ಬೆಂಗಳೂರು: ಬಿಬಿಎಂಪಿ ವಶದಲ್ಲಿರುವ ಕೆರೆಗಳ ಒತ್ತುವರಿ ತೆರವಿಗೆ ಒತ್ತುವರಿ ಸರ್ವೆ ಹಾಗೂ ತೆರವುಗೊಳಿಸುವ ಕಾರ್ಯಜಾರಿಯಲ್ಲಿರುತ್ತದೆ. ಹೀಗಾಗಿ ಮಹದೇವಪುರ ವಲಯದ ದೊಡ್ಡನೆಕ್ಕುಂದಿ ಕೆರೆಯ ಒತ್ತುವರಿಯನ್ನು ತೆರವು ಕಾರ್ಯಾಚರಣೆ ಮಾಡಲಾಯಿತು.
ಮುಂದುವರಿದು, ಇತ್ತೀಚೆಗೆ ಮಹದೇವಪುರ ವಲಯದ ದೊಡ್ಡನೆಕ್ಕುಂದಿ ಕೆರೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಕೆರೆಯ ಸರ್ವೆ ಕಾರ್ಯ ನಡೆಸಿ 2 ಎಕರೆ 6 ಗುಂಟೆ ಖುಲ್ಲಾ ಪ್ರದೇಶವು ಒತ್ತುವರಿಯಾಗಿರುವುದಾಗಿ ತಿಳಿಸಿರುತ್ತಾರೆ.
ಅದರಂತೆ ವಲಯ ಆಯುಕ್ತರ ಹಾಗೂ ಕಂದಾಯ ಇಲಾಖೆಯ ಸಹಕಾರದೊಂದಿಗೆ ಕೆರೆಗಳು ವಿಭಾಗದ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ರವರುಗಳು ಪೊಲೀಸ್ ಸಹಯೋಗದೊಂದಿಗೆ 2 ಎಕರೆ 6 ಗುಂಟೆ ಪ್ರದೇಶದ ಒತ್ತುವರಿಯನ್ನು ತೆರವುಗೊಳಿಸಿ ಈ ಪ್ರದೇಶಕ್ಕೆ ತಂತಿ ಬೇಲಿ ಅಳವಡಿಸುವ ಕಾರ್ಯ ಪ್ರಾರಂಭಿಸಿರುತ್ತಾರೆ.
ಈ ಒತ್ತುವರಿ ಪ್ರದೇಶದ ಮಾರುಕಟ್ಟೆ ಮೌಲ್ಯವು ಸುಮಾರು 75 ಕೋಟಿ ರೂ. ಗಳಾಗಿರುತ್ತದೆಂದು ತಿಳಿದುಬಂದಿರುತ್ತದೆ. ಸದರಿ ಕೆರೆಯು ಒತ್ತುವರಿ ಮುಕ್ತವಾಗಿರುತ್ತದೆ ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ರವರು ತಿಳಿಸಿರುತ್ತಾರೆ.