ಬೆಂಗಳೂರು: ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ 18ವರ್ಷ ಮೇಲ್ಪಟ್ಟವರನ್ನು ಹೊಸ ಮತದಾರರ ಮಾಹಿತಿ ಪಡೆದು ಅವರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅರಿವು ಮೂಡಿಸುವ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಬೇಕೆಂದು ಬಿಬಿಎಂಪಿ(ಕೇಂದ್ರ) ಮತದಾರರ ಪಟ್ಟಿ ವೀಕ್ಷಕರಾದ ವಿಪುಲ್ ಬನ್ಸಾಲ್ ರವರು ತಿಳಿಸಿದರು.
ಬಿಬಿಎಂಪಿ(ಕೇಂದ್ರ) ವಿಭಾಗದ 7-ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ 2025ರ ಸಂಬಂಧ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮಾನ್ಯ ಸರ್ಕಾರದ ಕಾರ್ಯದರ್ಶಿಗಳು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಮತ್ತು ಬಿಬಿಎಂಪಿ(ಕೇಂದ್ರ) ಮತದಾರರ ಪಟ್ಟಿ ವೀಕ್ಷಕರಾದ ಶ್ರೀ ವಿಪುಲ್ ಬನ್ಸಾಲ್ ರವರು ಎಲ್ಲಾ ರಾಜಕೀಯ ಪಕ್ಷದ ಪ್ರತಿನಿಧಿಗಳ ಜೊತೆ ಇಂದು ಪಾಲಿಕೆ ಕೇಂದ್ರ ಕಛೇರಿಯ ಸಭಾಂಗಣ-1ರಲ್ಲಿ ಸಭೆ ನಡೆಸಿದರು.
ಪಾಲಿಕೆಯ ಘನತ್ಯಾಜ್ಯ ಸಂಗ್ರಹಿಸುವ ಆಟೋಗಳಲ್ಲಿ ಪ್ರಚಾರ ಮಾಡುವುದರ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಅರಿವು ಮೂಡಿಸುವುದು ಅವಶ್ಯಕತೆ ಇರುತ್ತದೆ ಎಂದು ರಾಜಕೀಯ ಪಕ್ಷದ ಪ್ರತಿನಿಧಿಗಳು ಅಭಿಪ್ರಾಯಪಟ್ಟರು.
ಪಾಲಿಕೆ ವ್ಯಾಪ್ತಿಯಲ್ಲಿನ ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುತ್ತಿರುವಂತಹ ಸಾರ್ವಜನಿಕರನ್ನು ಬೂತ್ ಮಟ್ಟದ ಅಧಿಕಾರಿಗಳು ಸಂಪರ್ಕಿಸಿ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಅರಿವು ಮೂಡಿಸುವಂತೆ ರಾಜಕೀಯ ಪಕ್ಷದ ಪ್ರತಿನಿಧಿಗಳು ನೀಡಿದ ಕೋರಿಕೆ ಮೇರೆಗೆ, ಈ ಸಂಬಂಧ ಎಲ್ಲಾ ಮತದಾರರ ನೋಂದಣಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಯಾವುದೇ ಮತದಾರರು ಹಾಲಿ ವಾಸ ಸ್ಥಳದಿಂದ ಬೇರೆಡೆಗೆ ಸ್ಥಳಾಂತರಗೊಂಡಿದ್ದಲ್ಲಿ, ಹಳೆಯ ಮನೆಯ ವಿಳಾಸದಲ್ಲಿನ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟು, ಹೊಸ ವಿಳಾಸದಲ್ಲಿ ಅವರ ಹೆಸರನ್ನು ಸೂಕ್ತ ರೀತಿಯಲ್ಲಿ ಮತದಾರರ ಪಟ್ಟಿಯಲ್ಲಿ ಸೇರಿಸುವ ಕಾರ್ಯ ಮಾಡಬೇಕೆಂದು ತಿಳಿಸಿದರು.
ಈ ವೇಳೆ ಅಪರ ಜಿಲ್ಲಾ ಚುನಾವಣಾಧಿಕಾರಿಗಳು(ಕೇಂದ್ರ) ಮತ್ತು ಆಡಳಿತ ವಿಭಾಗದ ವಿಶೇಷ ಆಯುಕ್ತರಾದ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಚುನಾವಣಾ ವಿಭಾಗದ ಸಹಾಯಕ ಆಯುಕ್ತರು, ಬಿಬಿಎಂಪಿ(ಕೇಂದ್ರ) ವ್ಯಾಪ್ತಿಯ ಮತದಾರರ ನೊಂದಣಾಧಿಕಾರಿಗಳು ಉಪಸ್ಥಿತರಿದ್ದರು.