ಬೆಂಗಳೂರು: ದಾಸರಹಳ್ಳಿ ವಲಯದ ನೆಲಗದರನಹಳ್ಳಿ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಎರಡು ತಿಂಗಳೊಳಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು *ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್* ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯ ದಾಸರಹಳ್ಳಿ ವಲಯದಲ್ಲಿ ಇಂದು “ಮುಖ್ಯ ಆಯುಕ್ತರ ನಡೆ ವಲಯದ ಕಡೆ” ಕಾರ್ಯಕ್ರಮದಡಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ನೆಲಗದರನಹಳ್ಳಿ ರಸ್ತೆಯು ತುಮಕೂರು ಮುಖ್ಯ ರಸ್ತೆಯಿಂದ ಗಂಗಾ ಇಂಟರ್ ನ್ಯಾಷನಲ್ ಸ್ಕೂಲ್ ವರೆಗೆ ಸುಮಾರು 2.45 ಕಿ.ಮೀ ಇದ್ದು, ಈ ಹಿಂದೆ ಇದ್ದ 30 ರಿಂದ 40 ಅಡಿ ರಸ್ತೆಯನ್ನು 60 ಅಡಿಗೆ ಅಗಲೀಕರಣ ಮಾಡಲಾಗುತ್ತದೆ. ಈ ಸಂಬಂಧ ಈಗಾಗಲೇ 1.2 ಕಿ.ಮೀ ರಸ್ತೆ ಅಗಲೀಕರಣ ಮಾಡಿ ಡಾಂಬರೀಕರಣ ಮಾಡಲಾಗಿದ್ದು, ಬಾಕಿ 1.25 ಕಿ.ಮೀ ಉದ್ದದ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿದರು.
ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ 173 ಮಂದಿಯ ಆಸ್ತಿಗಳಿಗೆ ಟಿಡಿಆರ್ ನೀಡುವ ವಿಚಾರವಾಗಿ, ಈಗಾಗಲೇ 16 ಮಂದಿಗೆ ಟಿಡಿಆರ್ ನೀಡಲಾಗಿದೆ. ಇನ್ನು 85 ಮಂದಿ ದಾಖಲಾತಿಗಳನ್ನು ಸಲ್ಲಿಸಿದ್ದು, 4 ಆಸ್ತಿಗಳು ಸರ್ಕಾರಿ ಸ್ವತ್ತಾಗಿರುತ್ತದೆ. ಈ ಪೈಕಿ ಇನ್ನೂ ಯರ್ಯಾರಿಗೆ ಟಿಡಿಆರ್ ನೀಡಿಲ್ಲ ಅವರಿಗೆ ಟಿಡಿಆರ್ ನೀಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಅಬ್ಬಿಗೆರೆ ಕೆರೆ ಪರಿಶೀಲನೆ:
ಅಬ್ಬಿಗೆರೆ ಕೆರೆ 45 ಎಕರೆ ಪ್ರದೇಶದಲ್ಲಿದ್ದು, 4.5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಆ ಕಾಮಗಾರಿಯಲ್ಲಿ ಈಗಾಗಲೇ ಹೂಳೆತ್ತುವ ಕಾರ್ಯ, ಸೀವೇಜ್ ಡೈವರ್ಷನ್ ಡ್ರೈನ್, ಬಂಡ್ ನಿರ್ಮಿಸುವ, ಇನ್ಲೆಟ್ ಹಾಗೂ ಔಟ್ ಲೆಟ್ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇನ್ನು ಫೆನ್ಸಿಂಗ್ ಅಳವಡಿಸುವ, ಶೌಚಾಲಯ, ಭದ್ರತಾ ಸಿಬ್ಬಂದಿಯ ಕೊಠಡಿ ಹಾಗೂ ಪ್ರವೇಶ ದ್ವಾರದ ಕಾಮಗಾರಿ ಬಾಕಿಯಿದ್ದು, ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಿದರು.
ಇದೇ ಕೆರೆಯ ಒಂದು ಭಾಗದ ಕಲ್ವರ್ಟ್ ಮಳೆಗಾಲದ ವೇಳೆ ಕೊಚ್ಚಿ ಹೋಗಿದ್ದು, ಅದರ ದುರಸ್ಥಿ ಕಾಮಗಾರಿಗಾಗಿ 1.05 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಮತ್ತೆ ಮಳೆಗಾಲ ಪ್ರಾರಂಭವಾಗುವ ವೇಳೆಗೆ ಕಲ್ವರ್ಟ್ ಕಾಮಗಾರಿ, ರಾಜಕಾಲುವೆಯ ಆರ್.ಸಿ.ಸಿ ಗೋಡೆ ಸೇರಿದಂತೆ ಇನ್ನಿತರೆ ಕಾಮಗಾರಿಯನ್ನು ಪ್ರಾರಂಭಿಸಿ ನಿಗದಿತ ಸಮಯದೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿದರು.
ಅಬ್ಬಿಗೆರೆ ಉದ್ಯಾನವನ ಪರಿಶೀಲನೆ:
ಅಬ್ಬಿಗೆರೆಯ ಉದ್ಯನಾವನವು 6 ಎಕರೆ ಪ್ರದೇಶದಲ್ಲಿದ್ದು, ಅದರ ನಿರ್ವಹಣೆಗೆ ಟೆಂಡರ್ ಕರೆಯಲಾಗುತ್ತಿದೆ. ಈ ಸಂಬಂಧ ಉದ್ಯಾನವನದಲ್ಲಿ ಅಳವಡಿಸಿರುವ ಜಿಮ್ ಉಪಕರಣಗಳು ಹಾಳಾಗಿದ್ದು, ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅವುಗಳನ್ನು ಬದಲಿಸಲು ಸೂಚನೆ ನೀಡಿದರು.
ರಸ್ತೆ ಡಾಂಬರೀಕರಣ ಕಾರ್ಯ ಪರಿಶೀಲನೆ:
ಶೆಟ್ಟಿಹಳ್ಳಿಯ ಆರ್.ಕೆ. ಎನ್ ಕ್ಲೇವ್ ಬಳಿ ರಸ್ತೆ ಡಾಂಬರೀಕರಣ ಹಾಕಿರುವುದನ್ನು ಪರಿಶೀಲಿಸಿ, ಡಾಂಬರೀಕರಣ ಆಗಿರುವ ರಸ್ತೆಯಲ್ಲಿ ಸೈಡ್ ಡ್ರೈನ್ ಗೆ ನೀರು ಹೋಗಲು ಸರಿಯಾದ ವ್ಯವಸ್ಥೆ ಮಾಡದಿರುವುದನ್ನು ಗಮನಿಸಿ ಗ್ರೇಟಿಂಗ್ ಅಳವಡಿಸಿ ರಸ್ತೆ ಮೇಲೆ ನೀರು ನಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಬೀದಿ ನಾಯಿಗಳ ಎಬಿಸಿ ಸೆಂಟರ್ ಪರಿಶೀಲನೆ:
ಶೆಟ್ಟಿಹಳ್ಳಿಯಲ್ಲಿ ಸಂತಾನ ಹರಣ ಶಸ್ತç ಚಿಕಿತ್ಸೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಎಬಿಸಿ ಮಾಡಲು 54 ಕೆನಲ್ಸ್ ಗಳಿದ್ದು, 5 ಐಸೋಲೇಷನ್ ಸೆಂಟರ್ ಗಳಿವೆ. ದಾಸರಹಳ್ಳಿ ಹಾಗೂ ಆರ್.ಆರ್ ನಗರ ವಲಯದ ಬೀದಿ ನಾಯಿಗಳಿಗೆ ಇಲ್ಲಿ ಎಬಿಸಿ ಮಾಡಲಾಗುತ್ತಿದೆ. 33 ಲಕ್ಷ ರೂ. ವೆಚ್ಚದಲ್ಲಿ ಎಬಿಸಿ ಸೆಂಟರ್ ನ ದುರಸ್ತಿ ಹಾಗೂ ಪೆಯ್ಟಿಂಗ್ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದೇ ಸ್ಥಳದಲ್ಲಿ ಒಣ ತ್ಯಾಜ್ಯ ಸಂಗ್ರಹಣಾ ಘಟಕ ಕಾಮಗಾರಿ ಸ್ಥಗಿತಗೊಂಡಿದ್ದು, ಅದನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಿ ಕಾರ್ಯಾರಂಭ ಮಾಡಲು ಸೂಚನೆ ನೀಡಿದರು.
ನಾಗಸಂದ್ರ ಹಾವನೂರು ಬಡಾವಣೆಯಲ್ಲಿ ಜಲಮಂಡಳಿಯು ಒಳಚರಂಡಿಯ ಪೈಪ್ ಲೈನ್ ಕಾಮಗಾರಿ ಭಾಗವನ್ನು ದುರಸ್ತಿ ಮಾಡದ ಕಾರಣ ಪಾಲಿಕೆ ವತಿಯಿಂದಲೇ ಕತ್ತರಿಸಿರುವ ಭಾಗಕ್ಕೆ ಡಾಂಬರೀಕರಣ ಮಾಡುವುದನ್ನು ಪರಿಶೀಲಿಸಿದರು. 25 ಕೋಟಿ ರೂ. ವೆಚ್ಚದಲ್ಲಿ ಶೆಟ್ಟಿಹಳ್ಳಿ ಹಾಗೂ ಬಾಗಲಗುಂಟೆಯ ವಾರ್ಡ್ ರಸ್ತೆಗಳು ಹಾಗೂ ಅಡ್ಡರಸ್ತೆಗಳು ಡಾಂಬರೀಕರಣ ಕಾಮಗಾರಿ ಬಹುತೇಖ ಪೂರ್ಣಗೊಂಡಿರುತ್ತದೆ.
ರುದ್ರಭೂಮಿಗೆ ಕಾಂಪೌಂಡ್ ಗೋಡೆ ನಿರ್ಮಿಸಿ:
ದಾಸರಹಳ್ಳಿ ವಲಯದ ಅಬ್ಬಿಗೆರೆ ಫಾರೆಸ್ಟ್ ರಸ್ತೆಯ ಅಗಲೀಕರಣದ ವೇಳೆ ರುದ್ರಭೂಮಿಯ ಗೋಡೆಯನ್ನು ತೆರವುಗೊಳಿಸಲಾಗಿದ್ದು, ಆ ಗೋಡೆಯನ್ನು ಗುತ್ತಿಗೆದಾರರ ಮೂಲಕ ಕೂಡಲೆ ನಿರ್ಮಾಣ ಮಾಡಲು ಸೂಚಿಸಿದರು.
ಈ ವೇಳೆ ವಲಯ ಆಯುಕ್ತರಾದ ಗಿರೀಶ್, ವಲಯ ಜಂಟಿ ಆಯುಕ್ತರಾದ ಪ್ರೀತಮ್ ನಸಲಾಪುರ್, ಮುಖ್ಯ ಅಭಿಯಂತರರಾದ ರವಿ, ವಿಜಯ್ ಕುಮಾರ್ ಹರಿದಾಸ್, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.