ಬೆಂಗಳೂರು: ದೇಶದ ಸಮಗ್ರತೆಗೆ ಹೋರಾಟ ಮಾಡಿದವರು ಸರ್ದಾರ್ ಪಟೇಲರು. ಇಡೀ ದೇಶಕ್ಕೆ ಆಗಸ್ಟ್ 15, 1947 ರಂದು ಸ್ವಾತಂತ್ರ್ಯ ಬಂದಿದೆ. ಆದರೆ ನಮ್ಮ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸ್ವಾತಂತ್ರ್ಯ ಬಂದಿದ್ದು ಸೆಪ್ಟೆಂಬರ್ 19, 1948 ರಂದು. ಭಾರತದ ಒಕ್ಕೂಟಕ್ಕೆ ಸೇರಲು ಬಯಸದೇ ಇದ್ದಾಗ ಪೊಲೀಸ್ ಕಾರ್ಯಾಚರಣೆ ಮಾಡಿ ನಮಗೆ ಬಿಡುಗಡೆ ಕೊಡಿಸಿದರು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಇಂದಿರಾಗಾಂಧಿ ಯವರ ಪುಣ್ಯ ಸ್ಮರಣೆ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದವರು,ದೇಶವನ್ನು ಕಾಪಾಡಲು ನೆಹರು ಹಾಗೂ ಸರ್ದಾರ್ ಪಟೇಲ್ ಅವರಷ್ಟೇ ಅತ್ಯಂತ ತೀವ್ರವಾಗಿ ಈ ದೇಶವನ್ನು ಕಟ್ಟಿದವರು ಇಂದಿರಾಗಾಂಧಿ ಅವರು. ದೇಶದ ಒಗ್ಗಟ್ಟಿಗಾಗಿ ತಮ್ಮ ಪ್ರಾಣವನ್ನೇ ಕೊಟ್ಟವರು. ರಾಜೀವ್ ಗಾಂಧಿ ಅವರು ತಾಯಿಯಂತೆ ದೇಶದ ಒಗ್ಗಟ್ಟಿಗೆ ಪ್ರಾಣ ಕೊಟ್ಟರು.
ಪ್ರಧಾನಮಂತ್ರಿಯವರು ಇಂದಿರಾ ಗಾಂಧಿಯವರನ್ನು ನೆನೆಸಿಕೊಳ್ಳಲಿಲ್ಲ!
ಸರ್ದಾರ್ ಪಟೇಲ್ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಪ್ರಧಾನಿ ಮೋದಿ ಅವರು ಈ ದೇಶಕ್ಕಾಗಿ ಪ್ರಾಣಕೊಟ್ಟ ಇಂದಿರಾಗಾಂಧಿ ಅವರ ಹೆಸರನ್ನು ನೆನಪಿಸಿಕೊಳ್ಳಲೇ ಇಲ್ಲ. ಕೇವಲ ಅರ್ಬನ್ ನಕ್ಸಲ್ ಹಾಗೂ ಈ ಹಿಂದೇ ಆಡಳಿತ ಮಾಡಿದ ಪಕ್ಷಗಳು ದೇಶವನ್ನು ಅಭಿವೃದ್ಧಿ ಮಾಡಿಲ್ಲ. ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಬೈಯುವ ಕೆಲಸವನ್ನು ಮೋದಿ ಗುರುವಾರ ಬೆಳಿಗ್ಗೆಯೇ ಮಾಡಿದರು. ಅವರಿಗೆ ಬೇರೆ ವಿಚಾರಗಳೇ ತಲೆಯಲ್ಲಿ ಇಲ್ಲ.
ಈ ದೇಶಕ್ಕಾಗಿ ಪ್ರಾಣ ಕೊಟ್ಟ ನಾಯಕಿಯನ್ನು ಮೋದಿ ಅವರು ನೆನಪಿಸಿಕೊಳ್ಳಲಿಲ್ಲ. ಅಂದರೆ ಇನ್ನೂ ಅವರ ಮನಸ್ಸಿನಲ್ಲಿ ಹಾಗೂ ಪಕ್ಷದ ಜನರಲ್ಲಿ ವಿಷ ತುಂಬಿದೆ. ಬಿಜೆಪಿಯ ಅಗ್ರಗಣ್ಯ ನಾಯಕರಾದ ವಾಜಪೇಯಿ ಅವರು ಇಂದಿರಾಗಾಂಧಿ ಅವರನ್ನು “ದುರ್ಗೆ” ಎಂದು ಕರೆದಿದ್ದರು. ಇಂತಹ ಪಕ್ಷದ ನಾಯಕರಾದ ಮೋದಿ ಅವರ ಬಾಯಲ್ಲಿ ಇಂದಿರಾಗಾಂಧಿ ಅವರ ಹೆಸರೇ ಬರಲಿಲ್ಲ.
ಪಟೇಲರನ್ನು ಕಸಿಯಲು ಬಿಜೆಪಿ ಪ್ರಯತ್ನ
ಕಾಂಗ್ರೆಸ್ ನಾಯಕರಾದ ಪಟೇಲ್ ಅವರನ್ನು ಬಿಜೆಪಿ ಕಸಿಯಲು ಪ್ರಯತ್ನ ಮಾಡುತ್ತಿದೆ. ಗಾಂಧಿ ಅವರನ್ನು ಗೋಡ್ಸೆ ಕೊಂದ ನಂತರ ಆರ್ ಎಸ್ ಎಸ್ ಅನ್ನು ಬ್ಯಾನ್ ಮಾಡಿದರು. ಇದರ ಬಗ್ಗೆ ಬಿಜೆಪಿಯವರು ಏನು ಮಾತನಾಡುವುದಿಲ್ಲ. ಸರ್ದಾರ್ ಪಟೇಲ್ ಅವರ ತತ್ವಗಳಿಗೆ ಬಿಜೆಪಿ ಹಾಗೂ ಮೋದಿ ವಿರುದ್ಧವಾಗಿ ಇದ್ದಾರೆ. ಅವರನ್ನು ಬಿಜೆಪಿಯವರನ್ನಾಗಿ ಮಾಡಿ ಕೊಳ್ಳಲು ಹೊರಟಿದ್ದಾರೆ.
ಬಿಜೆಪಿಯವರು ಜಾತಿಯತೆ ಮೂಡಿಸುವುದು. ಧರ್ಮಗಳ ನಡುವೆ ವೈಶಮ್ಯ ಬಿತ್ತುವುದು. ಇದೇ ಅವರ ಕೆಲಸ. ಗುಂಪು ಘರ್ಷಣೆ ಸೇರಿದಂತೆ ಈ ದೇಶದೊಳಗೆ ಅಶಾಂತಿಯನ್ನು ಮೂಡಿಸುವುದೇ ಬಿಜೆಪಿಯ ಕೆಲಸ.
ದೇಶದ ಐಕ್ಯತೆ, ಸಮಗ್ರತೆಗೆ ಪ್ರಾಣ ಕೊಟ್ಟವರು ಇಂದಿರಾಗಾಂಧಿ: ಡಿಸಿಎಂ
ನೆಹರು ಅವರ ಕುಟುಂಬವನ್ನು ಹೊರತು ಪಡಿಸಿ ಭಾರತವನ್ನು ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಈ ದೇಶದ ಐಕ್ಯತೆ, ಸಮಗ್ರತೆಗೆ ಪ್ರಾಣ ಕೊಟ್ಟವರು ಇಂದಿರಾಗಾಂಧಿ. ಅವರು ಆಗಾಗ್ಗೆ ಹೇಳುತ್ತಿದ್ದ ಮಾತು “ನಾನು ಯಾರಿಂದಲೂ ಅಥವಾ ಯಾವುದೇ ರಾಷ್ಟ್ರದ ಒತ್ತಡಕ್ಕೆ ಒಳಗಾಗುವ ವ್ಯಕ್ತಿಯಲ್ಲ” ಎನ್ನುತ್ತಿದ್ದರು.
ಭಾರತ್ ಜೋಡೋ ಯಾತ್ರೆ ವೇಳೆ ಮೊಣಕಾಲ್ಮುರಿನ ಬಳಿ 70 ವರ್ಷದ ಅಜ್ಜಿಯೊಬ್ಬರು ರಾಹುಲ್ ಗಾಂಧಿ ಅವರಿಗೆ ಸೌತೆಕಾಯಿ ನೀಡಲು ಬಂದರು. ಆಗ ನನ್ನ ಬಳಿ ಅವರ ಅಜ್ಜಿ ಇಂದಿರಮ್ಮ ಕೊಟ್ಟ ಭೂಮಿಯಲ್ಲಿ ಬೆಳೆದಿದ್ದು, ಎಂದು ಕಣ್ಣೀರು ಹಾಕಿದ್ದರು. ಇತ್ತೀಚಿಗೆ ಅವರು ತೀರಿ ಹೋಗಿದ್ದಾರೆ. ಅದೇ ಜಾಗದಲ್ಲಿ ಭಾರತ್ ಜೋಡೋ ಟ್ರೈನಿಂಗ್ ಸೆಂಟರ್ ಅನ್ನು ತೆರೆಯಬೇಕು ಎನ್ನುವ ಆಲೋಚನೆಯಿದೆ.
ಪಿಂಚಣಿ, ಮನೆ, ಭೂಮಿ, ಪಡಿತರ ಸೇರಿದಂತೆ ಇಡೀ ದೇಶದ ಬಡ ಜನರ ಅಭಿವೃದ್ಧಿಗೆ ಯಾವ, ಯಾವ ಕಲ್ಯಾಣ ಕಾರ್ಯಕ್ರಮಗಳು ಇವೆಯೋ ಅದೆಲ್ಲವನ್ನು ಜಾರಿಗೆ ತಂದಿದ್ದು ಇಂದಿರಾಗಾಂಧಿ ಅವರು. ಬಡತನ ನಿರ್ಮೂಲನೆಗೆ ಕಾರ್ಯಕ್ರಮ ರೂಪಿಸಿದರು. ನೆಹರು ಅವರು ಹಾಕಿಕೊಟ್ಟ ಅಭಿವೃದ್ಧಿಯ ಮಾರ್ಗದಲ್ಲಿ ನಡೆದರು.
ಇಂದಿರಾಗಾಂಧಿಯವರ ನುಡಿಮುತ್ತುಗಳು ಸೋನಿಯಾ ಗಾಂಧಿ ಅವರ ಪುಸ್ತಕದಲ್ಲಿ ಸಂಗ್ರಹ
ಇಂದಿರಾಗಾಂಧಿ ಅವರ ನುಡಿಮುತ್ತುಗಳನ್ನು ಸೋನಿಯಾಗಾಂಧಿ ಅವರು ಪುಸ್ತಕ ರೂಪದಲ್ಲಿ ಸಂಗ್ರಹ ಮಾಡಿದ್ದಾರೆ. ಈ ಪುಸ್ತಕವನ್ನು ಶೀಘ್ರದಲ್ಲಿಯೇ ಹೊರಗೆ ತರಲಾಗುವುದು. ಇದರಲ್ಲಿನ ಒಂದು ವಾಕ್ಯ ಹೀಗಿದೆ. “ಸಮಸ್ಯೆಗಳು ನಮ್ಮ ಮನೆ ಬಾಗಿಲಿಗೆ ಬಂದು ಕುಳಿತಿವೆ. ಈ ಸಮಸ್ಯೆಗಳ ನಿವಾರಣೆಗೆ ಪರ್ವತವನ್ನು ಹತ್ತಬೇಕಾಗಿಲ್ಲ. ಸಾಗರಗಳನ್ನು ದಾಟ ಬೇಕಾಗಿಲ್ಲ. ನಮ್ಮ ಪ್ರತಿ ಹಳ್ಳಿಗಳಲ್ಲಿ ಬಡತನವಿದೆ. ಮನೆಗಳಲ್ಲಿ ಜಾತಿಯಿದೆ. ಇವೆರಡನ್ನು ನಾವು ಪರ್ವತ ಹಾಗೂ ಸಾಗರದ ಆಚೆಗೆ ದಾಟಿಸಬೇಕು” ಎಂದು ಅದ್ಬುತವಾದ ಸಂದೇಶ ನೀಡಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಈ ದೇಶದ ಸಮಗ್ರತೆಗೆ ಕೊಡುಗೆ ನೀಡಿದವರು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು. ಹರಿದು ಹಂಚಿ ಹೋಗಿದ್ದ ದೇಶವನ್ನು ಒಗ್ಗೂಡಿಸಿದರು. ಆದರೆ ಪಟೇಲರ ಹೆಸರನ್ನು ಈಗ ಬೇರೆಯವರು ಬಳಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಎಂದಿಗೂ ಇತಿಹಾಸ ಬದಲಾವಣೆ ಸಾಧ್ಯವಿಲ್ಲ.
ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿ ಹಿಂಭಾಗದ ನೂತನ ಕಟ್ಟಡವನ್ನು ರಾಹುಲ್ ಗಾಂಧಿ ಅವರು ಉದ್ಘಾಟನೆ ಮಾಡಿದರು. ಆಗ ಯಾವ ಹೆಸರು ಇಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಳಿದೆ. ಆಗ ಅವರು ಇಂದಿರಾಗಾಂಧಿ ಭವನ ಎಂದು ಹೆಸರಿಡಲು ಸೂಚನೆ ನೀಡಿದರು.
ಗಾಂಧಿ ಹತ್ಯೆಯಾದಾಗ ಆರ್ ಎಸ್ ಎಸ್ ನಿಷೇಧಕ್ಕೆ ಪಟೇಲ್ ಕಾನೂನು ತಂದಿದ್ದರು: ಮೊಯ್ಲಿ
ಪಟೇಲ್ ಅವರು ಕೇಂದ್ರ ಗೃಹ ಸಚಿವರಾಗಿದ್ದ ಸಮಯದಲ್ಲಿಯೇ ಮಹಾತ್ಮ ಗಾಂಧಿ ಅವರ ಹತ್ಯೆಯಾದ ಕಾರಣಕ್ಕೆ ಸಾಕಷ್ಟು ನೊಂದಿದ್ದರು. ಇದರಿಂದ ಆರ್ ಎಸ್ ಎಸ್ ಅನ್ನು ನಿಷೇದ ಮಾಡುವ ಕಾನೂನು ತಂದಿದ್ದರು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ತಿಳಿಸಿದರು.
ಈ ದೇಶದ ಸಮಗ್ರತೆ ಹಾಗೂ ಐಕ್ಯತೆಗಾಗಿ ಸದಾ ದುಡಿಯುತ್ತಿದ್ದ ಮನುಷ್ಯ. ದೇಶಕ್ಕೆ ಶಕ್ತಿ ನೀಡಿದ ಮಹಾನ್ ಚೇತನ.ಇಂದಿರಾ ಗಾಂಧಿ ಅವರು ಅಂತರರಾಷ್ಟೀಯ ಮಟ್ಟದಲ್ಲಿ ದೇಶಕ್ಕೆ ಮಾನ್ಯತೆ ತಂದು ಕೊಟ್ಟವರು. ಕೇವಲ ಕಾಂಗ್ರೆಸ್ ಪಕ್ಷವನ್ನು ಗಟ್ಟಿ ಮಾಡಲಿಲ್ಲ. ಈ ದೇಶದ ಜನರನ್ನು ಬಲಿಷ್ಠ ಮಾಡಿದರು.
ವಾಜಪೇಯಿ ಅವರು ಇಂದಿರಾಗಾಂಧಿ ಅವರನ್ನು ದುರ್ಗೆ ಎಂದು ಕರೆದಿದ್ದರು. ನಾವು ರಾಜಕೀಯಕ್ಕೆ ಬರಲು ಇಂದಿರಾ ಗಾಂಧಿ ಅವರ ಹಾಗೂ ದೇವರಾಜ ಅರಸು ಅವರ ಪ್ರಗತಿಪರ ಧೋರಣೆ ಕಾರಣ. ಈ ಇಬ್ಬರ ಚಿಂತನೆಗಳು ಇಲ್ಲದಿದ್ದರೆ ನಾವುಗಳು ಕಾಂಗ್ರೆಸ್ ಪಕ್ಷವನ್ನು ಸೇರುತ್ತಿರಲಿಲ್ಲ.
ಭಾರತದ ಆತ್ಮವನ್ನು ಚೆನ್ನಾಗಿ ಅರ್ಥ ಮಾಡಿಕೊಂಡವರು ಇಂದಿರಾಗಾಂಧಿ. ದೊಡ್ಡ, ದೊಡ್ಡ ಸಮಾಜಘಾತುಕ ಶಕ್ತಿಗಳನ್ನು ಸದೆಬಡಿದವರು. ನಾನು ಜವಳಿ ಇಲಾಖೆಗೆ 5 ಕೋಟಿ ಹಣ ಬೇಕು ಎಂದಾಗ, ಅದನ್ನು ನೀಡಿ ಪ್ರೋತ್ಸಾಹ ಮಾಡಿದ್ದರು.ಅನಿವಾರ್ಯ ಕಾರಣಗಳಿಗೆ ತುರ್ತು ಪರಿಸ್ಥಿತಿ ಹೇರಿದರು. 2 ವರ್ಷಗಳ ನಂತರ ಅದನ್ನು ವಾಪಾಸ್ ಪಡೆದರು. ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಟ್ಟು ಈಗ ಇರುವುದಕ್ಕಿಂತ ಪಾರದರ್ಶಕವಾದ ಚುನಾವಣೆ ನಡೆಸಿದರು.
ಇಂದಿರಾ ಗಾಂಧಿ ಬದುಕಿದ್ದರೆ ಇಸ್ರೇಲ್ ಪ್ಯಾಲೇಸ್ಖಾನ್ ಯುದ್ಧ ಆಗುತ್ತಿರಲಿಲ್ಲ
ಇಂದಿರಾ ಗಾಂಧಿ ಅವರು ಈಗ ಇದ್ದಿದ್ದರೆ. ಇಸ್ರೇಲ್ ಮತ್ತು ಪ್ಯಾಲೇಸ್ತಿನ್ ಯುದ್ಧವನ್ನು ನಡೆಯಲು ಬಿಡುತ್ತಿರಲಿಲ್ಲ. ಅದನ್ನು ನಿಲ್ಲಿಸುವ ಶಕ್ತಿ ಅವರಲ್ಲಿ ಇತ್ತು.ವಿಶ್ವದ ಸಮಾಜವಾದಿ ಒಕ್ಕೂಟಕ್ಕೆ ಶಕ್ತಿ ಕೊಟ್ಟವರು. ವಿಶ್ವಸಂಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಮೂರನೇ ರಾಷ್ಟ್ರಗಳ ಒಕ್ಕೂಟ ರಚನೆ ಮಾಡಿ ಬಡ ಹಾಗೂ ಹಿಂದುಳಿದ ದೇಶಗಳ ಪರವಾಗಿ ನಿಂತವರು. ಇವರ ಘರ್ಜನೆಗೆ ಅಮೇರಿಕ ನಡುಗುತ್ತಿತ್ತು. ಇಂತಹ ಶ್ರೇಷ್ಠ ನಾಯಕತ್ವ ಇಡೀ ಪ್ರಪಂಚ ಹಾಗೂ ಭಾರತದಲ್ಲಿ ಇಲ್ಲ.
ಮಹಾತ್ಮಾ ಗಾಂಧಿ ಅವರನ್ನು ದುಷ್ಟರು ಸಂಚು ಮಾಡಿ ಕೊಂದ ರೀತಿ ಇಂದಿರಾಗಾಂಧಿ ಅವರನ್ನು ಕೊಲ್ಲಲಾಯಿತು ಎಂದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಸಚಿವರಾದ ರಾಮಲಿಂಗಾರೆಡ್ಡಿ, ಕೆ ಎಚ್ ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿಸಿ ಚಂದ್ರಶೇಖರ್ , ವಿಧಾನ ಪರಿಷತ್ತಿನ ಸದಸ್ಯ ಬಿಕೆ ಹರಿಪ್ರಸಾದ್ ಸೇರಿದಂತೆ ಮತ್ತಿತರರು ಇಂದಿರಾ ಗಾಂಧಿ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.