ಬೆಂಗಳೂರು: ಕಾವೇರಿ ನೀರಿನ ಸಂಪರ್ಕ ಪಡೆಯಲು ಮಧ್ಯವರ್ತಿಗಳ ಮೊರೆ ಹೊಗದೇ ನೇರವಾಗಿ ಬೆಂಗಳೂರು ಜಲಮಂಡಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಜಲಮಂಡಳಿ ಹೆಸರು ದುರಪಯೋಗಪಡಿಸಿಕೊಳ್ಳುವ ಹಾಗೂ ನಿಯಮಬಾಹಿರವಾಗಿ ಹೆಚ್ಚಿನ ಹಣ ಕೇಳುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ಎಚ್ಚರಿಕೆ ನೀಡಿದ್ದಾರೆ.
ಕಾವೇರಿ ನೀರಿನ ಸಂಪರ್ಕ ಪಡೆಯುವ ಪ್ರಕ್ರಿಯೆ ಬಹಳ ಸುಲಭವಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದಲ್ಲಿ ಸಂಬಂಧಪಟ್ಟ ವಿಭಾಗದ ಅಧಿಕಾರಿಗಳು ಮುಂದಿನ ಕ್ರಮವಹಿಸಲಿದ್ದಾರೆ. ಹೊಸ ಸಂಪರ್ಕ ಪಡೆಯಲು ಮನೆಗಳಿಗೆ, ಅಪಾರ್ಟ್ಮೆಂಟ್ಗಳಿಗೆ, ವಾಣಿಜ್ಯ ಕಟ್ಟಡಗಳಿಗೆ ನಿಯಮಗಳ ಪ್ರಕಾರ ಹಣ ನಿಗದಿಪಡಿಸಿ ಡಿಮ್ಯಾಂಡ್ ನೋಟೀಸ್ ನೀಡಲಾಗುವುದು. ಡಿಮ್ಯಾಂಡ್ ನೋಟೀಸ್ಗಿಂತ ಹೆಚ್ಚಿನ ಹಾಗೂ ನಿಯಮಬಾಹಿರವಾಗಿ ಹಣ ಕೇಳುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ಷಿಪ್ರಗತಿಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ವಿಜಿಲೆನ್ಸ್ ಸೆಲ್ ರಚನೆ:
ಕಾವೇರಿ ಸಂಪರ್ಕ ನೀಡಲು ನಿಯಮಬಾಹಿರವಾಗಿ ಹಣ ಕೇಳುವ, ಬಿಡಬ್ಲೂಎಸ್ಎಸ್ಬಿ ಹೆಸರು ಹೇಳಿಕೊಂಡು ಬರುವ ಮಧ್ಯವರ್ತಿಗಳಾಗಲಿ, ಜಲಮಂಡಳಿ ಸಿಬ್ಬಂದಿಗಳಾಗಲಿ ಅಥವಾ ಅಸೋಷಿಯೇಷನ್ ಸದಸ್ಯರು ಹಾಗೂ ಮಧ್ಯವರ್ತಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. ಇಂತಹ ಪ್ರಕರಣಗಳನ್ನು ಕ್ಷಿಪ್ರ ರೀತಿಯಲ್ಲಿ ತನಿಖೆ ಮಾಡಿ ಪರಿಹಾರ ನೀಡುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿಯ ಮುಖ್ಯ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ವಿಜಿಲೆನ್ಸ್ ತಂಡ ರಚಿಸಲಾಗಿದೆ. ಸಾರ್ವಜನಿಕರು bwssbvigilance@gmail.com ಗೆ ಅಗತ್ಯ ಮಾಹಿತಿಯ ಮೂಲಕ ದೂರನ್ನ ಸಲ್ಲಿಸಿದಲ್ಲಿ 24 ಗಂಟೆಯ ಒಳಗಾಗಿ ಕ್ರಮ ಕೈಗೊಳ್ಳುವಂತೆ ತಂಡದ ಸದಸ್ಯರುಗಳಿಗೆ ಅಧ್ಯಕ್ಷರು ಸೂಚನೆ ನೀಡಿದ್ದಾರೆ.
ಬೆಂಗಳೂರು ಜಲಮಂಡಳಿಯ ವತಿಯಿಂದ ಪಾರದರ್ಶಕವಾಗಿ ಹಾಗೂ ನ್ಯಾಯಯುತವಾಗಿ ನಿಯಮಾನುಸಾರ ಕಾವೇರಿ ನೀರು ಸರಬರಾಜು ಸಂಪರ್ಕ ನೀಡುವಂತೆ ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಕಾವೇರಿ ನೀರಿನ ಸಂಪರ್ಕ ಪಡೆಯುವ ಸಂಧರ್ಭದಲ್ಲಿ ಜಲಮಂಡಳಿಯ ಹೆಸರು ದುರುಪಯೋಗಪಡಿಸಿಕೊಳ್ಳುವ ಹಾಗೂ ಹೆಚ್ಚಿನ ಹಣ ಕೇಳುವ ವ್ಯಕ್ತಿಗಳ ವಿರುದ್ದ ಜಲಮಂಡಳಿಯ ವಿಜೆಲೆನ್ಸ್ ತಂಡಕ್ಕೆ ದೂರನ್ನು ನೀಡಬಹುದಾಗಿದೆ. ದೂರು ಸಲ್ಲಿಸುವವರ ಗುರುತನ್ನು ಗೌಪ್ಯವಾಗಿಡುವುದಲ್ಲದೇ, ತಪ್ಪಿತಸ್ಥರ ವಿರುದ್ದ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.