳ ನಾಡೂ ಹೌದು. ಕೋಗಿಲೆ ಕಂಠದ ನಾಡೂ ಹೌದು; ನಿತ್ಯ ಕಾಣುವ ಕಾಗೆಗಳ ನಾಡೂ ಹೌದು. ಬಿರುಕು ಬಿಟ್ಟ ಕೆರೆಗಳ ಕಣ್ಣೀರು ಕಂಡು ಕಡಲ ಒಡಲಲ್ಲಿ ವಾತ್ಸಲ್ಯ ಮೂಡಬೇಕು. ಕಾಗೆಯ ಕಾರುಣ್ಯ, ಕೋಗಿಲೆಯ ಕಂಠದೊಳಗೆ ಒಂದಾಗಬೇಕು.ಈ ಮೂಲಕ ಕಾಗೆ ಕಾರುಣ್ಯದ ಕಣ್ಣಾಗುತ್ತದೆ. ಕಾಗೆ ಮತ್ತು ಕೋಗಿಲೆಯ ಸಂಬಂಧ ಸೌಹಾರ್ದದ ಸಹಜ ಸಂಕೇತವಾಗುತ್ತದೆ. ಕಾಗೆ- ಕೋಗಿಲೆಗಳ ನೈಸರ್ಗಿಕ ಸಹಜ ಸೌಹಾರ್ದವು ನಮ್ಮ ಸಮಾಜದ ಜೀವ ಶಕ್ತಿಯಾದಾಗ ನಮ್ಮದು ಹೆಮ್ಮೆ ಪಡುವ ನಿಜದ ನಾಡಾಗುತ್ತದೆ. ಕವಿಗಳೂ, ಧಾರ್ಮಿಕ ಕಲಿಗಳೂ, ರಾಜಕೀಯ ಹುಲಿಗಳು ಕಾಗೆಯಿಂದ ಸೌಹಾರ್ದದ ಪಾಠ ಕಲಿಯಬೇಕಾದ ಕಾಲ ಬಂದಿದೆ ಎಂದು ಕೋಗಿಲೆಯ ಕಂಠ ಬಣ್ಣಿಸುತ್ತಾ ಕವಿಗಳಿಗೆ ಕಿವಿ ಮಾತುಗಳನ್ನು ಹೇಳಿದರು.
೨೦೨೪ ನೇ ಸಾಲಿನ ರಾಜ್ಯ ಮಟ್ಟದ ಬೇಂದ್ರೆ ಕಾವ್ಯ ಪುರಸ್ಕಾರ ಪ್ರದಾನ
ಹಿರಿಯ ಕವಿ ಡಾ. ಬಸು ಬೇವಿನಗಿಡದ ನಾಡಿನ ಸಾಹಿತ್ಯ ಸಾಧಕರಿಗೆ ರಾಜ್ಯಮಟ್ಟದ ಬೇಂದ್ರೆ ಕಾವ್ಯ ಪುರಸ್ಕಾರ ಪ್ರದಾನ ಮಾಡಿದರು.
೨೦೨೪ರ ರಾಜ್ಯ ಮಟ್ಟದ ಬೇಂದ್ರೆ ಕಾವ್ಯ ಪುರಸ್ಕಾರಕ್ಕೆ ಸಂಧ್ಯ ದೀಕ್ಷಿತ್ ಹುಬ್ಬಳ್ಳಿ, ಧಾರವಾಡ ಜಿಲ್ಲೆ, ಕವಿತಾ ಸಾರಂಗಮಠ ರಾಣೇಬೆನ್ನೂರು, ಹಾವೇರಿ ಜಿಲ್ಲೆ. ಸೈಫುಲ್ಲಾ ಡಿ.ಎಂ. ಅರಸೀಕೆರೆ, ಹಾಸನ ಜಿಲ್ಲೆ. ಬಿ.ಯು ಭೈರಕದಾರ ರಾಮದುರ್ಗ, ಬೆಳಗಾವಿ ಜಿಲ್ಲೆ ಅವರಿಗೆ ನೀಡಿ ಗೌರವಿಸಲಾಯಿತು.
ಪದಗ್ರಹಣ ಹಾಗೂ ಅಧಿಕಾರ ಹಸ್ತಾಂತರ
ಇದೆ ವೇಳೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕುಂದಗೋಳ ತಾಲ್ಲೂಕಿನ ನೂತನ ಅಧ್ಯಕ್ಷರಾಗಿ ಎಂ. ಆರ್. ನದಾಫ್ ಅವರಿಗೆ ನಿಕಟಪೂರ್ವ ಅಧ್ಯಕ್ಷ ಎಚ್.ಎಂ.ಕರಿಕನ್ನಮ್ಮನವರ ಅಧಿಕಾರ ಹಸ್ತಾಂತರ ಮಾಡಿದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಧಾರವಾಡ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಶಿವು ಖನ್ನೂರ್ ಅವರಿಗೆ ಪದಗ್ರಹಣ ನೀಡಲಾಯಿತು. ರಾಜ್ಯ ಉಪಾಧ್ಯಕ್ಷೆ ಶಾಲಿನಿ ರುದ್ರಮುನಿ ಪದಗ್ರಹಣ ಕಾರ್ಯ ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದ ನಿರೂಪಣೆ ಎಚ್ ಎಮ್ ಕರಿಕನ್ನಮ್ಮನವರ್, ಸ್ವಾಗತ ಸುಹಾಸಿನಿ ಕುಕಡಳ್ಳಿ , ಪ್ರಾರ್ಥನೆ ಶಂಕರ ಪುರೋಹಿತ್ ನಡೆಸಿಕೊಟ್ಟರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಶಿವಮೊಗ್ಗ ಜಿಲ್ಲಾಧ್ಯಕ್ಷೆ ಡಾ. ಹಸೀನಾ ಎಚ್.ಕೆ. ಆಶಯ ನುಡಿಗಳನ್ನಾಡಿದರು. ವೇದಿಕೆ ಪರವಾಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಧಾರವಾಡ ಜಿಲ್ಲಾಧ್ಯಕ್ಷ ಎ. ಎ. ದರ್ಗಾ, ಶಿವಮೊಗ್ಗ ಜಿಲ್ಲಾಧ್ಯಕ್ಷೆ ಡಾ. ಎಚ್. ಕೆ . ಹಸೀನಾ, ಹಿರಿಯ ಸಾಹಿತಿ ಡಾ. ಬಸು ಬೇವಿನಗಿಡದ, ಲಕ್ಷ್ಮೀಕಾಂತ ಇಟ್ನಾಳ, ಸಂಧ್ಯಾ ಧೀಕ್ಷಿತ್, ವಿಕಾಸ್ ಹೊಸಮನಿ, ವೀರೇಶ್ ಕುಬಸದ, ಮಂಜುನಾಥ್ ಮಾಳಗಿ, ಪಾರ್ವತಿ ಹೆಮ್ಮಿಗೆ, ಸುಧಾ ಚ.ಹುಲಗೂರು, ಮಾಲತಿ ಮುದಕವಿ, ವೇದಿಕೆ ರಾಜ್ಯ ಉಪಾಧ್ಯಕ್ಷ ಶಾಲಿನಿ ರುದ್ರಮುನಿ, ಪ್ರಕಾಶಕಿ ಫರ್ವೀನ್ ದರ್ಗಾ, ಮಂದಾಕಿನಿ ಪುರೋಹಿತ್, ಭವಾನಿಗೌಡ, ರಮೇಶ್ ಇಂಗಳಗಿ, ಭಾವಸಂಗಮದ ಸ್ಥಾಪಕ ರಾಜೇಂದ್ರ ಪಾಟೀಲ ಹಾಗೂ ಮತ್ತಿತರ ಸಾಹಿತಿಗಳು ಮತ್ತು ಎಲ್ಲಾ ತಾಲೂಕುಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.