ಬೆಂಗಳೂರು: ದಸರಾ ಹಬ್ಬದ ಒಳಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೇರವೇತನ ಪೌರಕಾರ್ಮಿಕರಿಗೆ “ಖಾಯಂ ಭಾಗ್ಯ” ಕೊಟ್ಟು, ಖಾಯಂ ಪಟ್ಟಿ ಬಿಡುಗಡೆ ಮಾಡಲೇಬೇಕೆಂದು ಕರ್ನಾಟಕ ರಾಜ್ಯ ನಗರಸಭೆ,ಪುರಸಭೆ, ಪೌರಕಾರ್ಮಿಕರ ಮಹಾ ಸಂಘದಿಂದ ಒತ್ತಾಯ ಮಾಡಲಾಯಿತು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿ ಗೋಷ್ಠಿ ನಡೆಸಿ ರಾಜ್ಯ ಸಫಾಯಿಕರ್ಮಚಾರಿ ಆಯೋಗದ ರಾಜ್ಯಾಧ್ಯಕ್ಷರೂ, ಮೈಸೂರು ನಗರ ಪಾಲಿಕೆಯ ಮಾಜಿ ಮಹಾಪೌರರಾದ ನಾರಾಯಣ ಅವರು ಮಾತನಾಡಿ, ರಾಜ್ಯದಲ್ಲಿ ಪೌರ ಕಾರ್ಮಿಕರು ದಿನಗೂಲಿ ನೌಕರರಾಗಿ ದುಡಿಯುತ್ತಿದ್ದು ಜೀವನದ ಭದ್ರತೆ ಇಲ್ಲದಂತೆ ಆಗಿದೆ, ಹೀಗಾಗಿ ಸರ್ಕಾರ ಪೌರ ಕಾರ್ಮಿಕರನ್ನು ಖಾಯಂ ಆಗಿ ನೇಮಕ ಮಾಡಿಕೊಳ್ಳಬೇಕು, ಸಂಪುಟಸಭೆಯಲ್ಲಿ ಚರ್ಚೆ ನಡೆಸಿ ಒಮ್ಮತದ ನಿರ್ಧಾರಕ್ಕೆ ಬಂದು ಈ ಕೂಡಲೇ ಆದೇಶಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯ ಮಾಡಿದರು.
ಈ ಮೇಲ್ಕಾಣಿಸಿದ ಮಹಾಸಂಘದ ವತಿಯಿಂದ ಹಲವಾರು ಹೋರಾಟಗಳ ಫಲವೇ ರಾಜ್ಯಾದ್ಯಂತ 24500 ಪೌರಕಾರ್ಮಿಕರನ್ನು ಖಾಯಂ ಮಾಡುವುದಾಗಿ ಹಿಂದಿನ ಸರಕಾರ ಹಾಗೂ ಇಂದಿನ ಸರಕಾರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದರು ಸಹ ಇಲ್ಲಿಯವರವಿಗೂ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇರವೇತನ ಪೌರಕಾರ್ಮಿಕರ ಖಾಯಂ ಪಟ್ಟಿ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿರುವುದು ದುರ್ದೈವದ ಸಂಗತಿ.
ಅದೇ ರೀತಿ ರಾಜ್ಯದ ಇನ್ನೂ ಕೆಲವೊಂದು ಜಿಲ್ಲೆಗಳಲ್ಲಿ (ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಕಲಬುರಗಿ) 2018ರಲ್ಲೇ ಗುತ್ತಿಗೆ ಪದ್ಧತಿ ರದ್ದಾಗಿದ್ದರೂ, ಸಹ ಇಂದಿಗೂ ಗುತ್ತಿಗೆ ಪದ್ಧತಿಯಲ್ಲೇ ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿರುವುದು ಗಮನಾರ್ಹ ವಿಷಯವಾಗಿರುತ್ತದೆ.
ಸರ್ಕಾರ ಹಾಗೂ ನಗರಪಾಲಿಕೆಗಳಿಗೆ ಕೆಲವೊಂದು ಬೇಡಿಕೆಗಳನ್ನು ಇಡಲಾಗಿದ್ದು ಈ ಕೂಡಲೇ ಜಾರಿಗೊಳಿಸಲು ಒತ್ತಾಯಿಸಿದರು.
1) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಈಗಾಗಲೇ ಘೋಷಿಸಿದಂತೆ, ದಸರಾ ಹಬ್ಬದ ಒಳಗಾಗಿ ಖಾಯಂ ಪಟ್ಟಿ (ಮೊದಲನೇ ಹಂತ 3673 ಹಾಗೂ ಎರಡನೇ ಹಂತ 11307 ಒಟ್ಟು 14980) ಬಿಡುಗಡೆ ಮಾಡಲೇಬೇಕು.
2) ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ (ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ) ಇನ್ನೂ ಗುತ್ತಿಗೆ ಪದ್ಧತಿ ಮುಂದುವರೆಯುತ್ತಿದ್ದು, ಈ ಕೂಡಲೇ ಗುತ್ತಿಗೆ ಪದ್ಧತಿ ರದ್ದು ಮಾಡಿ ಖಾಯಂ ಮಾಡಬೇಕು.
3) ಬೆಂಗಳೂರು ಮಹಾನಗರ ಪಾಲಿಕೆಯೂ ಸೇರಿದಂತೆ ರಾಜ್ಯಾದ್ಯಂತ ಕಸಸಾಗಾಣಿಕೆ ಲಾರಿ ಚಾಲಕರು, ಅಟೋ ಚಾಲಕರು, ಹೆಲ್ಪರ್ಗಳು ಹಾಗೂ ಕ್ಲೀನರ್ಗಳನ್ನು ಗುತ್ತಿಗೆ ಪದ್ದತಿಯಿಂದ ವಿಮುಕ್ತಿಗೊಳಿಸಿ ನೇರವೇತನ ಅಡಿಯಲ್ಲಿ ನೇಮಿಸಿಕೊಳ್ಳಬೇಕು.
4) ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಒಳಚರಂಡಿ ಮಂಡಳಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರನ್ನು ಖಾಯಂ ಮಾಡಲೇಬೇಕು.
5) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 60 ವರ್ಷ ತುಂಬಿದ ನೇರವೇತನ ಪೌರಕಾರ್ಮಿಕರಿಗೆ, ನಿವೃತ್ತಿ ವೇತನ ಕೊಡಲು ಆದೇಶವಾಗಿದ್ದರೂ ಸಹ ಇದುವರೆಗೂ ಬಿಡುಗಡೆ ಮಾಡಿರುವುದಿಲ್ಲ, ಈ ಕೂಡಲೇ ನಿವೃತ್ತಿ ವೇತನ ಬಿಡುಗಡೆ ಮಾಡಬೇಕು. ಹಾಗೆ ನಿವೃತ್ತಿಯಾದ ಹಾಗೂ ಮರಣ ಹೊಂದಿದ ಕುಟುಂಬದ ಅವಲಂಬಿತರಿಗೆ ಹುದ್ದೆ ನೀಡಬೇಕು.
6) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ವಚ್ಛತಾ ಕಿರಿಯ ಆರೋಗ್ಯ ಪರಿವೀಕ್ಷಕರುಗಳನ್ನು ಪಾಲಿಕೆಯೇ ನೇರವೇತನ ಅಡಿಯಲ್ಲಿ ನೇಮಿಸಿಕೊಳ್ಳಬೇಕು.
ಮೇಲೆ ಇರುವ ಬೇಡಿಕೆಗಳನ್ನು ಕೂಡಲೇ ಅಂದರೆ ದಸರಾ ಹಬ್ಬದ ಒಳಗಾಗಿ ಈಡೇರಿಸಬೇಕು ಇಲ್ಲದಿದ್ದರೆ ನಗರದಲ್ಲಿ ಪೌರ ಕಾರ್ಮಿಕರು ಕಸವನ್ನು ತುಂಬದೇ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಬೆಂಗಳೂರು ನಗರ ಅಧ್ಯಕ್ಷ ಸುರೇಶ್, ರಾಜ್ಯ ಕಾರ್ಯಾಧ್ಯಕ್ಷ ಎಂ ನಾಗರಾಜ, ಪ್ರದಾನ ಕಾರ್ಯದರ್ಶಿ ವೆಂಕಟೇಶ್ವರಲು, ಉಪಾಧ್ಯಕ್ಷರಾದ ಶ್ರೀನಿವಾಸ್, ಸುಧಾಕರ್, ಮಹಿಳಾ ಘಟಕ ಲಕ್ಷ್ಮೀ, ಸೇರಿದಂತೆ ಸಂಘದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.