ಬೆಂಗಳೂರು: ಇದೇ ನವೆಂಬರ್ 14 ರಿಂದ 20 ರವರೆಗೆ 71 ನೇ ಅಖಿಲ ಭಾರತ ಸಹಕಾರ ಸಪ್ತಾಹ -2024ನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಜಿ.ಟಿ.ದೇವೇಗೌಡ ಅವರು ತಿಳಿಸಿದರು.
ನಗರದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ಅವರ ಹುಟ್ಟುಹಬ್ಬವಾದ ನವೆಂಬರ್ 14 ರಂದು ಈ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಪ್ತಾಹವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಶಾಸಕರು, ಸಚಿವರು ಸೇರಿದಂತೆ ಗಣ್ಯರು ಮತ್ತು ಸಹಕಾರ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಬಾರಿಯ ಅಖಿಲ ಭಾರತ ಸಹಕಾರ ಸಪ್ತಾಹ -2024ರ ಧ್ಯೇಯ ವಾಕ್ಯ “ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ” ಎಂಬುದಾಗಿದೆ. ನವೆಂಬರ್ 15 ರಂದು ಚಿತ್ರದುರ್ಗದಲ್ಲಿ ನವೆಂಬರ್ 16 ರಂದು ಮಂಗಳೂರಿನಲ್ಲಿ ಹಾಗೂ ನವೆಂಬರ್ 17 ರಂದು ಬಾಗಲಕೋಟೆಯಲ್ಲಿ ನಡೆಯುವ ಸಹಕಾರ ಸಪ್ತಾಹ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ.
ನವೆಂಬರ್ 17 ರಂದು ಬಾಗಲಕೋಟೆಯಲ್ಲಿ ನಡೆಯುವ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಸಹಕಾರ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ‘ಸಹಕಾರ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಿದ್ದಾರೆ. ನವೆಂಬರ್ 18 ರಂದು ಬೀದರ್ನಲ್ಲಿ, ನವೆಂಬರ್ 19 ರಂದು ಚಿಕ್ಕಮಗಳೂರಿನಲ್ಲಿ ಹಾಗೂ ನವೆಂಬರ್ 20 ರಂದು ಬೆಳಗಾವಿಯಲ್ಲಿ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಏಳು ದಿನಗಳು ರಾಜ್ಯ, ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ರಾಜ್ಯ ಮಟ್ಟದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಅಪೆಕ್ಸ್ ಸಹಕಾರ ಸಂಸ್ಥೆಗಳು ಮತ್ತು ಸಹಕಾರ ಇಲಾಖೆ ನೇತೃತ್ವದಲ್ಲಿ ನಡೆಯಲಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಹಕಾರ ಯುನಿಯನ್ಗಳ ನೇತೃತ್ವದಲ್ಲಿ ಎಲ್ಲಾ ಸಹಕಾರ ಸಂಘಗಳ, ಸಹಕಾರ ಇಲಾಖೆಯ ನೆರವಿನೊಂದಿಗೆ ನಡೆಯಲಿದೆ. ಈ ಸಮಾರಂಭದಲ್ಲಿ 35 ಸಾವಿರಕ್ಕೂ ಹೆಚ್ಚು ಸಹಕಾರಿಗಳು ಭಾಗವಹಿಸುವ ನಿರೀಕ್ಷೆ ಇದೆ. ಈ ಅವಧಿಯಲ್ಲಿ ಸಹಕಾರ ಕ್ಷೇತ್ರಗಳ ಬೆಳವಣಿಗೆ, ಅವರ ಸಾಧನೆ ಮತ್ತು ವೈಪಲ್ಯಗಳ ಬಗ್ಗೆ ಅವಲೋಕನ ನಡೆಯಲಿದೆ ಎಂದರು.
ರಾಜ್ಯ ಸಹಕಾರ ಮಹಾಮಂಡಳವು ರೈತರ ಅಭಿವೃದ್ಧಿಗಾಗಿ ಈ ವರ್ಷ 36 ಲಕ್ಷ ರೈತರಿಗೆ 27 ಸಾವಿರ ಕೋಟಿ ರೂಪಾಯಿ ಬೆಳೆ ಸಾಲ ನೀಡುವ ಗುರಿ ಹೊಂದಿದೆ. ಸಹಕಾರ ಸಂಸ್ಥೆಗಳ ಸದಸ್ಯರು ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರುಗಳಿಗೆ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ 41 ಲಕ್ಷ ಸದಸ್ಯರು ಇದರಲ್ಲಿ ನೊಂದಣಿಯಾಗುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ 47 ಸಾವಿರ ಸಹಾಕಾರ ಸಂಸ್ಥೆಗಳು ಕ್ರಿಯಾಶೀಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಇದರಲ್ಲಿ 2 ಕೋಟಿ 72 ಲಕ್ಷ ಸದಸ್ಯರಿದ್ದಾರೆ.
ಹೈನುಗಾರಿಕೆ, ಕೃಷಿ ಪತ್ತಿನ ಸಹಕಾರ ವ್ಯವಸ್ಥೆ, ಪಟ್ಟಣ ಸಹಕಾರ ಬ್ಯಾಂಕುಗಳು, ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಅತ್ಯುತ್ತಮ ಸೇವೆ ಸಲ್ಲಿಸುತ್ತಿವೆ. ಇದರಿಂದ ಉದ್ಯೋಗ ಸೃಷ್ಠಿಯಾಗಿ ರಾಷ್ಟ್ರದ ಜಿ.ಡಿ.ಪಿ. ಹೆಚ್ಚಳವಾಗುತ್ತದೆ. ಮಹಿಳಾ ಸ್ವಾವಲಂಭನೆಗೆ ಸಹ ಮುಖ್ಯ ಪಾತ್ರ ವಹಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಉಪಾಧ್ಯಕ್ಷರಾದ ಜಗದೀಶ್ ಮಲ್ಲಿಕಾರ್ಜುನ ಕವಟಗಿಮಠ ಹಾಗೂ ಇತರ ನಿರ್ದೇಶಕರು ಉಪಸ್ಥಿತರಿದ್ದರು.