ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಇಂದು ಒಟ್ಟು 9 ವಿಧೇಯಕಗಳಿಗೆ ತಿದ್ದುಪಡಿ ಮಾಡಿ ಅನುಮೋದಿಸಲಾಗಿದೆ.
“ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ (ಕರ್ನಾಟಕ) (ತಿದ್ದುಪಡಿ) ನಿಯಮಗಳು, 2024″ಕ್ಕೆ ಅನುಮೋದನೆ:
ಅಸಂಘಟಿತ ಕಾರ್ಮಿಕರ ಕರ್ನಾಟಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ, 2024 ನ್ನು ಅನುಮೋದಿಸಲಾಗಿದೆ.
ಕಾರ್ಮಿಕ ಕಲ್ಯಾಣ ನಿಧಿಗೆ ಪ್ರತಿ ಕಾರ್ಮಿಕರಿಂದ 20 ರೂ, ಮಾಲೀಕರಿಂದ 40 ರೂ. ಹಾಗೂ ಸರ್ಕಾರದಿಂದ 20 ರೂ.ಗಳನ್ನು ಸಂಗ್ರಹಿಸುವುದನ್ನು ಹೆಚ್ಚಿಸಿ 50-50 ಮಾಡಲಾಗಿದೆ . ಪ್ರಸ್ತುತ ಕಾರ್ಮಿಕರಿಂದ 50 ರೂ, ಸರ್ಕಾರದಿಂದ 50 ರೂ.ಗಳು ಹಾಗೂ ಮಾಲೀಕರಿಂದ 100 ಹಾಗೂ ವಂತಿಗೆಯನ್ನು ಹೆಚ್ಚಿಸಲು ತಿದ್ದುಪಡಿ ಮಾಡಲಾಗಿದೆ. 42 ಕೋಟಿ ರೂ.ಗಳ ವಂತಿಗೆ ಸಂಗ್ರಹವಾಗುತ್ತಿತ್ತು. ತಿದ್ದುಪಡಿಯಿಂದ 100 ಕೋಟಿ ರೂ.ಗಳಷ್ಟು ಮೊತ್ತ ಸಂಗ್ರಹವಾಗುವ ಅಂದಾಜಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್. ಕೆ.ಪಾಟೀಲ್ ತಿಳಿಸಿದರು
“ಕರ್ನಾಟಕ ಅಂತರ್ಜಲ (ನಿಯಮಾವಳಿ ಮತ್ತು ಅಭಿವೃದ್ಧಿ ಮತ್ತು ನಿರ್ವಹಣಾ ನಿಯಂತ್ರಣ) (ತಿದ್ದುಪಡಿ) ವಿಧೇಯಕ-2024ಕ್ಕೆ ಅನುಮೋದನೆ:
ಕೊಳವೆಬಾವಿಗಳನ್ನು ಕೊರೆದು ವಿಫಲವಾದಲ್ಲಿ ಕೊಳವೆಬಾವಿಗಳನ್ನು ಮುಚ್ಚದೇ ಬಿಡುವುದನ್ನು ತಪ್ಪಿಸಲು ಈ ವಿಧೇಯಕವನ್ನು ತಿದ್ದುಪಡಿ ಮಾಡಲಾಗಿದೆ. ಒಂದು ವರ್ಷ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಲು ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ವಿಫಲರಾಗುವ ಅಧಿಸೂಚಿಯಲ್ಲದ ಪ್ರದೇಶಗಳಲ್ಲಿ ಅಂತರ್ಜಲ ಉಪಯೋಗಿಸಿ ನಿಯಮ ಉಲ್ಲಂಘಿಸುವ ವ್ಯಕ್ತಿಗಳಿಗೆ 5000 ರೂ.ಗಳ ದಂಡ ಹಾಗೂ ಮೂರು ತಿಂಗಳ ಕಾರಾಗ್ರಹ ಶಿಕ್ಷೆ ವಿಧಿಸಲು ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗಿದೆ.
“ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ-204 ಕ್ಕೆ ಅನುಮೋದನೆ:
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕೆ ಇಲ್ಲಿಯವರೆಗೆ ರಾಜ್ಯಪಾಲರು ಕುಲಪತಿಗಳಾಗಿದ್ದರು. ತಿದ್ದುಪಡಿಯ ನಂತರ ಮುಖ್ಯಮಂತ್ರಿಗಳು ಕುಲಪತಿಗಳಾಗಲಿದ್ದಾರೆ. ವಿಶ್ವವಿದ್ಯಾಲಯ ಹೆಚ್ಚು ಕ್ರಿಯಾಶೀಲವಾಗಬೇಕು ಹಾಗೂ ನಿರ್ಣಯಗಳು ಶೀಘ್ರವಾಗಿ ಆಗಬೇಕು ಎನ್ನುವ ಕಾರಣಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
“ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ-2024, “ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (2ನೇ ತಿದ್ದುಪಡಿ) ವಿಧೇಯಕ, 2024” , “ಕರ್ನಾಟಕ ಕಾರ್ಮಿಕರ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ, 2024, “Karnataka State Allied and Healthcare Professions Council ನಿಯಮಗಳು, 2024” ಹಾಗೂ
“ಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ, ವಿಧೇಯಕ, 2024″ಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ,
*ಪ್ರವಾಸಿ ತಾಣಗಳಲ್ಲಿ ರೋಪ್ ವೇ*
· ರಾಜ್ಯದ ಹಲವಾರು ಪ್ರವಾಸಿ ತಾಣಗಳಲ್ಲಿ ರೋಪ್ ವೇ ಗಳನ್ನು ನಿರ್ಮಿಸುವ ಸಂಬಂಧ, ಕರ್ನಾಟಕ ಪ್ರವಾಸೋದ್ಯಮ ರೋಪ್ ವೇಸ್ ವಿಧೇಯಕ 2024 ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಲಾಗಿದೆ. ಅಂಜನಾದ್ರಿ, ಯಾದಗಿರಿ, ನಂದಿಬೆಟ್ಟ, ಸವದತ್ತಿ ಸೇರಿದಂತೆ 12 ಕಡೆಗಳಲ್ಲಿ ಸಮೀಕ್ಷೆ ನಡೆಸಿ ರೋಪ್ ವೇ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು.
*ಆರೋಗ್ಯಕೇಂದ್ರಗಳಿಗೆ ಉಪಕರಣ ಖರೀದಿಗೆ ಅನುಮೋದನೆ*
· 2024-25ನೇ ಸಾಲಿನಲ್ಲಿ ಕಾರ್ಯಕ್ರಮಗಳಡಿ 15 ವಿವಿಧ ಹಣಕಾಸು ಆಯೋಗದ ಅನುದಾನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರೋಗ ಪತ್ತೆ ಮೂಲ ಸೌಕರ್ಯಗಳನ್ನು ಒದಗಿಸಲು ರೂ. 145.99 ಕೋಟಿಗಳಲ್ಲಿ ಉಪಕರಣಗಳನ್ನು ಖರೀದಿಸಲು ಹಾಗೂ ರೂ. 84.88 ಕೋಟಿಗಳ ಅಂದಾಜು ಮೊತ್ತದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಆರೋಗ್ಯ ಕ್ಷೇಮ ಕೇಂದ್ರ – ನಮ್ಮ ಕ್ಲಿನಿಕ್ ಗಳಲ್ಲಿನ ಪ್ರಯೋಗಾಲಯಗಳನ್ನು ಮತ್ತು ಆರೋಗ್ಯ ಸೇವೆಗಳನ್ನು ಬಲಪಡಿಸಲು ಉಪಕರಣಗಳನ್ನು ಖರೀದಿಸಲು ಹಾಗೂ 5 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಮತ್ತು ರೂ. 72.96 ಕೋಟಿಗಳ ಅಂದಾಜು ಮೊತ್ತದಲ್ಲಿ ನಮ್ಮ ಕ್ಲಿನಿಕ್ಗಳಿಗೆ ಅಗತ್ಯವಿರುವ ಔಷಧಿ ಮತ್ತು ರಾಸಾಯನಿಕಗಳನ್ನು PM- ABHIM ಅನುದಾನದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
· PM- ABHIM ಯೋಜನೆಯಡಿಯಲ್ಲಿ ಚಿಕ್ಕಬಳ್ಳಾಪುರದ CIMS , ಇಲ್ಲಿಗೆ ಅನುಮೋದನೆಯಾಗಿರುವ 50 ಹಾಸಿಗೆ ತೀವ್ರ ನಿಗಾ ಆರೈಕೆ ಘಟಕವನ್ನು ಜಿಲ್ಲೆಯ ಚಿಂತಾಮಣಿ ತಾಲ್ಲೂಕಿಗೆ ಸ್ಥಳಾಂತರಿಸಿ 16.63 ಕೋಟಿ ವೆಚ್ಚಲದಲಿ ನಿರ್ಮಿಸಲು ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ.
Pm – ABHIM ಯೋಜನೆಯಡಿಯಲ್ಲಿ 108.36 ಕೋಟಿ ರೂ ವೆಚ್ಚದಲ್ಲಿ ಒಟ್ಟು 254 ನಗರ ಆರೋಗ್ಯ ಕ್ಷೇಮಕೇಂದ್ರ – ನಮ್ಮ ಕ್ಲಿನಿಕ್ ಗಳನ್ನು ಉಪಕರಣಗಳೊಂದಿಗೆ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಬಡವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯ
ರಾಯಚೂರು ಜಿಲ್ಲೆ , ತಾಲ್ಲೂಕಿನ ಯರಮರಸ್ ಗ್ರಾಮದಲ್ಲಿ 14 ಗುಂಟೆ ಗೋಮಾಳ ಜಮೀನನ್ನು ಬಡವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯವನ್ನು ನಿರ್ಮಿಸಲು ಕರ್ನಾಟಕ ಪ್ರದೇಶ ಕುರುಬರ ಸಂಘ, ಬೆಂಗಳೂರು ಇವರಿಗೆ ಮಂಜೂರು ಮಾಡಲಾಗಿದೆ.
ಸಕ್ಕರೆ ಕಾರ್ಖಾನೆಗಳ ಬಳಿ ಡಿಜಿಟಲ್ ವೇಬ್ರಿಡ್ಜ್
· ಕಬ್ಬು ಬೆಳೆಗಾರರ ಹಿತ ಕಾಯಲು ಎಲ್ಲಾ ಸಕ್ಕರೆ ಕಾರ್ಖಾನೆಗಳ ಬಳಿ ಡಿಜಿಟಲ್ ವೇಬ್ರಿಡ್ಜ್ ಗಳನ್ನು ಸ್ಥಾಪಿಸಲು ಮೊದಲ ಹಂತದಲ್ಲಿ ರಾಜ್ಯದ 13 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಳು ಗುರುತಿಸಿದ 15 ಸ್ಥಳಗಳಲ್ಲಿ 11.01 ಕೋಟಿ ರೂ.ಗಳಲ್ಲಿ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.
ಸೇತುವೆ ನಿರ್ಮಾಣ
· ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕು ಕಪ್ಪಡಿ ಗ್ರಾಮದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣವನ್ನು 25 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದೆ.
500ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತನೆ
· Asian Development Bank ನ 2500 ಕೋಟಿ ಗಳ ಬಾಹ್ಯ ನಿಧಿ ಸಹಯೋಗದೊಂದಿಗೆ ಜುಲೈ 2025 ರಿಂದ ಜೂನ್ 2029 ರವರೆಗೆ ಅಸ್ತಿತ್ವದಲ್ಲಿರುವ 500 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸುವ ಉಪಕ್ರಮವನ್ನು ಜಾರಿಗೊಳಿಸಲು ಅನುಮೋದನೆ ನೀಡಲಾಗಿದೆ.
· ಕೇಂದ್ರ ಪ್ರವಾಸೋದ್ಯಮದ ‘ಸ್ವದೇಶ್ ದರ್ಶನ್ 2.0’ ಯೋಜನೆಯಡಿ ಮೈಸೂರಿನಲ್ಲಿ Ecological Experience Zone ನ್ನು 18.47 ಕೋಟಿ ಮೊತ್ತದಲ್ಲಿ ಹಾಗೂ ಹಂಪಿಯಲ್ಲಿ Travellers Nook ನ್ನು 25.63 ಕೋಟಿ ರೂ. ಮೊತ್ತದಲ್ಲಿ ಅಭಿವೃದ್ಧಿಪಡಿಸುವ ಸಂಬಂಧ ಟೆಂಡರ್ ಕರೆಯಲು ಕರ್ನಾಟಕ ಪ್ರವಾಸೋದ್ಯಮ ಮೂಲ ಸೌಕರ್ಯ ನಿಗಮದ ಮೂಲಕ ಕರೆಯಲು ಸಚಿವ ಸಂಪುಟ ಅನುಮೋದನೆ ನೀಡಿದೆ.
· ಮೈಸೂರು ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ಕಾರ್ಯಾಚರಣೆ , ನಿರ್ವಹಣೆಗೆ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯಿಂದ ಟೆಂಡರ್ ಮೂಲಕ ಹೋಟೆಲ್ ಆಪರೇಟರ್ನ್ನು ಆಯ್ಕೆ ಮಾಡಲು ಅನುಮೋದನೆ ನೀಡಲಾಗಿದೆ. ಪಂಚತಾರಾ ಹೋಟೆಲ್ ಗಳ ಸಮರ್ಪಕ ನಿರ್ವಹಣೆಯ ಸಲುವಾಗಿ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ಕಟ್ಟಡದ ಪುನರ್ ನಿರ್ಮಾಣ,ನವೀಕರಣ,ನಿವರ್ಹಣೆ ಗಾಗಿ ಖಾಸಗಿಯವರಿಂದ ಟೆಂಡರ್ ಕರೆಯಲಾಗುವುದು. ಖಾಸಗಿ ನಿರ್ವಹಣೆಯ ಮೂಲಕ ಉತ್ತಮ ಲಾಭ ಹಾಗೂ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದರು.
ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ರೈಲು ಬೋಗಿ ಖರೀದಿ
· ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ರೈಲು ಬೋಗಿಗಳನ್ನು 4300 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ (ರೈಲ್ವೆ ಮಂತ್ರಾಲಯ) ಅನುದಾನದಿಂದ (Equity ಮಾದರಿ 50:50 ಅನುಪಾತದಲ್ಲಿ) ಖರೀದಿಸಲು ಅನುಮೋದನೆ ನೀಡಲಾಗಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ತನಿಖೆಗೆ ಅನುಮತಿ ನೀಡಲು ರಾಜ್ಯಪಾಲರಿಗೆ ಶಿಫಾರಸು
ಟಿ.ಜೆ.ಅಬ್ರಹಾಂ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಾಗೂ ಅವರ ಕುಟುಂಬದ ವಿರುದ್ಧ ನೀಡಲಾದ ಭ್ರಷ್ಟಾಚಾರದ ದೂರಿನಲ್ಲಿ ಗಂಭೀರವಾದ 16 ಆರೋಪಗಳನ್ನು ಮಾಡಲಾಗಿದೆ. ಆರೋಪಗಳನ್ನು ಮಾಡಿ ತನಿಖೆ ಮಾಡಿಸುವಂತೆ ರಾಜ್ಯಪಾಲರಿಗೆ ದೂರು ನೀಡಿದ್ದರು. ರಾಜ್ಯಪಾಲರು ತನಿಖೆ ಮಾಡಲು ಅನುಮತಿಯನ್ನು ನಿರಾಕರಿಸಿದ್ದು, ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸುದೀರ್ಘವಾಗಿ ಚರ್ಚಿಸಿದ ಸಚಿವ ಸಂಪುಟವು ದಿ: 23-24/6/2021 ರ ನಿರ್ಣಯವನ್ನು ಹಿಂಪಡೆದು ಪುನರ್ ಪರಿಶೀಲಿಸಿ ತನಿಖೆಗೆ ಪೂರ್ವಾನುಮತಿ ನೀಡಬೇಕೆಂದು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲು ನಿರ್ಣಯಿಸಿದೆ.