ಬೆಂಗಳೂರು: ಬಿಬಿಎಂಪಿ ಒಡೆತನದ ನರ್ಸರಿಯಿಂದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಲ್ಲಿ ಕಲಿಕಾ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಪ್ರಥಮ್ ಎಜುಕೇಶನ್ ಫೌಂಡೇಶನ್ ಕಲಿಕಾ ಸುಧಾರಣೆ ಕಾರ್ಯಕ್ರಮವನ್ನು 2023-24 ಶೈಕ್ಷಣಿಕ ಸಾಲಿನಿಂದ ನಡೆಸಲಾಗುತ್ತಿದೆ ಎಂದು ಶಿಕ್ಷಣ ವಿಭಾಗದ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ರವರು ತಿಳಿಸಿದರು.
ಪ್ರಥಮ್ ಎಜುಕೇಶನ್ ಫೌಂಡೇಶನ್ ಸಹಭಾಗಿತ್ವದಲ್ಲಿ ಬಿಬಿಎಂಪಿಯು ಜೂನ್ 2023ರಿಂದ ನರ್ಸರಿ, 1-3ನೇ ತರಗತಿ, 4-5ನೇ ತರಗತಿ ಹಾಗೂ 6-7ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಲ್ಲಿ ಕಲಿಕಾ ಮಟ್ಟವನ್ನು ಹೆಚ್ಚಿಸಿ ಫಲಿತಾಂಶಗಳನ್ನು ಹೆಚ್ಚಿಸಲು ಕಲಿಕಾ ಸುಧಾರಣೆ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಈ ಸಂಸ್ಥೆಯು ಅಭಿವೃದ್ಧಿ ಪಡಿಸಿದ ಬೋಧನಾ-ಕಲಿಕಾ ವಿಧಾನ, ವಿಷಯ/ವಸ್ತು ಮತ್ತು ಕಾರ್ಯಕ್ರಮ ವಿನ್ಯಾಸವನ್ನು ಬಳಸಿಕೊಂಡು ವಿದ್ಯಾರ್ಥಿಗಳಲ್ಲಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಪಾಲಿಕೆ ಜೊತೆ ಕೈಜೋಡಿಸಿದೆ.
ಪಾಲಿಕೆ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಲ್ಲಿ ಕಲಿಕೆಯ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಣ ವಿಭಾಗದ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ರವರು, ಪ್ರಥಮ್ ಸಂಸ್ಥೆಯ ಸಿಇಒ ಡಾ. ರುಕ್ಮಿಣಿ ಬ್ಯಾನರ್ಜಿ ಅವರ ಜೊತೆ ಚರ್ಚಿಸಿ ಕಲಿಕಾ ಸುಧಾರಣಾ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದಾರೆ. ಈ ಕಾರ್ಯಕ್ರಮದ ಮೂಲಕ ನರ್ಸರಿಯ ಮಕ್ಕಳಿಂದ ಹಿರಿಯ-ಪ್ರಾಥಮಿಕ ಶ್ರೇಣಿಯವರೆಗೆ ಕಲಿಕೆಯ ಚಟುವಟಿಕೆಗಳಲ್ಲಿ ವಿನೂತನ ಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ.
ಶಿಕ್ಷಕರಿಗೆ ಮಾರ್ಗದರ್ಶನ ಹಾಗೂ ತರಬೇತಿ:
ಬಿಬಿಎಂಪಿ ಒಡೆತನದಲ್ಲಿರುವ 16 ಪ್ರಾಥಮಿಕ ಶಾಲೆಗಳು ಮತ್ತು 93 ನರ್ಸರಿ ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ. ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯಾವೆಲ್ಲಾ ಕ್ರಮಗಳನ್ನು ಅನುಸಿರಸಬೇಕು, ಏನೆಲ್ಲಾ ಯೋಜನೆಗಳನ್ನು ರೂಪಿಸಬೇಕು ಎಂಬುದರ ಕುರಿತು ಸುಮಾರು 260 ಶಿಕ್ಷಕರಿಗೆ ಮಾರ್ಗದರ್ಶನ ಹಾಗೂ ನುರಿತ ತರಬೇತಿ ನೀಡಲಾಗಿದೆ. ಇದರಿಂದ 7,766 ಮಕ್ಕಳು ಪ್ರಯೋಜನವನ್ನು ಪಡೆಯುತ್ತಿದ್ದಾರೆ.
9 ಮೇಲ್ವಿಚಾರಕರ ನಿಯೋಜನೆ:
ಪಾಲಿಕೆ ನರ್ಸರಿ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಲಿಕಾ ಸುಧಾರಣೆ ಕಾರ್ಯಕ್ರಮಗಳ ಮೇಲ್ವಿಚಾರಣೆಗಾಗಿ 9 ಮೇಲ್ವಿಚಾರಕರನ್ನು ನಿಯೋಜನೆ ಮಾಡಲಾಗಿದ್ದು, ಇವರು ನರ್ಸರಿ ಹಾಗೂ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸುಧಾರಣೆಗಳಾಗಿರುವ ಕುರಿತು ಪಟ್ಟಿ ವರದಿ ನೀಡುತ್ತಿದ್ದಾರೆ.
ವಿಭಾಗವಾರು ಚಟುವಟಿಕೆಗಳ ನಡೆಸುವಿಕೆ:
ಪಾಲಿಕೆ ನರ್ಸರಿ, 1-3ನೇ ತರಗತಿ, 4-5ನೇ ತರಗತಿ ಹಾಗೂ 6-7ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಭಾಗವಾರು ವಿಭಿನ್ನ ರೀತಿ ಹಾಗೂ ಸರಳ ರೀತಿಯಲ್ಲಿ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಕಲಿಕಾ ಮಟ್ಟಕ್ಕೆ ಅನುಗುಣವಾದ ಬೋಧನಾ – ಟೀಚಿಂಗ್ ಅಟ್ ದಿ ರೈಟ್ ಲೆವೆಲ್ (TaRL) ಮಾದರಿಯಲ್ಲಿ ತರಗತಿಯನ್ನು ನಡೆಸಲಾಗುತ್ತಿದೆ.
ಕಾರ್ಯಕ್ರಮದ ಪ್ರಮುಖ ಉದ್ದೇಶಗಳು:
* ನರ್ಸರಿಯಿಂದ ಹಿರಿಯ-ಪ್ರಾಥಮಿಕ ಶ್ರೇಣಿಯವರೆಗೆ ಮಕ್ಕಳ ಕಲಿಕಾ ಮಟ್ಟದ ಸುಧಾರಣೆ.
* ಸರ್ಕಾರಿ ಕೇಡರ್ನ ಮೇಲ್ವಿಚಾರಣಾ ಸಾಮರ್ಥ್ಯಗಳನ್ನು ನಿರ್ಮಿಸುವ ಮೂಲಕ ವ್ಯವಸ್ಥೆಯೊಳಗೆ ವ್ಯವಸ್ಥಿತ ಬದಲಾವಣೆ ತರುವುದು.
* ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನ ಮತ್ತು ತರಗತಿಯ ನಿರ್ವಹಣೆಗೆ ತರಬೇತಿ.
* ಮಾರ್ಗದರ್ಶನದ ಮೂಲಕ ಶಿಕ್ಷಕರ ಸಾಮರ್ಥ್ಯವನ್ನು ಹೆಚ್ಚಿಸುವುದು.
ಕಲಿಕಾ ಸುಧಾರಣೆ ಕಾರ್ಯಕ್ರಮದಿಂದ ಆದ ಬದಲಾವಣೆಗಳು:
* ಪಾಲಿಕೆ ನರ್ಸರಿ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಥಮ್ ಸಂಸ್ಥೆ ಮೂಲಕ ಕಲಿಕಾ ಸುಧಾರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡ ಬಳಿಕ ಶಾಲೆ ಹಾಗೂ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡುಬಂದಿವೆ. ಅವುಗಳು ಈ ಕೆಳಗಿನಂತಿವೆ.
* ಶಾಲೆಗಳಿಗೆ ನೀಡಿದ್ದ ಕಿಟ್ಗಳಲ್ಲಿದ್ದ ಬೋಧನಾ ಕಲಿಕಾ ಸಾಮಗ್ರಿಗಳ(TLMs) ಬಳಕೆಯಿಂದ, ಶಿಕ್ಷಕರು ಚಿಕ್ಕ ಮತ್ತು ದೊಡ್ಡ ಗುಂಪು ಚಟುವಟಿಕೆಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ಸಮರ್ಥರಾಗಿದ್ದಾರೆ.
* ನರ್ಸರಿ ಶಾಲೆಗಳು ವಿಷಯಾಧಾರಿತ /ಥೀಮ್-ಆಧಾರಿತ ಚಟುವಟಿಕೆಗಳನ್ನು ನಡೆಸುವುದು.
* ಮಕ್ಕಳಿಗೆ ಸಮಗ್ರ ಕಲಿಕೆಯ ವಾತಾವರಣವನ್ನು ಕಲ್ಪಿಸುವುದು.
* ಶಿಕ್ಷಕರು ಈ ವಿಧಾನವನ್ನು ವ್ಯಾಪಕವಾಗಿ ಮೆಚ್ಚಿರುವುದು.
* ಒದಗಿಸಿದ ಪರಿಕರಗಳು ಶಿಕ್ಷಕರಿಗೆ ವಿದ್ಯಾರ್ಥಿಗಳ ವೈಯಕ್ತಿಕ ಅಗತ್ಯಗಳ ಮೇಲೆ ಕೇಂದ್ರೀಕರಿಸಲು ಮತ್ತು ಉತ್ತಮ ಬೆಂಬಲವನ್ನು ನೀಡಲು ಸಹಾಯವಾಗಿದೆ.
* ಬಿಬಿಎಂಪಿ ಮೇಲ್ವಿಚಾರಕರ ಸಹಾಯದಿಂದ ಶಾಲೆಗಳಲ್ಲಿ ಪ್ರತಿಕ್ರಿಯೆಗಳು ಸಂಗ್ರಹವಾಗಿದೆ.
* ಯಾವುದೇ ಕಾರ್ಯಕ್ರಮದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಸಾಧ್ಯವಾಗಿದೆ.
ವಿಭಿನ್ನ ಮಧ್ಯಸ್ಥಿಕೆಗಳಲ್ಲಿ ಕಲಿಕೆಯ ಸುಧಾರಣೆಗಳು:
2023-24ರ ಶೈಕ್ಷಣಿಕ ವರ್ಷದಲ್ಲಿ ಮಾಡಿದ ಕಲಿಕೆಯ ಪ್ರಗತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಮಕ್ಕಳ ಕಲಿಕೆಯಲ್ಲಿ ಪ್ರಮುಖ ಬೆಳವಣಿಗೆಗಳು ಕಂಡುಬಂದಿವೆ. ಶೈಕ್ಷಣಿಕ ಗುಣಮಟ್ಟದ ಪ್ರಗತಿಯ ವರದಿಯ ಪ್ರತಿ ಲಗತ್ತಿಸಿದೆ. ಕಲಿಕಾ ಸಧಾರಣೆ ಕಾರ್ಯಕ್ರಮದಿಂದ ಮಕ್ಕಳಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದಿವೆ.
ಕಳೆದ ಶೈಕ್ಷಣಿಕ ಅವಧಿಯ ಕಲಿಕೆಯ ಆಧಾರದ ಮೇಲೆ 2024-25 ರಲ್ಲಿಯೂ ಕಲಿಕಾ ಸುಧಾರಣೆ ಕಾರ್ಯಕ್ರಮವನ್ನು ಮುಂದುವರಿಸಲಾಗಿದೆ.