ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಂದಗುಡಿ, ಸೂಲಿಬೆಲೆ ಹೋಬಳಿಗಳ 36 ಗ್ರಾಮಗಳ 18,000 ಎಕರೆ ಕೃಷಿ ಭೂಮಿಯಲ್ಲಿ ಉಪನಗರ ನಿರ್ಮಿಸಲು ನಿರ್ಧಾರ ಮಾಡಿರುವುದು ರೈತ ವಿರೋಧಿ ನಿರ್ಧಾರ, ಕೂಡಲೇ ಈ ಯೋಜನೆಯನ್ನು ಕೈಬಿಡಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಭೂಸ್ವಾಧೀನ ವಿರೋಧ ಹೋರಾಟ ಸಮಿತಿ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಂದಗುಡಿ ಉಪನಗರ ಯೋಜನೆಗಾಗಿ ಸಾವಿರಾರು ರೈತರುಗಳ ಕೃಷಿ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಂಡಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ನಂದಗುಡಿಯ ಗಾಂಧಿ ಸರ್ಕಲ್ನಲ್ಲಿ ರೈತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಡಾ. ಮುಖ್ಯಮಂತ್ರಿ ಚಂದ್ರು, ಯಾವ ಸರ್ಕಾರಗಳು ಅಧಿಕಾರಕ್ಕೆ ಬಂದರೂ ರೈತರಿಗೆ ಕಷ್ಟ ತಪ್ಪುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಆಡಳಿತ ನಡೆಸಿರುವ ಜೆಸಿಬಿ ಸರ್ಕಾರಗಳು ರೈತರ ಹಿತವನ್ನು ಸಂಪೂರ್ಣವಾಗಿ ಕಡೆಗಣಿಸಿವೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳನ್ನು ಹೊರತುಪಡಿಸಿ ಉತ್ತಮ ಸರ್ಕಾರವನ್ನು ಆಯ್ಕೆ ಮಾಡಲು ರಾಜ್ಯದ ಜನತೆ ಗಂಭೀರವಾಗಿ ಚಿಂತಿಸುವ ಸಮಯ ಬಂದಿದೆ, ಇಲ್ಲದಿದ್ದರೆ ರಾಜ್ಯದ ರೈತರನ್ನು ಈ ರಾಜಕಾರಣಿಗಳು ಮತ್ತಷ್ಟು ಕಷ್ಟಕ್ಕೆ ತಳ್ಳುವುದು ಖಚಿತ, ರಾಜ್ಯದಲ್ಲಿ ರೈತಪರ ಸರ್ಕಾರ ಬರಬೇಕು, ರೈತ ಸಂಘಟನೆಗಳ ಪಕ್ಷಗಳು ಅಧಿಕಾರಕ್ಕೆ ಬಂದರೆ ಮಾತ್ರ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದರು.
ಹಲವು ತಲೆಮಾರುಗಳಿಂದ ಕೃಷಿಯನ್ನು ನಂಬಿಕೊಂಡು ಬದುಕುತ್ತಿರುವ ರೈತರ ಕುಟುಂಬಗಳನ್ನು ಬೀದಿಪಾಲು ಮಾಡಬಾರದು, ಕೂಡಲೇ ಸರ್ಕಾರ ಈ ಉಪನಗರ ಯೋಜನೆಯನ್ನು ಕೈಬಿಡುವ ಜೊತೆಗೆ, ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ಕೊಡಬೇಕು ಎಂದು ಡಾ. ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದ್ದಾರೆ.
ಬಲವಂತವಾಗಿ ಕೃಷಿ ಭೂಮಿಯನ್ನು ವಶಪಡಿಸಿಕೊಂಡು ರಿಯಲ್ ಎಸ್ಟೇಟ್ ದಂಧೆಗೆ ಸರ್ಕಾರ ಅವಕಾಶ ಕೊಡಬಾರದು. ಕೃಷಿ ಭೂಮಿಯನ್ನು ಕಳೆದುಕೊಂಡರೆ ಅದನ್ನೇ ನಂಬಿ ಬದುಕುತ್ತಿರುವ ಕೃಷಿ ಕುಟುಂಬಗಳು, ಕೃಷಿ ಕಾರ್ಮಿಕ ಕುಟುಂಬಗಳು ಬೀದಿ ಪಾಲಾಗಲಿವೆ, ಸಾವಿರಾರು ಜನ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಲಿದ್ದಾರೆ ಎಂದು ಹೇಳಿದರು.
ಈ ದೇಶದಲ್ಲಿ ರೈತರಿಗೆ ಸಿಗಬೇಕಾದ ಪ್ರಾಮುಖ್ಯತೆ ಸಿಗುತ್ತಿಲ್ಲ, ದೇಶಕ್ಕೆ ಅನ್ನ ಕೊಡುವುದು ರೈತರು, ನೀವು ಬೆಳೆಯುವ ರೇಷ್ಮೆಯಿಂದ ಬಟ್ಟೆ ಧರಿಸುತ್ತಿದ್ದಾರೆ, ನಾವು ರೈತರಿಗೆ ಋಣವಾಗಿರಬೇಕು. ಆದರೆ ಕಾಂಗ್ರೆಸ್, ಬಿಜೆಪಿ ಸರ್ಕಾರಗಳು ರೈತರ ಹಿತವನ್ನು ಸಂಪೂರ್ಣವಾಗಿ ಕಡೆಗಣಿಸಿವೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ನಿಮ್ಮ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ರೈತರ ನೆಮ್ಮದಿ ಹಾಳು ಮಾಡಬೇಡಿ ಎಂದು ಆಗ್ರಹಿಸಿದರು.
ಬಿ ಎಸ್ ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು, ಇವರು ಸಿಎಂ ಆಗುವ ಮೊದಲು ಎಷ್ಟು ಆಸ್ತಿ ಹೊಂದಿದ್ದರು, ಸಿಎಂ ಆದ ಬಳಿಕ ಎಷ್ಟು ಆಸ್ತಿ, ಜಮೀನು ಹೊಂದಿದ್ದಾರೆ? ಎಲ್ಲವೂ ಇವರಿಗೆ ಬೇಕು ಎಂದರೆ ಬಡವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಮಾತನಾಡಿ, ಕಾಂಗ್ರೆಸ್ ಆಗಲಿ ಬಿಜೆಪಿಯಾಗಲಿ ರೈತರ ಹಿತ ಕಾಯಲು ಎಂದೂ ಪ್ರಯತ್ನ ಮಾಡಿಲ್ಲ. ಇವರ ರಿಯಲ್ ಎಸ್ಟೇಟ್ ಲಾಭಿಗೆ ರಾಜ್ಯದ ರೈತರನ್ನು ಬಲಿ ಕೊಡಲು ಹೊರಟಿದ್ದಾರೆ. ಇದಕ್ಕೆ ಆಮ್ ಆದ್ಮಿ ಪಾರ್ಟಿ ಅವಕಾಶ ಕೊಡುವುದಿಲ್ಲ, ರೈತರು ನಡೆಸುತ್ತಿರುವ ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ರೈತರ ಬೇಡಿಕೆಯನ್ನು ಪರಿಗಣಿಸಿ ಕೂಡಲೇ ಸರ್ಕಾರ ಈ ಉಪನಗರ ಯೋಜನೆಯನ್ನು ಕೈಬಿಡಲಿ, ರೈತರು ನೆಮ್ಮದಿಯಾಗಿ ಕೃಷಿ ಮಾಡಲು ಅವಕಾಶ ಕೊಡಬೇಕು. ರೈತರ ವಿರೋಧದ ನಡುವೆಯೂ ಸರ್ಕಾರ ಏನಾದರೂ ರೈತರ ಜಮೀನು ಕಸಿಯಲು ಮುಂದಾದರೆ ಆಮ್ ಆದ್ಮಿ ಪಾರ್ಟಿ ವತಿಯಿಂದ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ಗೋಪಾಲಗೌಡ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ, ಹೋರಾಟ ಸಮಿತಿ ಅಧ್ಯಕ್ಷ ಕೆಂಚೇಗೌಡ ಸೇರಿದಂತೆ ಸ್ಥಳೀಯ ನಾಯಕರುಗಳು ಭಾಗವಹಿಸಿದ್ದರು.