ಬೆಂಗಳೂರು: ಕಾವೇರಿ 5 ನೇ ಹಂತ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆಯಾದ ಬೆನ್ನಲ್ಲೇ ಟಿ.ಕೆಹಳ್ಳಿಯಿಂದ ನೀರು ಪಂಪಿಂಗ್ ಪ್ರಾರಂಭಿಸಲಾಗಿತ್ತು. ಸುಮಾರು 120 ಕಿಲೋಮೀಟರ್ ದೂರದಿಂದ ಬೃಹದಾಕಾರಾದ ಪೈಪ್ಲೈನ್ ಮೂಲಕ ಬೆಂಗಳೂರಿಗೆ ಕಾವೇರಿ ನೀರು ಬಂದು ತಲುಪಿದೆ. ನಾಳೆ ಬೆಂಗಳೂರಿನ ಬನಶಂಕರಿ 6 ನೇ ಹಂತ, ಎಸ್ಎಂವಿ 6 ನೇ ಹಂತ ಹಾಗೂ ಗೊಟ್ಟಿಗೇರೆ ಜಿಎಲ್ಆರ್ ಮೂಲಕ ಸರಬರಾಜು ಮಾಡಬೇಕಾದ ಪ್ರದೇಶಗಳಲ್ಲಿ ಸಂಫರ್ಕ ಪಡೆದಿರುವ ಗ್ರಾಹಕರಿಗೆ ನೀರು ಸಮರ್ಪಕ ಪೂರೈಕೆ ಮಾಡುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ಸೂಚನೆ ನೀಡಿದರು.
ನಿನ್ನೆ ಸಂಪೂರ್ಣವಾಗಿ ಕಾರ್ಯಕ್ರಮ ಉದ್ಘಾಟನೆ ಮಾಡುವಲ್ಲಿ ಶ್ರಮಿಸಿದ ಜಲಮಂಡಳಿಯು ಇಂದು ಬಿಡುವು ತಗೆದುಕೊಳ್ಳದೆ ಸಭೆ ನಡೆಸಿದರು. ಜಲಮಂಡಳಿ ಅಧ್ಯಕ್ಷರು ಡಾ ರಾಮ್ ಪ್ರಸಾತ್ ಮನೋಹರ್ ಅವರು ಬೆಂಗಳೂರು ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿ ಪ್ರಧಾನ ಮುಖ್ಯ ಇಂಜಿನೀಯರ್, ಎಲ್ಲಾ ವಲಯಗಳ ಮುಖ್ಯ ಇಂಜಿನೀಯರ್ಗಳು, ಕಾರ್ಯಪಾಲಕ ಇಂಜಿನೀಯರ್ಗಳು, ಸಹಾಯಕ ಕಾರ್ಯಪಾಲಕ ಇಂಜಿನೀಯರ್ಗಳಿಗೆ ಸೂಚನೆ ನೀಡಿದರು.
ಬೆಂಗಳೂರು ತಲುಪಿದ ಕಾವೇರಿ 5 ನೇ ಹಂತದ ನೀರು:
ಲೋಕಾರ್ಪಣೆಯ ನಂತರ ಪಂಪ್ಗಳನ್ನು ಪ್ರಾರಂಭಿಸಲಾಗಿತ್ತು, ಸುಮಾರು 120 ಕಿಲೋಮೀಟರ್ ದೂರದಿಂದ ಬೃಹದಾಕಾರಾದ ಪೈಪ್ಗಳ ಮೂಲಕ ಹಾರೋಹಳ್ಳಿ, ತಾತಗುಣಿ ಪಂಪಿಂಗ್ ಸ್ಟೇಷನ್ನಲ್ಲಿ ಪಂಪ್ ಮಾಡಿದ ನೀರು ಇಂದು ಸಂಜೆ ಬೆಂಗಳೂರಿಗೆ ತಲುಪಿದೆ. ನಾಳೆ ಬನಶಂಕರಿ 6 ನೇ ಹಂತ, ಎಸ್ಎಂವಿ 6 ನೇ ಹಂತ ಹಾಗೂ ಗೊಟ್ಟಿಗೆರೆ ಜಿಎಲ್ಆರ್ ನಿಂದ ಹಂತ ಹಂತವಾಗಿ ಸರಬರಾಜು ಮಾಡಬೇಕಾದ ಪ್ರದೇಶಗಳಿಗೆ ಸರಬರಾಜು ಮಾಡಲಾಗುವುದು ಎಂದು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
110 ಹಳ್ಳಿಗಳಿಗೆ ಕಾವೇರಿ ನೀರು ಹರಿಸಲು ಸಿದ್ದತೆ ಕೈಗೊಳ್ಳಿ:
ಈಗಾಗಲೇ 110 ಹಳ್ಳಿಗಳ ವ್ಯಾಪ್ತಿಯಲ್ಲಿ ಸುಮಾರು 55 ಸಾವಿರ ಸಂಪರ್ಕ ನೀಡಲಾಗಿದೆ. ಈ ಸಂಪರ್ಕಗಳಿಗೆ ಕಾವೇರಿ 4 ನೇ ಹಂತದಲ್ಲಿ ಲಭ್ಯವಿದ್ದ ನೀರಿನಲ್ಲೇ ಆಗಾಗ್ಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ಹಲವಾರು ಹಳ್ಳಿಗಳಲ್ಲಿ 10 ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತಿತ್ತು. ಈಗ ಕಾವೇರಿ 5 ನೇ ಹಂತ ಲೋಕಾರ್ಪಣೆ ಆಗಿರುವ ಹಿನ್ನಲೆಯಲ್ಲಿ ಬೆಂಗಳೂರು ಜಲಮಂಡಳಿ ಹೆಚ್ಚಿನ ನೀರು ಲಭ್ಯವಾಗುತ್ತಿದೆ. ಈ ನೀರನ್ನು ಈಗಾಗಲೇ ಸಂಪರ್ಕ ಹೊಂದಿರುವ ಜನರಿಗೆ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ನಿರ್ದೇಶನ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಸಮರ್ಪಕವಾಗಿ ಹಳ್ಳಿಗಳಿಗೆ ನೀರು ಸರಬರಾಜು ಪ್ರಕ್ರಿಯೆಯನ್ನು ಹಂತಹಂತವಾಗಿ ಪ್ರಾರಂಭಿಸಲು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಮೊದಲ ಹಂತದಲ್ಲಿ 150 ಎಂಎಲ್ಡಿ ಕಾವೇರ 5 ನೇ ಹಂತದ ನೀರು:
ಕಾವೇರಿ 5 ನೇ ಹಂತದ ಲೋಕಾರ್ಪಣೆಯಿಂದ ಬೆಂಗಳೂರು ನಗರಕ್ಕೆ 775 ಎಂಎಲ್ಡಿಯಷ್ಟು ನೀರು ಲಭ್ಯವಿದೆ. ಇಷ್ಟು ಪ್ರಮಾಣದ ನೀರು ಸುಮಾರು 4 ಲಕ್ಷ ಸಂಪರ್ಕಗಳಿಗೆ ಹಾಗೂ 50 ಲಕ್ಷ ಜನರಿಗೆ ಅಗತ್ಯವಿರುವ ನೀರು. ಈಗ ಕೇವಲ 55 ಸಾವಿರ ಸಂಪರ್ಕಗಳಿದ್ದು ಇವುಗಳಿಗೆ 150 ಎಂಎಲ್ಡಿ ನೀರು ಸಾಕಾಗಲಿದೆ. ನೀರಿನ ಸದುಪಯೋಗ ಮಾಡುವ ನಿಟ್ಟಿನಲ್ಲಿ, ಹಾಗೆಯೇ ಜಲಮಂಡಳಿಗೆ ಆರ್ಥಿಕ ಹೊರೆ ಹೆಚ್ಚಾಗದೇ ಇರದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಅವಶ್ಯಕತೆ ಇರುವ 150 ಎಂಎಲ್ಡಿಯಷ್ಟು ನೀರನ್ನು ಮಾತ್ರ ಪಂಪ್ ಮಾಡಲಾಗುತ್ತಿದೆ.
53 ಹಳ್ಳಿಗಳಲ್ಲಿ 55 ಸಾವಿರ ಸಂಪರ್ಕ:
110 ಹಳ್ಳಿಗಳ ವ್ಯಾಪ್ತಿಯಲ್ಲಿನ ಕೇವಲ 53 ಗ್ರಾಮಗಳಲ್ಲಿ ಸುಮಾರು 55 ಸಾವಿರ ನೀರಿನ ಸಂಫರ್ಕವನ್ನು ಪಡೆದುಕೊಂಡಿದ್ದಾರೆ. ಈ ಸಂಪರ್ಕಗಳಿಗೆ ನೀರು ಸರಬರಾಜಿನ ಷ್ಯೆಡ್ಯೂಲ್ ಮಾಡಿ ರೊಟೇಷನ್ ಮೂಲಕ ನೀರು ಹರಿಸಬೇಕು. ಹಾಗೆಯೇ, ಇನ್ನುಳಿದ 57 ಗ್ರಾಮಗಳಲ್ಲಿ ನೀರಿನ ಸರಬರಾಜಿಗೆ ಜಲಮಂಡಳಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ. ಜನರು ಕಾವೇರಿ ನೀರಿನ ಸಂಫರ್ಕ ಪಡೆದುಕೊಳ್ಳಲು ಅಧಿಕಾರಿಗಳು ಮನವೊಲಿಸಬೇಕು. ಜನರು ಕೂಡಾ ಉತ್ತಮ ಗುಣಮಟ್ಟದ ನೀರು ಸರಬರಾಜು ಪಡೆಯಲು ಅಗತ್ಯ ಸಂಫರ್ಕ ಪಡೆದುಕೊಳ್ಳುವಂತೆ ಜಲಮಂಡಳಿ ಅಧ್ಯಕ್ಷರು ಕರೆ ನೀಡಿದರು.
110 ಹಳ್ಳಿಗಳಿಗೆ ಸರಬರಾಜಿನ ರೋಟೇಷನ್ ಷ್ಯೆಡ್ಯೂಲ್:
110 ಹಳ್ಳಿಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ಸಿಎಂಸಿ ಕೋರ್ ಝೋನ್ ನಂತೆಯೇ ರೊಟೇಷನ್ ಷೆಡ್ಯೂಲ್ ರಚಿಸಬೇಕು. ಈ ಷೆಡ್ಯೂಲ್ನಂತೆ ಹಳ್ಳಿಗಳಿಗೆ ನೀರು ಸರಬರಾಜು ಆಗಲಿದೆ. ಇದು ಸಮರ್ಪಕವಾಗಿ ಆಗುವ ನಿಟ್ಟಿನಲ್ಲಿ ಗಮನ ವಹಿಸುವಂತೆ ಅಧಿಕಾರಿಗಳಿಗೆ ಅಧ್ಯಕ್ಷರು ಸೂಚನೆ ನೀಡಿದರು.
ಈಗಾಗಲೇ ಸಂಪರ್ಕ ತಗೆದುಕೊಂಡರೂ ನೀರು ಸರಬರಾಜು ಆಗದೇ ಇರುವರಿಗೆ ಆದ್ಯತೆಯಲ್ಲಿ ನೀರು ಸರಬರಾಜು ಆಗಬೇಕು. ಹಾಗೆಯೇ, ಹೊಸ ಸಂಪರ್ಕ ಪಡೆದುಕೊಳ್ಳಲು ಆದ್ಯತೆ ನೀಡಬೇಕು ಎಂದು ಹೇಳಿದರು.
ಬೆಂಗಳೂರು ನಗರದಲ್ಲಿ ಸಮರ್ಪಕವಾಗಿ ನೀರು ಸರಬರಾಜು ಮಾಡುವ ಮೂಲಕ ಜನರಲ್ಲಿ ಬೆಂಗಳೂರು ಜಲಮಂಡಳಿಯ ಬಗ್ಗೆ ವಿಶ್ವಾಸ ಹೆಚ್ಚಾಗುವಂತೆ ಕ್ರಮ ವಹಿಸುವಂತೆ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ನಿರ್ದೇಶನ ನೀಡಿದ್ದಾರೆ. ಇದರ ಅನುಷ್ಠಾನಕ್ಕೆ ಕ್ರಮಕೈಗೊಳ್ಳುವಂತೆ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಸೂಚನೆ ನೀಡಿದರು.