ಬೆಂಗಳೂರು: ಉದ್ಯಮಶೀಲ ಕನ್ನಡಿಗರು ಸೇರಿಕೊಂಡು ಸ್ಥಾಪಿಸಿರುವ ಅಲ್ಟ್ರಾವಯಲೆಟ್ ಇ.ವಿ. ಮೋಟಾರ್ ಸೈಕಲ್- ಎಫ್77 ರಫ್ತು ವಹಿವಾಟಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮಂಗಳವಾರ ಚಾಲನೆ ನೀಡಿದರು.
ಜಿಗಣಿ ಕೈಗಾರಿಕಾ ಪ್ರದೇಶದಲ್ಲಿನ ಇವಿ ಮೋಟಾರ್ ಸೈಕಲ್ ಉತ್ಪಾದನಾ ಘಟಕದಲ್ಲಿ ಯೂರೋಪ್ ದೇಶಗಳಿಗೆ ರಫ್ತು ಮಾಡಲು ಸಚಿವರು ಹಸಿರು ನಿಶಾನೆ ತೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯೂರೋಪಿನ ಹಲವು ರಾಷ್ಟ್ರಗಳಿಗೆ ನಡೆಯಲಿರುವ ಈ ರಫ್ತು ವಹಿವಾಟು ಕರ್ನಾಟಕ ಮತ್ತು ಭಾರತದಲ್ಲಿ ಕ್ರಾಂತಿಕಾರಿ ಮೈಲುಗಲ್ಲಾಗಿದೆ. ಇದು ನಮಗೊಂದು ರೀತಿ ಬೈಕ್ ವಲಯದಲ್ಲಿ ಟೆಸ್ಲಾ ರೀತಿಯದ್ದಾಗಿದೆ ಎಂದು ಬಣ್ಣಿಸಿದರು.
ಕನ್ನಡಿಗರಾದ ನಾರಾಯಣ ಸುಬ್ರಹ್ಮಣ್ಯ ಮತ್ತು ನೀರಜ್ ರಾಜಮೋಹನ್ ಸೇರಿಕೊಂಡು ಸ್ಥಾಪಿಸಿರುವ ಕಂಪನಿಗೆ ಸರಕಾರವು ಸಂಪೂರ್ಣ ಸಹಕಾರ ಕೊಡಲಿದೆ. ಇದಕ್ಕಾಗಿ ನಾವು ನಿಯಮಗಳಿಗೆ ಅಂಟಿಕೊಳ್ಳದೆ ಒಂದು ಹೆಜ್ಜೆ ಮುಂದಿಡಲೂ ಸಿದ್ಧ. ಕಂಪನಿಯ ಮುಖ್ಯಸ್ಥರನ್ನು ನಾನು ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಕರೆದುಕೊಂಡು ಹೋಗುತ್ತೇನೆ ಎಂದು ಅವರು ಆಶ್ವಾಸನೆ ನೀಡಿದರು.
ಅಲ್ಟ್ರಾವಯಲೆಟ್ ಇವಿ ಮೋಟಾರು ಸೈಕಲ್ ಜರ್ಮನಿ, ಟರ್ಕಿ, ಸ್ಪೇನ್ ದೇಶಗಳಿಗೆ ಹೋಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದರಿಂದ ಬೆಂಗಳೂರಿನ ಖ್ಯಾತಿಗೆ ಇನ್ನೊಂದು ಗರಿ ಮೂಡಿದೆ. ಇದಕ್ಕಾಗಿ ಎಲ್ಲರನ್ನೂ ಅಭಿನಂದಿಸುವೆ ಎಂದು ಅವರು ನುಡಿದರು.
ಕಂಪನಿಯ ಸಿಇಒ ಮತ್ತು ಸಂಸ್ಥಾಪಕ ನಾರಾಯಣ ಸುಬ್ರಹ್ಮಣ್ಯ, ಸಹ ಸಂಸ್ಥಾಪಕ ನೀರಜ್ ರಾಜಮೋಹನ್ ಇದ್ದರು.