ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಯಾವುದೇ ಸರ್ಕಾರ ಬಂದರೂ ಅನುದಾನ ನೀಡುವಲ್ಲಿ ಅನ್ಯಾಯವಾಗುತ್ತಿದೆ, ಬಿಜೆಪಿ ಶಾಸಕ ರಾಮಮೂರ್ತಿಯವರು ಕಾಂಗ್ರೆಸ್ ಸರ್ಕಾರ ಅನುದಾನ ಕೊಡುತ್ತಿಲ್ಲ ಎಂದು ಕಾರಣ ಹೇಳುತ್ತಿದ್ದಾರೆ, ನಿಮ್ಮ ಕೈಯಲ್ಲಿ ಅನುದಾನ ತರಲು ಆಗದಿದ್ದ ಮೇಲೆ ರಾಜೀನಾಮೆ ಕೊಡಿ ಎಂದು ಆಮ್ ಆದ್ಮಿ ಪಕ್ಷದ ಜಯನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಡಾ. ಸರವಣ ಒತ್ತಾಯಿಸಿದ್ದಾರೆ.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 10 ವರ್ಷಗಳಿಂದ ಕ್ಷೇತ್ರದ ಜನತೆಗೆ ಅನ್ಯಾಯವಾಗುತ್ತಲೇ ಇದೆ, ಕಳೆದ ಬಾರಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಇದ್ದರು. ಬಿಜೆಪಿ ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಡುತ್ತಿಲ್ಲ ಎಂದು ಅವರು ಹೇಳುತ್ತಿದ್ದರು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾಗಿದೆ, ಆದರೆ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದು, ಈ ಸರ್ಕಾರ ಕೂಡ ಅಭಿವೃದ್ಧಿಗೆ ಹಣ ಕೊಡುತ್ತಿಲ್ಲ ಎಂದು ಹೇಳುತ್ತಿದ್ದಾರೆ, ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಇವರ ರಾಜಕೀಯ ಕಿತ್ತಾಟಕ್ಕೆ ಕ್ಷೇತ್ರದ ಜನ ದಿನನಿತ್ಯ ಸಮಸ್ಯೆ ಅನುಭವಿಸುವಂತಾಗಿದೆ ಎಂದರು.
ಕಳೆದ ಮೂರು ತಿಂಗಳಿನಿಂದ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಾಗಿದೆ. ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ, ಕೆಲಸ ಮಾಡಿಸಿ ಎಂದರೆ ಶಾಸಕರು ಅನುದಾನ ಇಲ್ಲ ಎನ್ನುತ್ತಿದ್ದಾರೆ. ಶಾಸಕರು ಯಾವುದೇ ಪಕ್ಷದವರಾಗಲಿ ಅಭಿವೃದ್ಧಿಗೆ ಹಣ ಕೊಡಬೇಕಾಗಿರುವುದು ಸರ್ಕಾರದ ಕರ್ತವ್ಯ ಎಂದರು.
ಬೆಂಗಳೂರಿನ ವ್ಯಾಪ್ತಿಯಲ್ಲಿರುವ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಅಭಿವೃದ್ಧಿಗಾಗಿ 10 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಆದರೆ ಜಯನಗರ ಕ್ಷೇತ್ರಕ್ಕೆ ಒಂದು ರೂಪಾಯಿ ಅನುದಾನ ಕೊಟ್ಟಿಲ್ಲ, ಇಲ್ಲಿನ ಬಿಜೆಪಿ ಶಾಸಕ ಸಿ.ಕೆ. ರಾಮಮೂರ್ತಿ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನಡುವಿನ ಮನಸ್ತಾಪವೇ ಇದಕ್ಕೆ ಕಾರಣ ಎನ್ನುತ್ತಿದ್ದಾರೆ. ನಿಮ್ಮ ರಾಜಕೀಯ ದ್ವೇಷಕ್ಕೆ ಕ್ಷೇತ್ರದ ಮತದಾರರು ಶಿಕ್ಷೆ ಅನುಭವಿಸಬೇಕಾ ಎಂದು ಪ್ರಶ್ನಿಸಿದರು.
ಸಿ.ಕೆ. ರಾಮಮೂರ್ತಿ ಬಿಜೆಪಿ ಶಾಸಕ ಮಾತ್ರವಲ್ಲ ಅವರು ಜಯನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ನಿಮ್ಮಿಬ್ಬರ ನಡುವಿನ ವೈಯಕ್ತಿಕ ಜಗಳಕ್ಕೆ ಕ್ಷೇತ್ರದ ಮತದಾರರಿಗೆ ಶಿಕ್ಷೆ ಯಾಕೆ?, ಶಾಸಕರೇ ನಿಮ್ಮ ಕ್ಷೇತ್ರಕ್ಕೆ ಅನುದಾನ ತರಲು ನಿಮಗೆ ತಾಕತ್ತಿಲ್ವಾ? ಬೇರೆ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಟ್ಟಿಲ್ವಾ? ನಿಮಗೆ ಅನುದಾನ ತರಲು ಆಗದಿದ್ದರೆ ರಾಜೀನಾಮೆ ಕೊಡಿ ಎಂದು ಒತ್ತಾಯಿಸಿದರು.
ಜಯನಗರ ಕ್ಷೇತ್ರದಿಂದ ಸರ್ಕಾರಕ್ಕೆ 540 ಕೋಟಿ ರೂಪಾಯಿ ತೆರಿಗೆ ಕಟ್ಟಿದ್ದೇವೆ. ಕ್ಷೇತ್ರದಿಂದ ಇಷ್ಟು ಆದಾಯ ಪಡೆದು ಈಗ ಅಭಿವೃದ್ಧಿಗೆ ಅನುದಾನ ಕೊಡದೆ ಅನ್ಯಾಯ ಮಾಡಲಾಗುತ್ತಿದೆ. ಕೂಡಲೇ ಡಿ.ಕೆ. ಶಿವಕುಮಾರ್ ತಮ್ಮ ರಾಜಕೀಯ ದ್ವೇಷವನ್ನು ಬದಿಗಿಟ್ಟು ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.
ಪಕ್ಷದ ಬೆಂಗಳೂರು ದಕ್ಷಿಣ ವಿಭಾಗದ ಅಧ್ಯಕ್ಷ ಜೋಶ್ವಾ ಸಿಂಟು, ಬೆಂಗಳೂರು ದಕ್ಷಿಣ ವಿಭಾಗದ ಸಂಘಟನಾ ಕಾರ್ಯದರ್ಶಿ ಶಶಿಧರ್ ಆರಾಧ್ಯ, ಜೋಶ್ವ, ಬೆಂಗಳೂರು ದಕ್ಷಿಣ ಅಲ್ಪ ಸಂಖ್ಯಾತರದ ಘಟಕದ ಅಧ್ಯಕ್ಷ ಮುರ್ತುಜಾ, ಬೆಂಗಳೂರು ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ ಹಾಜರಿದ್ದರು.