ಕೃಷಿ ಮಾಡುವವನೇ ‘ಮಹಾರಾಜ’ ‘ಕೃಷಿಕ’ ಏಂದೂ ಕೊಡುಗೈ ದಾನಿಯಾಗಬೇಕೇ ವಿನ: ದೇಹಿ ಯಾಗಬಾರದು. ಆದರೆ ಪ್ರಸ್ತುತ ಪರಿಸ್ಥಿತಿಯು ರೈತರನ್ನು ಕಟ್ಟಕಡೆಯ ಸ್ಥಾನದಲ್ಲಿ ತಂದು ನಿಲ್ಲಿಸುವಂತಾಗಿದೆ. ಇದಕ್ಕೆ ಮೂಲ ಕಾರಣ, ರೈತ ತನ್ನ ಜಮೀನಿನಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ವೈಜ್ಞಾನಿಕವಾಗಿ ಬಳಸಿಕೊಳ್ಳದಿರುವುದು. ಕೃಷಿ ಶ್ರಮ, ತಪಸ್ಸು ಮತ್ತು ಶ್ರದ್ಧೆ ಮೂರನ್ನು ಬಯಸುತ್ತದೆ.
ಭೂ ತಾಯಿಯನ್ನು ನಂಬಿ ಕೆಟ್ಟವರಿಲ್ಲ ಎಂದು ಹೇಳುವ ಶ್ರೀಯುತ ಸಿ.ಆರ್. ರಾಧಕೃಷ್ಣ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕುರುಟಹಳ್ಳಿ ಗ್ರಾಮದವರು, 70ರ ದಶಕದಲ್ಲಿ ಬಿ.ಎಸ್.ಸ್ಸಿ, ಪದವೀಧರರು ಉನ್ನತ ಹುದ್ದೆಗೆ ಹೋಗದೆ ಸಮಗ್ರ ಕೃಷಿಯಲ್ಲಿ ಬದಕನ್ನು ರೂಪಿಸಿಕೊಂಡವರು. ತಮ್ಮ ತಂದೆಯಿಂದ ಬಂದ 2 ಎಕರೆ ಜಮೀನಿನಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡ ಇವರು ಇಂದು 17 ಎಕರೆ 10 ಗುಂಟೆ ಜಮೀನಿನ ಒಡೆಯರು. ತಮ್ಮ ಜಮೀನಿನಲ್ಲಿ ಸಮಗ್ರ ಕೃಷಿ ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅಳವಡಿಕೊಂಡು ರಾಷ್ಟ್ರ ಮಟ್ಟದಲ್ಲಿ ಮಾದರಿ ರೈತ ಎನಿಸಿಕೊಂಡಿದ್ದಾರೆ. ಕೃಷಿ ಎಂದರೆ ಖುಷಿ, ಶಿಸ್ತಿನಿಂದ ಕೃಷಿಯಲ್ಲಿ ತೊಡಗಿಸಿಕೊಂಡಾಗ ಮಾತ್ರ ರೈತನಿಗೆ ಲಾಭ ಸಾಧ್ಯ ಎನ್ನುತ್ತಾರೆ. ಇವರ 4 ಜನ ಅಣ್ಣತಮ್ಮಂದಿರು ಸಹ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಒಟ್ಟು 25 ಜನರ ಕೂಡು ಕುಟುಂಬದಲ್ಲಿ ಇವರ ಇಬ್ಬರು ಗಂಡು ಮಕ್ಕಳು ಇಂಜಿನಿಯರಿಂಗ್ ಮತ್ತು ಬಿ.ಎ ಪದವೀಧರರು, ಇವರು ಸಹ ಸರ್ಕಾರಿ ಕೆಲಸವನ್ನು ಅಪೇಕ್ಷಿಸದೇ ತಂದೆಯ ಕನಸಿನಂತೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನಮ್ಮ ಹಿಂದಿನ ತಲೆಮಾರಿನವರು ನೈಸರ್ಗಿಕ ಕೃಷಿಯನ್ನು ಅನುಸರಿಸಿ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ, ಈಗ ರೈತರು ಹಸಿರು ಕ್ರಾಂತಿಯಿಂದಾಗಿ ಅತಿ ಹೆಚ್ಚು ರಾಸಾಯನಿಕ ಗೊಬ್ಬರ ಮತ್ತು ತೀಕ್ಷ್ಣವಾದ ಕೀಟನಾಶಕಗಳಿಗೆ ಮಾರುಹೋಗಿ ಭೂಮಿಯ ಫಲವತ್ತತೆಯನ್ನು ಹಾಳು ಮಾಡುವುದರ ಜೊತೆಗೆ ಇತರೆ ಪರೋಪಕಾರಿ ಜೀವಿಗಳ ಸಂಖ್ಯೆಯನ್ನು ಸಹ ಗಣನೀಯವಾಗಿ ನಶಿಸಿ ಕೀಟಭಾದೆಗಳ ಸಂಖ್ಯೆ ಹೆಚ್ಚಾಗಿ ರೈತರ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎನ್ನುತ್ತಾರೆ.
ಈ ನಿಟ್ಟಿನಲ್ಲಿ ನಾಡೋಜ ನಾರಾಯಣರೆಡ್ಡಿ ಅವರಿಂದ ಪ್ರೇರಣೆಗೊಂಡು ತಮ್ಮ 3 ಎಕರೆ ಜಮೀನಿನಲ್ಲಿ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಮುಂದುವರೆದು, 4 ಎಕರೆ 10 ಗುಂಟೆ ಜಮೀನಿನಲ್ಲಿ ಆಹಾರ ಬೆಳೆಗಳಾದ – ರಾಗಿ, ಅವರೆ, ತೊಗರಿ, ಹುರುಳಿ, ಜೋಳ ಹಾಗೂ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದು, ಕೃಷಿಯಿಂದ ವಾರ್ಷಿಕವಾಗಿ 75 ಸಾವಿರ ರೂ.ಗಳ ನಿವ್ವಳ ಆದಾಯವನ್ನು ಗಳಿಸಿವುದರ ಜೊತೆಗೆ ಒಣ ಮೇವನ್ನು ಪಶುಸಂಗೋಪನೆಗೆ ಬಳಸಿಕೊಳ್ಳುತ್ತಿದ್ದಾರೆ. ತಮ್ಮ 8 ಎಕರೆ ಪ್ರದೇಶದಲ್ಲಿ ಸೀಬೆ, ಟೊಮೊಟೊ, ತಿಂಗಳ ಹುರುಳಿ, ಬೀಟ್ರೂಟ್, ನುಗ್ಗೆ ಮತ್ತು ಹುಣಸೆಯನ್ನು ಬೆಳೆಯುತ್ತಿದ್ದು ವಾರ್ಷಿಕವಾಗಿ 5 ಲಕ್ಷ ನಿವ್ವಳ ಆದಾಯವನ್ನು ಪಡೆಯುತ್ತಿದ್ದಾರೆ. ಎರಡು ಎಕರೆ ಪ್ರದೇಶದಲ್ಲಿ ಹಿಪ್ಪು ನೇರಳೆಯನ್ನು ಗುಣಿ ಪದ್ಧತಿಯಲ್ಲಿ ಬೆಳೆದು ವಾರ್ಷಿಕವಾಗಿ ಒಂದು ಸಾವಿರ ಚಾಕಿ ಮೊಟ್ಟೆ ಸಾಕಣೆಯಿಂದ ರೂ 1.50 ಲಕ್ಷಗಳಷ್ಟು ನಿವ್ವಳ ಆದಾಯ ಗಳಿಸುತ್ತಿದ್ದಾರೆ.
ಕೋಳಿ ಸಾಕಣೆ ಮನೆಯ ಮೇಲ್ಛಾವಣಿಯಲ್ಲಿ ವಿದ್ಯುತ್ ಉತ್ಪಾದನೆ : ರೈತನ ಆರ್ಥಿಕ ಮಟ್ಟ ಸುಧಾರಿಸಲು ನೈಸರ್ಗಿಕ ಕೃಷಿ, ಸಮಗ್ರ ಕೃಷಿ ಪದ್ಧತಿಗಳು ಹಾಗೂ ಉಪಕಸುಬುಗಳು ತುಂಬಾ ಸಹಾಯಕಾರಿ. ಏಕ ಬೆಳೆ ಪದ್ಧತಿ ಅಳವಡಿಕೆಯಿಂದ ನಷ್ಟವೇ ಹೆಚ್ಚು ಎಂದು ಅರಿತ ಇವರು ಕೃಷಿ ಅವಲಂಬಿತ ಉಪ ಕಸಬುಗಳ ಸೂಕ್ತ ಸಂಯೋಜನೆಯಿಂದ ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಂಡು ಸುಸ್ಥಿರ ಉತ್ಪಾದನೆ ಮತ್ತು ಆದಾಯವನ್ನು ಉತ್ತಮ ಪಡಿಸುವುದರ ಜೊತೆಗೆ ವರ್ಷ ಪೂರ್ತಿ ತಮ್ಮ ಕುಟುಂಬಕ್ಕೆ ಉದ್ಯೋಗ ಸೃಷ್ಟಿಸಿ ಜೀವನೋಪಾಯ ಮಾಡುವಲ್ಲಿ ಮಾದರಿಯಾಗಿದ್ದಾರೆ.
ಶ್ರೀಯುತರು ಕೃಷಿ ಅವಿಷ್ಕಾರಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಒಂದು ಎಕರೆ ಪ್ರದೇಶದಲ್ಲಿ ಕೋಳಿ ಸಾಕಣೆ ಮನೆಯ ಮೇಲ್ಛಾವಣಿಗೆ ಸೌರ ವಿದ್ಯುತ್ ಫಲಕಗಳನ್ನು ಗುಜರಾತ್ ಇನ್ವೆಸ್ಟರ್ಸ್ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಶೂನ್ಯ ಬಂಡವಾಳದಲ್ಲಿ ಸೌರ ವಿದ್ಯುತ್ ಘಟಕವನ್ನು ಸ್ಥಾಪಿಸಿದ್ದು ಕೋಳಿ ಸಾಕಾಣಿಕೆ, ಮನೆಗೆ ಬೇಕಾಗುವ ವಿದ್ಯುತ್ನ್ನು ತಯಾರಿಸಿಕೊಳ್ಳುವುದಲ್ಲದೇ ಪ್ರತಿ ತಿಂಗಳು ವಿದ್ಯುತ್ ನಿಗಮಕ್ಕೆ ಪಾವತಿಸುತ್ತಿದ್ದ 15 ರಿಂದ 20 ಸಾವಿರ ವಿದ್ಯುತ್ ಬಿಲ್ನ್ನು ಉಳಿಸಿ, ಮಾಸಿಕವಾಗಿ 0.75 ಲಕ್ಷ ರೂ.ಗಳಷ್ಟನ್ನು ಸೌರಶಕ್ತಿಯಿಂದ ಗಳಿಸುತ್ತಿದ್ದಾರೆ. ಮುಂದುವರೆದು, ತಮ್ಮ ಜಮೀನಿಗೆ ಬೈಯೊ ಸೆಕ್ಯೂರಿಟಿಯನ್ನು ಅಳವಡಿಸಿದ್ದು ತೋಟದ ರಕ್ಷಣೆಗೆ ಅನುಕೂಲವಾಗಿದೆ ಎನ್ನುತ್ತಾರೆ.
ತಮ್ಮ ತಾತನಿಂದ ಬಳುವಳಿಯಾಗಿ ಬಂದ 150 ವರ್ಷಗಳ ಹುಣಸೆ ಮರದಿಂದ 10 ರಿಂದ 15 ಕ್ವಿಂಟಾಲ್ ಹುಣಸೆಹಣ್ಣನ್ನು ಪಡೆಯುತ್ತಿದ್ದಾರೆ ಮತ್ತು ಇದರಿಂದ ವಾರ್ಷಿಕವಾಗಿ 45 ಸಾವಿರ ನಿವ್ವಳ ಲಾಭ ಗಳಿಸುತ್ತಿದ್ದಾರೆ. ನೈಸರ್ಗಿಕ ಕೃಷಿಯಿಂದ ತಮ್ಮ ಮನೆಗೆ ಬೇಕಾಗುವಂತಹ ತರಕಾರಿ ಸೊಪ್ಪು ಮತ್ತು ಇತರೆ ಬೆಳೆಗಳನ್ನು ಬೆಳೆದು ತಾವೇ ಉಪಯೋಗಿಸಿ ಆರೋಗ್ಯವಂತರಾಗಿ ಅನಾವಶ್ಯಕ ಖರ್ಚಿಗೆ ಕಡಿವಾಣ ಹಾಕಿದ್ದಾರೆ. ಇವರು 3,000 ಕೋಳಿಯನ್ನು ಮೊಟ್ಟೆಗಾಗಿ ಸಾಕಣೆ ಮಾಡಿ ವಾರ್ಷಿಕವಾಗಿ 2.00 ಲಕ್ಷದ ವರೆಗೆ ಆದಾಯ ಗಳಿಸುತ್ತಿದ್ದಾರೆ. ಜೊತೆಗೆ 25 ಹಸುಗಳು, 50 ಕುರಿಯನ್ನು ಸಾಕಾಣಿಕೆ ಮಾಡುತ್ತಿದ್ದು, ಇವುಗಳಿಂದ ವಾರ್ಷಿಕವಾಗಿ ಸುಮಾರು 5.00 ಲಕ್ಷದವರೆಗೆ ಆದಾಯಗಳಿಸುತ್ತಿದ್ದಾರೆ.
ಪಶುಸಂಗೋಪನೆ ಪೂರಕವೆಂಬಂತೆ ಅರಣ್ಯ ಕೃಷಿಗೆ ಒತ್ತು ನೀಡುವ ಇವರು ಬೇವು, ಹೆಬ್ಬೇವು, ನುಗ್ಗೆ ಮರಗಳನ್ನು ತಮ್ಮ ಜಮೀನಿನ ಬದುಗಳಲ್ಲಿ ಬೆಳೆಸಿದ್ದಾರೆ. ಮೇವಿನ ಬೆಳೆಗಳಾದ ನೇಪಿಯರ್ ಹುಲ್ಲು, ಮೆಕ್ಕೆಜೋಳ ಮತ್ತು ನುಗ್ಗೆಯನ್ನು ಬೆಳೆಯುವುದಲ್ಲದೆ ಸುಮಾರು 4 ರಿಂದ 5 ಟನ್ಗಳಷ್ಟು ರಸಮೇವನ್ನು ತಯಾರಿಸುವುದರ ಜೊತೆಗೆ ಅಜೋಲವನ್ನು ತಾವೇ ತಯಾರಿಸಿ ಪಶುಸಂಗೋಪನೆಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಹೊಲದಲ್ಲಿ 4 ಕೃಷಿ ಹೊಂಡಗಳನ್ನು ನಿರ್ಮಿಸಿ ಅದರಲ್ಲಿ ಕಾಟ್ಲ ಮೀನುಗಳ ಸಾಕಾಣಿಕೆ ಕೈಗೊಂಡು ಸುಮಾರು 50 ಸಾವಿರ ಆದಾಯಗಳಿಸುತ್ತಿದ್ದಾರೆ. ಎರೆಹುಳು ಗೊಬ್ಬರದ ಘಟಕ, ಜಪಾನ್ ಮಾದರಿಯಲ್ಲಿ ಕಾಂಪೋಸ್ಟ್ನ್ನು ತಮ್ಮ ತೋಟದ ತ್ಯಾಜ್ಯವಸ್ತುಗಳಿಂದ ತಯಾರಿಸಿ ರಾಸಾಯನಿಕ ಗೊಬ್ಬರಗಳ ಅವಲಂಬನೆಯನ್ನು ಮಿತಿಗೊಳಿಸಿದ್ದಾರೆ. ಮಣ್ಣು ಮತ್ತು ನೀರು ನಿರ್ವಹಣೆಗೆ ಪ್ರಾಮುಖ್ಯತೆ ನೀಡಿ, ಮಣ್ಣು ಮತ್ತು ನೀರಿನ ಪರೀಕ್ಷೆ ಮಾಡಿಸಿ ಶಿಫಾರಸ್ಸಿಗೆ ಅನುಗುಣವಾಗಿ ರಸಗೊಬ್ಬರಗಳನ್ನು ಬಳಸುವುದಲ್ಲದೆ ಮಾಗಿ ಹುಳುಮೆ, ಇಳಿಜಾರಿಗೆ ಅಡ್ಡವಾಗಿ ಉಳುಮೆ ಮಾಡುವುದು, ಬದುಗಳ ನಿರ್ಮಾಣ, ಹನಿ ನಿರಾವರಿ ಮತ್ತು ತುಂತುರು ನೀರಾವರಿಯನ್ನು ಅಳವಡಿಸಿಕೊಂಡು ನೀರಿನ ಸದ್ಭಳಕೆ ಮಾಡುತ್ತಿದ್ದಾರೆ.
ಸಮಗ್ರ ಕೀಟ ಮತ್ತು ರೋಗ ಹತೋಟಿ ಕ್ರಮಗಳು: ನೈಸರ್ಗಿಕ ಕೃಷಿಯಿಂದ ಪ್ರೇರಣೆಗೊಂಡಿರುವ ಶ್ರೀಯುತರು ರಾಸಾಯನಿಕ ಕೀಟನಾಶಕಗಳಿಗೆ ಕಡಿಮೆ ಒತ್ತು ನೀಡಿ, ಕೃಷಿ ಮತ್ತು ತೋಟಗಾರಿಕೆಯಲ್ಲಿ ಕಂಡುಬರುವ ಹಾನಿಕಾರಕ ಕೀಟಗಳನ್ನು ಹತೋಟಿ ಮಾಡಲು ಜೈವಿಕ ನಿಯಂತ್ರಣಕ್ಕೆ ಮೊರೆಹೋಗಿದ್ದಾರೆ. ಬಿಳಿನೊಣಕ್ಕೆ ಅಂಟು ಟ್ರಾಪ್ ಮತ್ತು ಕಾಯಿಕೊರಕಗಳನ್ನು ನಿಯಂತ್ರಿಸಲು ಬೇವಿನ ಬೀಜದ ಕಷಾಯ ಮತ್ತು ಊಜಿನೊಣಗಳನ್ನು ನಿಯಂತ್ರಿಸಲು ಬೆಳಕಿನ ಆಕರ್ಷಕ ಬಲೆಗಳನ್ನು ಬಳಸುತ್ತಿದ್ದಾರೆ. ಟ್ರೈಕೋಡರ್ಮ ಮುಂತಾದ ಜೈವಿಕ ಗೊಬ್ಬರಗಳನ್ನು ಬಳಸಿ ರಾಸಾಯನಿಕ ಕೀಟನಾಶಕಗಳ ಮೇಲೆ ಅವಲಂಬನೆಯನ್ನು ಕಡಿಮೆಗೊಳಿಸಿದ್ದಾರೆ. ಸಮಗ್ರ ರೋಗ ನಿರ್ವಹಣೆಯಲ್ಲಿ ಪಂಚಗವ್ಯ, ವೇಸ್ಟ್ಡಿಕಾಂಪೋಸ್ಟ್ ಪಿ.ಎಸ್.ಬಿ. ಮತ್ತು ಬೇವಿನ ಹಿಂಡಿ ಬಳಸಿ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಂಡಿದ್ದಾರೆ.
ಸರ್ಕಾರಗಳು ನೀಡುವ ಅನುದಾನಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಇವರು ತಾಂತ್ರಿಕತೆಗಳನ್ನು ಬೇಗನೆ ಸಮರ್ಪಕವಾಗಿ ಅಳವಡಿಸಿಕೊಳ್ಳಲು ಅನುಕೂಲವಾಗುತ್ತದೆ. ಆದರೆ ಇವುಗಳನ್ನು ಪಡೆಯಲು ತಾಳ್ಮೆ ಅತ್ಯಗತ್ಯವೆನ್ನುತ್ತಾರೆ. ಕೂಲಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವೀಡ್ಕಟ್ಟರ್ ಕೋನೋವೀಡರ್ ಎಂ.ಬಿ.ನೇಗಿಲು, ಜೆ.ಸಿ.ಬಿ, ಟ್ರಾಕ್ಟರ್ ಮುಂತಾದ ಕೃಷಿ ಉಪಕರಣಗಳನ್ನು ಬಳಸುತ್ತಿದ್ದಾರೆ. ಕೃಷಿಯಲ್ಲಿ ಇರುವ ನೆಮ್ಮದಿ ಎಲ್ಲೂ ಸಿಗುವುದಿಲ್ಲ ಯಾರ ಹಂಗಿಲ್ಲದೆ ಸ್ವತಂತ್ರ ಬದುಕು ಸಾಗಿಸಬಹುದು. ಕುಟುಂಬ ಸಮೇತ ದುಡಿದು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು ಎನ್ನುವುದು ಇವರ ವಾದ, ಉಪಕಸುಬುಗಳ ಸೂಕ್ತ ಹೊಂದಾಣಿಕೆ ಬೆಳೆ ಪದ್ಧತಿಗಳ ಅಳವಡಿಕೆ, ನೂತನ ತಾಂತ್ರಿಕತೆಗಳ ಅಳವಡಿಕೆಯಿಂದ ಮಾತ್ರ ರೈತರ ಕಲ್ಯಾಣ ಸಾಧ್ಯವೆನ್ನುತ್ತಾರೆ. ಸಮಾಜದ ಒಳಿತಿಗಾಗಿ ಕಲ್ಯಾಣ ಮಂಟಪ ಮತ್ತು ದೇವಸ್ಥಾನಗಳನ್ನು ಕಟ್ಟಿ ತಾವೇ ಅಧ್ಯಕ್ಷರಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅನೇಕ ಸಂಘ ಸಂಸ್ಥೆಗಳಲ್ಲಿಯೂ ಸಹ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಜೊತೆಗೆ ತಮ್ಮ ತೋಟಕ್ಕೆ ಭೇಟಿ ನೀಡುವ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಮಾದರಿ ರೈತರಾಗಿದ್ದಾರೆ.
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಮತ್ತು ಕೃಷಿ ಇಲಾಖೆಯೊಡನೆ ನಿಕಟ ಸಂಪರ್ಕವನ್ನು ಹೊಂದಿದ್ದು, ಸೂಕ್ತ ಮಾಹಿತಿ ಹಾಗೂ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಇವರ ಕೃಷಿ ಸಾಧನೆಗೆ 2014ರಲ್ಲಿ ಬೆಂಗಳೂರು ಕೃಷಿ ವಿಶ್ವದ್ಯಾನಿಲಯವು ಜಿಲ್ಲಾಮಟ್ಟದ ಪ್ರಗತಿಶೀಲ ಪ್ರಶಸ್ತಿ ಮತ್ತು ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾನಿಲಯದ ಶ್ರೇಷ್ಟ ತೋಟಗಾರಿಕೆ ರೈತ ಪ್ರಶಸ್ತಿ, 2017 ರಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿಂದ ರಾಜ್ಯ ಮಟ್ಟದ ಸಿ. ಬೈರೇಗೌಡ ಅತ್ಯುತ್ತಮ ರೈತ ಪ್ರಶಸ್ತಿ ಮತ್ತು 2018 ರಲ್ಲಿ ಕೇಂದ್ರ ಸರ್ಕಾರ ನೀಡುವ ಅತ್ಯುತ್ತಮ ರೈತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಯುವ ರೈತರಿಗೆ ಮಾದರಿಯಾಗಿರುವ ಇವರು ನೈಸರ್ಗಿಕ ಕೃಷಿ, ಸಮಗ್ರ ಕೃಷಿ ಮತ್ತು ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಾ ರಾಷ್ಟ್ರಮಟ್ಟದಲ್ಲಿ ಮಾದರಿ ಪ್ರಗತಿ ಪರ ರೈತರೆನಿಸಿಕೊಂಡಿದ್ದಾರೆ.