ಬೆಂಗಳೂರು: ಮಹದೇವಪುರ ವಲಯದ ವೈಟ್ರೋಸ್ ಲೇಔಟ್ ನಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ಅನಧಿಕೃತವಾಗಿ ನಿರ್ಮಿಸಿದ ಕಟ್ಟಡ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.
ವಲಯ ಆಯುಕ್ತರಾದ ರಮೇಶ್ ರವರ ನಿರ್ದೇಶನದಂತೆ ಇಂದು ಸೈಟ್ ಸಂ. 23ಎ, ವೈಟ್ ರೋಸ್ ಲೇವಟ್, ಪಟ್ಟಂದೂರು ಅಗ್ರಹಾರದಲ್ಲಿ ಮಾಲೀಕರಾದ ತುಳಸೀದೇವಿ ಎಂಬುವವರು 30X80 ಸೈಟ್ ನಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ಅನಧಿಕೃತವಾಗಿ ನೆಲಮಹಡಿ + 4 ಅಂತಸ್ತು ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಕಟ್ಟಡ ಮಾಲೀಕರಿಗೆ ಈಗಾಗಲೇ ನೋಟೀಸ್ ಜಾರಿ ಮಾಡಲಾಗಿರುತ್ತದೆ.
ಕಟ್ಟಡದ ಮಾಲೀಕರಿಗೆ ನೋಟೀಸ್ ಜಾರಿ ಮಾಡಿದ್ದರೂ ಕೂಡಾ ಕಟ್ಟಡ ನಿರ್ಮಾಣ ಕಾರ್ಯ ನಿಲ್ಲಿಸದ ಪರಿಣಾಮ, ಇಂದು ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ 1 ಜೆಸಿಬಿ ಹಾಗೂ 10 ಸಿಬ್ಬಂದಿಗಳ ಮೂಲಕ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ತೆರವುಗೊಳಿಸಲು ತಗುಲಿದ ವೆಚ್ಚವನ್ನು ಕಟ್ಟಡ ಮಾಲೀಕರಿಂದ ವಸೂಲಿ ಮಾಡಲಾಗುವುದು.
ಈ ವೇಳೆ ಕಾರ್ಯಪಾಲಕ ಅಭಿಯಂತರರಾದ ರವಿಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಗುರುರಾಜ್, ಸಹಾಯಕ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬ0ಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.