ಬೆಂಗಳೂರು: ಎಎಪಿ ಸರ್ಕಾರ ದೆಹಲಿಯಲ್ಲಿ ಯಶಸ್ವಿಯಾಗಿ ನಡೆಸುತ್ತಿರುವ ನಮ್ಮ ಮೊಹಲ್ಲಾ ಕ್ಲಿನಿಕ್ ಮಾದರಿಯನ್ನು ಅನುಸರಿಸಿ ರಾಜ್ಯದಲ್ಲಿ ನಮ್ಮ ಕ್ಲಿನಿಕ್ ಹೆಸರಿನಲ್ಲಿ ಆರೋಗ್ಯ ಸೇವೆ ಒದಗಿಸುವ ರಾಜ್ಯ ಸರ್ಕಾರದ ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ. ಮೂರು ವರ್ಷಗಳಲ್ಲಿ 500 ಕೋಟಿ ರೂಪಾಯಿಗೂ ಹೆಚ್ಚು ಹಣ ಖರ್ಚು ಮಾಡಿದ್ದರೂ ಜನರಿಗೆ ಅನುಕೂಲವಾಗಿಲ್ಲ, ಆರೋಗ್ಯ ಸೇವೆ ಸುಧಾರಿಸಲು ಆಗದೇ ಇದ್ದರೆ ಸಚಿವ ದಿನೇಶ್ ಗುಂಡೂರಾವ್ ರಾಜೀನಾಮೆ ಕೊಡಲಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್ ಆಗ್ರಹಿಸಿದ್ದಾರೆ.
ನಗರದ ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಕ್ಲಿನಿಕ್ಗಳಲ್ಲಿ ಸರಿಯಾದ ಆರೋಗ್ಯ ಸೇವೆ ಸಿಗುತ್ತಿಲ್ಲ ಎಂದು ಹಲವು ಪತ್ರಿಕೆಗಳು ವರದಿ ಮಾಡಿವೆ. ಕಳೆದ ಏಳು ತಿಂಗಳಿನಲ್ಲಿ ಕನಿಷ್ಠ 10 ಕ್ಲಿನಿಕ್ಗಳಲ್ಲಿ ದಿನಕ್ಕೆ ಒಬ್ಬರು ಅಥವಾ ಇಬ್ಬರಿಗೆ ಮಾತ್ರ ಚಿಕಿತ್ಸೆ ಸಿಕ್ಕಿದೆ. 62 ನಮ್ಮ ಕ್ಲಿನಿಕ್ಗಳಲ್ಲಿ ದಿನಕ್ಕೆ 10ಕ್ಕಿಂತ ಕಡಿಮೆ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರು ಮತ್ತು ಸಿಬ್ಬಂದಿಯ ಕೊರತೆಯಿಂದ ಜನರಿಗೆ ಆರೋಗ್ಯ ಸೇವೆ ದೊರೆಯಂತಾಗಿದೆ ಎಂದರು.
ದೆಹಲಿಯಲ್ಲಿ ಕಳೆದ 9 ವರ್ಷಗಳಿಂದ ಎಎಪಿ ಸರ್ಕಾರ ನಡೆಸುತ್ತಿರುವ ಮೊಹಲ್ಲಾ ಕ್ಲಿನಿಕ್ಗಳು ಲಕ್ಷಾಂತರ ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುತ್ತಿವೆ. ರಾಜ್ಯದಲ್ಲಿ ದೆಹಲಿ ಯೋಜನೆ ಅನುಸರಿಸಿದರೂ, ಗುಣಮಟ್ಟದ ಸೇವೆ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು.
2020ರಲ್ಲಿ ಆಮ್ ಆದ್ಮಿ ಪಾರ್ಟಿ ವತಿಯಿಂದ ಬೆಂಗಳೂರಿನ ಶಾಂತಿ ನಗರದಲ್ಲಿ ಆಮ್ ಆದ್ಮಿ ಕ್ಲಿನಿಕ್ ಸ್ಥಾಪನೆ ಮಾಡಿದೆ. ದೆಹಲಿಯ ಮೊಹಲ್ಲಾ ಕ್ಲಿನಿಕ್ನಂತೆ ಈ ಕ್ಲಿನಿಕ್ ಕೂಡ ಜನರಿಗೆ ಉತ್ತಮ ಚಿಕಿತ್ಸೆಯನ್ನು ನೀಡಿದೆ. ಒಂದು ವರ್ಷದಲ್ಲಿ 10,000 ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ನಗರದಲ್ಲಿ ಇಂತಹ ಕ್ಲಿನಿಕ್ಗಳ ಅಗತ್ಯತೆಯನ್ನು ಆಮ್ ಆದ್ಮಿ ಕ್ಲಿನಿಕ್ ತೋರಿಸಿದೆ ಎಂದರು.
ಆರೋಗ್ಯ ಸಚಿವರಾಗಿರುವ ದಿನೇಶ್ ಗುಂಡೂರಾವ್ ಕೇವಲ ನೂರು ಮತಗಳ ಅಂತರದಿಂದ ಗೆಲುವು ಸಾಧಿಸಿರುವುದಕ್ಕೆ ಅವರಿಗೆ ಆರೋಗ್ಯ ಖಾತೆಯನ್ನು ನೀಡಲಾಗಿದೆ ಎಂದು ತಪ್ಪಾಗಿ ಭಾವಿಸಿಕೊಂಡಂತಿದೆ. ಆರೋಗ್ಯ ಖಾತೆ ಎಷ್ಟು ಮುಖ್ಯವಾದುದು ಎನ್ನುವುದನ್ನು ಅರ್ಥ ಮಾಡಿಕೊಂಡು ನಮ್ಮ ಕ್ಲಿನಿಕ್ ವ್ಯವಸ್ಥೆಯನ್ನು ಕೂಡಲೇ ಸುಧಾರಿಸಬೇಕಿದೆ, ರೋಗಿಗಳ ಸಂಖ್ಯೆ ಕಡಿಮೆಯಾಗಲು ಕಾರಣವೇನು ಎನ್ನುವುದನ್ನು ತಿಳಿದು ಜನರಿಗೆ ಆರೋಗ್ಯ ಸೇವೆ ಸಿಗುವಂತೆ ಮಾಡಲಿ ಎಂದು ಒತ್ತಾಯಿಸಿದರು. ಒಂದು ದಿನೇಶ್ ಗುಂಡೂರಾವ್ ಅವರಿಗೆ ಖಾತೆ ನಿಭಾಯಿಸಲು ಇಷ್ಟವಾಗದೇ ಇದ್ದರೆ ರಾಜೀನಾಮೆ ಕೊಡಲಿ ಎಂದರು.
ರಾಜ್ಯ ಖಜಾಂಚಿ ಪ್ರಕಾಶ್ ನೆಡುಂಗಡಿ ಮಾತನಾಡಿ, ರಾಜ್ಯಾದ್ಯಂತ 438 ನಮ್ಮ ಕ್ಲಿನಿಕ್ಗಳಿದ್ದು ಪ್ರತಿ ಕ್ಲಿನಿಕ್ಗೂ ರಾಜ್ಯ ಸರ್ಕಾರ ವರ್ಷಕ್ಕೆ 39 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡುತ್ತಿದೆ. ಮೂರು ವರ್ಷಗಳಲ್ಲಿ ನಮ್ಮ ಕ್ಲಿನಿಕ್ಗಾಗೊ 500 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ. ಕೋಟಿ ಕೋಟಿ ಹಣ ಖರ್ಚು ಮಾಡಿದರೂ ಎಲ್ಲವೂ ಭ್ರಷ್ಟರ ಪಾಲಾಗುತ್ತಿದ್ದು ರಾಜ್ಯದ ಜನತೆಗೆ ಸರಿಯಾದ ಆರೋಗ್ಯ ಸೇವೆ ಸಿಗುತ್ತಿಲ್ಲ ಎಂದರು.
ಸರ್ಕಾರದ ಬಳಿ ಸಂಬಳ ಕೊಡಲು ಹಣ ಇಲ್ಲದ ಕಾರಣ ಎಂಬಿಬಿಎಸ್ ಮುಗಿಸಿರುವ ಸರ್ಕಾರಿ ಕೋಟಾ ವಿದ್ಯಾರ್ಥಿಗಳು ಕಡ್ಡಾಯವಾಘಿ ಮೂರು ವರ್ಷ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಬೇಕು ಎನ್ನುವ ಹಿಂದಿನ ನೀತಿಯನ್ನು ತೆಗೆದುಹಾಕಿದೆ. ಇದರಿಂದ ನಮ್ಮ ಕ್ಲಿನಿಕ್ಗಳಲ್ಲಿ ವೈದ್ಯರಿಲ್ಲದೆ ಪರದಾಡುವ ಸ್ಥಿತಿ ಬಂದಿದೆ. ಈ ಸರ್ಕಾರದ ಬಳಿ ಜನರ ಆರೋಗ್ಯ ಕಾಪಾಡುವ ಸರ್ಕಾರಿ ವೈದ್ಯರಿಗೆ ಸಂಬಳ ಕೂಡ ಕೊಡಲಾಗದ ಮಟ್ಟಕ್ಕೆ ತಲುಪಿದೆಯಾ ಎನ್ನುವುದನ್ನು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕಿದೆ ಎಂದರು.