ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಹೇಳೋದು ಹೊಸ ವಿಷಯ ಏನಲ್ಲ. ಆದರೆ ಈ ಮಟ್ಟದ ಸುಳ್ಳು ಹೇಳೋದು ಪ್ರಧಾನಿ ಸ್ಥಾನಕ್ಕೆ ದೊಡ್ಡ ಅವಮಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೋದಿಯವರ ಹೊಸ ಹೊಸ ಸುಳ್ಳುಗಳಿಗೆ ತಿರುಗೇಟು ನೀಡಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು.ಕರ್ನಾಟಕದಲ್ಲಿ ಅಬಕಾರಿ ಇಲಾಖೆಯ 700 ಕೋಟಿ ಹಣ ತಂದು ಮಹರಾಷ್ಟ್ರದಲ್ಲಿ ಕಾಂಗ್ರೆಸ್ ಚುನಾವಣೆ ನಡೆಸುತ್ತಿದೆ ಎನ್ನುವ ಪ್ರಧಾನಿಯವರ ಸುಳ್ಳಿನ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಿಎಂ ಮೇಲಿನಂತೆ ಪ್ರತಿಕ್ರಿಯಿಸಿದರು.
ಅಬಕಾರಿ ಇಲಾಖೆಯಲ್ಲಿ 700 ಕೋಟಿ ಎಲ್ಲಿರತ್ತೆ. ಯಾರು ಕೊಡ್ತಾರೆ? ಪ್ರಧಾನಿ ಆದವರಿಗೆ ಈ ಮಟ್ಟದ ತಿಳಿವಳಿಕೆ ಕೊರತೆ ಇರಬಾರದು ಎಂದರು.
ನಿವೃತ್ತ ನ್ಯಾಯಮೂರ್ತಿ ಕುನ್ಹಾ ಅವರ ವರದಿ ಆಧಾರದಲ್ಲಿ ಯಡಿಯೂರಪ್ಪ ಮತ್ತು ಶ್ರೀರಾಮುಲು ಅವರ ವಿರುದ್ಧ ಮುಂದಿನ ಕ್ರಮ ಏನು ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಎಂ, ವರದಿ ಮೊದಲು ಕ್ಯಾಬಿನೆಟ್ ಮುಂದೆ ಬರಲಿ. ಬಳಿಕ ತೀರ್ಮಾನ ಆಗ್ತದೆ ಎಂದರು.
ಕುನ್ಹಾ ಆಯೋಗದ ವರದಿಯ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ ಎನ್ನುವ ಬೊಮ್ಮಾಯಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಆಯೋಗದ ವರದಿ ಹೇಗೆ ಗೊಡ್ಡು ಬೆದರಿಕೆ ಆಗುತ್ತದೆ? ಜನರ ಹಣ ಲೂಟಿ ಹೊಡೆದು ಆಮೇಲೆ ಗೊಡ್ಡು ಬೆದರಿಕೆ ಅಂದರೆ ಹೇಗೆ ಎಂದು ಮರು ಪ್ರಶ್ನಿಸಿದರು.
30 ವರ್ಷಗಳ ಹಿಂದೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ತನ್ನ ಕೊಲೆಗೆ ಯತ್ನ ನಡೆದಿತ್ತು ಎನ್ನುವ ಯಡಿಯೂರಪ್ಪ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ ಆಗ ಏಕೆ ಯಡಿಯೂರಪ್ಪ ದೂರು ಕೊಡಲಿಲ್ಲ? ಕೇಸು ಹಾಕಿಸಲಿಲ್ಲ ಎಂದರು.
ಮುಡಾ ಪ್ರಕರಣದಲ್ಲಿ ಸ್ಟಾಂಪ್ ಡ್ಯೂಟಿಯನ್ನು ತಹಶೀಲ್ದಾರ್ ಕಟ್ಟಿದ್ದಾರೆ ಎನ್ನುವ ಹೊಸ ಸುಳ್ಳಿನ ಬಗ್ಗೆ ಪ್ರತಿಕ್ರಿಯಿಸಿ ತಹಶೀಲ್ದಾರ್ ಚೆಕ್ ನಲ್ಲಿ ಕೊಟ್ಟಿದ್ದಾರಾ ? ಯಾರು ಇಂಥಾ ಸುಳ್ಳುಗಳನ್ನು ಸೃಷ್ಟಿಸೋದು ಎಂದು ಪ್ರಶ್ನಿಸಿದರು.