ಬೆಂಗಳೂರು: ಭಾರತದಲ್ಲಿ ಡಿಮೆನ್ಷಿಯಾ(ಬುದ್ಧಿಮಾಂದ್ಯತೆ) ಆರೈಕೆಯಲ್ಲಿರುವ ಜ್ಞಾನ ಹಂಚಿಕೆ, ಸಹಯೋಗ ಮತ್ತು ಡಿಮೆನ್ಷಿಯಾ ಆರೈಕೆಯನ್ನು ಸುಧಾರಿಸಲು ಹೀಗೆಲ್ಲ ಕೆಲಸ ಕಾರ್ಯಗಳನ್ನು ಮಾಡಬಹುದು ಎಂಬುದರ ಬಗ್ಗೆ ಈಗಾಗಲೇ ಈ ರೋಗವು ಬೇರೆ ದೇಶಗಳಲ್ಲಿ ಹರಡುತ್ತಿದ್ದು, ನಮ್ಮ ದೇಶದಲ್ಲಿ ಬಂದರೆ ಹೇಗೆ ತಡೆಗಟ್ಟಬಹುದು, ಅದಕ್ಕೆ ರಾಜ್ಯ ಸರ್ಕಾರ ಯಾವ ರೀತಿ ಸಿದ್ಧತೆ ನಡೆಸಿಕೊಂಡಿದೆ ಎಂದು ಆರೋಗ್ಯ ಹಾಗು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಡಿಮೆನ್ಷಿಯಾ ಇಂಡಿಯಾ ಅಲಯನ್ಸ್ (ಡಿಐಎ) ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ `ಅಂತಾರಾಷ್ಟ್ರೀಯ ಡಿಮೆನ್ಷಿಯಾ ಕೇರ್ ಕಾನ್ಫರೆನ್ಸ್ (DEMCON’24)ಗ ಚಾಲನೆ ನೀಡಿ ಮಾತನಾಡಿದರು, “ನಮ್ಮ ಸರ್ಕಾರವು ಡಿಮೆನ್ಷಿಯಾವನ್ನು ಸಾರ್ವಜನಿಕ ಆರೋಗ್ಯದ ಆದ್ಯತೆ ಎಂದು ಪ್ರಕಟಿಸಿದೆ ಮತ್ತು ನಾವು ಡಿಐಎ ಮತ್ತು ನಿಮ್ಹಾನ್ಸ್ ನ ಸಹಯೋಗದಲ್ಲಿ ಕೆಲಸ ಮಾಡುತ್ತಿದ್ದು, ಈ ಸಮ್ಮೇಳನವು ಡಿಮೆನ್ಷಿಯಾ ಆರೈಕೆ ಕುರಿತು ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಲಲು ವೇದಿಕೆ ಒದಗಿಸುತ್ತದೆ ಎಂಬ ವಿಶ್ವಾಸ ನನ್ನದು” ಎಂದರು
ಡಿಮೆನ್ಷಿಯಾ ಎಂಬುದು ಬರೀ ಕಾಯಿಲೆಯಲ್ಲ. ಅದು ಇಡೀ ಕುಟುಂಬದ ಮೇಲೆ ಪರಿಣಾಮ ಬೀರುವ ಸಂಕೀರ್ಣ ವಿಷಯ. ವೃದ್ಧರ ಸಂಖ್ಯೆ ಹೆಚ್ಚಿರುವ ಹಾಗೂ ಆರೋಗ್ಯ ಸೌಲಭ್ಯಗಳ ಕೊರತೆ ಇರುವ ಭಾರತದಂಥ ದೇಶಗಳಿಗೆ ಇದೊಂದು ದೊಡ್ಡ ಸವಾಲು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಭವಿಷ್ಯದ ಸುಧಾರಿತ ವೈದ್ಯಕೀಯ ಆವಿಷ್ಕಾರಗಳ ಮೂಲಕ ಡಿಮೆನ್ಷಿಯಾ ಪೀಡಿತ ವ್ಯಕ್ತಿಗಳು ಹಾಗೂ ಅವರ ಕುಟುಂಬಗಳ ತುರ್ತು ಅಗತ್ಯಗಳಿಗೆ ಸ್ಪಂದಿಸುವ ಆಶಯ ವ್ಯಕ್ತಪಡಿಸಿದರು.
ಡಿಮೆನ್ಷಿಯಾ ಇಂಡಿಯಾ ಅಲಯನ್ಸ್ ಅಧ್ಯಕ್ಷೆ ಡಾ.ರಾಧಾ ಎಸ್. ಮೂರ್ತಿ ಮಾತನಾಡಿ, “ನಮ್ಮ ಸಮ್ಮೇಳನದ ವಿಷಯವು `ರೀಚಿಂಗ್ ದಿ ಅನ್ ರೀಚ್ಡ್’ ಎಂದಿದ್ದು ಪ್ರಸ್ತುತ ಭಾರತದಲ್ಲಿ ಸುಮಾರು 88 ಲಕ್ಷ ಜನರು ಡಿಮೆನ್ಷಿಯಾದಿಂದ ಬಳಲುತ್ತಿದ್ದು 60 ವರ್ಷ ಮೀರಿದವರಲ್ಲಿ ಇದರ ಪ್ರಮಾಣ ಶೇ.7.4ರಷ್ಟಿದೆ. ಭಾರತದಲ್ಲಿ ಡಿಮೆನ್ಷಿಯಾಗೆ ಚಿಕಿತ್ಸೆ ಅಥವಾ ಸೇವೆಯ ಅಂತರ ಬಹಳ ದೊಡ್ದದಾಗಿದ್ದು ಕೇವಲ ಡಿಮೆನ್ಷಿಯಾ ಉಳ್ಳ 10ರಲ್ಲಿ ಒಬ್ಬರು ಮಾತ್ರ ರೋಗಪರೀಕ್ಷೆ, ಚಿಕಿತ್ಸೆ ಅಥವಾ ಆರೈಕೆ ಪಡೆಯುತ್ತಾರೆ. ಶೇ.45ರಷ್ಟು ಡಿಮೆನ್ಷಿಯಾ ಪ್ರಕರಣಗಳನ್ನು ತಡಮಾಡಬಹುದು ಅಥವಾ ನಿಯಂತ್ರಿಸಬಹುದು ಎಂದು ತಜ್ಞರು ನಂಬುತ್ತಾರೆ. “ಈ ಸಮ್ಮೇಳನದ ಮೂಲಕ ಡಿಐಎ ವಿಶ್ವದಾದ್ಯಂತ ಬಳಸುತ್ತಿರುವ ಅತ್ಯುತ್ತಮ ರೂಢಿಗಳ ಕಲಿಕೆ ಮತ್ತು ಹಂಚಿಕೆಗೆ ವೇದಿಕೆ ಒದಗಿಸುವ ಭರವಸೆ ಹೊಂದಿದೆ” ಎಂದರು.
ಗೌರವ ಅತಿಥಿಯಾಗಿ ಮಾನವ ವರ್ತನೆ ಮತ್ತು ಪೂರಕ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ರಾಜೇಂದರ್ ಕೆ. ಧಾಮಿಜಾ ಅವರು ಮಾತನಾಡಿ, ಡಿಮೆನ್ಷಿಯಾ ಕಾಯಿಲೆಯು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಅದರಲ್ಲೂ ಮುಖ್ಯವಾಗಿ ಭಾರತದಲ್ಲಿ ಕಂಡುಬರುತ್ತಿದೆ. ವೃದ್ಧರ ಪ್ರಮಾಣದಲ್ಲಿ ಹೆಚ್ಚಳ ಹಾಗೂ ಮಧುಮೇಹ, ಅತಿಯಾದ ರಕ್ತದೊತ್ತಡ ಮತ್ತು ಜೀವನಶೈಲಿ ಸಂಬಂಧಿ ಕಾಯಿಲೆಗಳಿಂದಾಗಿ ಮುಂಬರುವ ದಿನಗಳಲ್ಲಿ ಡಿಮೆನ್ಷಿಯಾ ಪೀಡಿತರ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದರು.
ಡಿಮೆನ್ಷಿಯಾವನ್ನು ನಿರ್ವಹಿಸಲು ತ್ವರಿತ ರೋಗ ಪತ್ತೆ ಮತ್ತು ಚಿಕಿತ್ಸೆ ಮಹತ್ವವಾದುದು. ಬಹುತೇಕ ಡಿಮೆನ್ಷಿಯಾ ಪ್ರಕರಣಗಳು ಪತ್ತೆಯಾಗದೇ ಉಳಿದುಬಿಡುತ್ತವೆ ಎಂದು ತಿಳಿಸಿದ ಅವರು, ಈ ಬಗ್ಗೆ ಜನಜಾಗೃತಿ ಮೂಡಿಸುವ ಹಾಗೂ ಚಿಕಿತ್ಸೆ ಒದಗಿಸುವ ಅಗತ್ಯವನ್ನು ಒತ್ತಿಹೇಳಿದರು. ಡಿಮೆನ್ಷಿಯಾ ಪೀಡಿತರ ಸಮಸ್ಯೆಗಳಿಗೆ ಸ್ಪಂದಿಸಲು ಪೂರಕವಾಗುವ ಪರಿಣಾಮಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಮತ್ತು ವೈದ್ಯಕೀಯ ಸಂಸ್ಥೆಗಳು ಜೊತೆಯಾಗಿ ಕಾರ್ಯನಿರ್ವಹಿಸಬೇಕು. ಸಂಶೋಧನೆಗಳಿಗೆ ಹೂಡಿಕೆ, ಚಿಕಿತ್ಸಾ ಸೌಲಭ್ಯಗಳ ಲಭ್ಯತೆ, ಜನಜಾಗೃತಿ – ಇವು ಈ ಕಾರ್ಯಯೋಜನೆಯಲ್ಲಿ ಸೇರಿವೆ ಎಂದ ಅವರು, ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಡಿಮೆನ್ಷಿಯಾ ಪೀಡಿತ ವ್ಯಕ್ತಿಗಳ, ಕುಟುಂಬಗಳ ಹಾಗೂ ಸಮಾಜದ ಹೊರೆಯನ್ನು ಕಡಿಮೆ ಮಾಡುವ ಆಶಾಭಾವವನ್ನು ಅವರು ವ್ಯಕ್ತಪಡಿಸಿದರು.
2 ದಿನಗಳ ಕಾಲ ನಡೆದ ಸಮ್ಮೇಳನದ ಅಧಿವೇಶನದಲ್ಲಿ ಜಾಗತಿಕ ಪರಿಣಿತರು, ಸಂಶೋಧಕರು, ಆರೋಗ್ಯಸೇವಾ ವೃತ್ತಿಪರರು ಮತ್ತು ಆರೈಕೆ ನೀಡುವವರು ಡಿಮೆನ್ಷಿಯಾದ ಪ್ರಮುಖ ಸಮಸ್ಯೆ ಕುರಿತು ವಿಚಾರ ವಿನಿಮಯಕ್ಕೆ ಒಗ್ಗೂಡಿಸಿತು. ಜ್ಞಾನ ಹಂಚಿಕೆ, ಸಹಯೋಗ ಮತ್ತು ಡಿಮೆನ್ಷಿಯಾ ಆರೈಕೆಯನ್ನು ಸುಧಾರಿಸಲು ವೇದಿಕೆ ಒದಗಿಸಿತು
ಈ ಸಮ್ಮೇಳನವನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಿಮ್ಹಾನ್ಸ್, ಸೆಂಟರ್ ಫಾರ್ ಬ್ರೈನ್ ರೀಸರ್ಚ್, ಕಾಮನ್ ವೆಲ್ತ್ ಅಸೋಸಿಯೇಷನ್ ಫಾರ್ ದಿ ಏಜಿಂಗ್(ಕಾಮನ್ ಏಜ್) ಮತ್ತು ರಾಮಯ್ಯ ಹಾಸ್ಪಿಟಲ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದು ವಿಶ್ವದ 900ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಸುಧಾರಿತ ಡಿಮೆನ್ಷಿಯಾ ಚಿಕಿತ್ಸೆ ಬಗ್ಗೆ ಅರಿವು ಮೂಡಿಸಲು ಶ್ರಮಿಸುತ್ತಿರುವ ಡಿಐಎ ಕಾರ್ಯ ಪ್ರಶಂಸನೀಯವಾಗಿದೆ. ಹೂಡಿಕೆದಾರರನ್ನು ಒಗ್ಗೂಡಿಸುವ ಹಾಗೂ ಸಮಗ್ರ ತಂತ್ರಗಳನ್ನು ರೂಪಿಸುವ ಸಂಸ್ಥೆಯ ಉಪಕ್ರಮ ಶ್ಲಾಘನೀಯ. ಡಿಮೆನ್ಷಿಯಾವನ್ನು ಸಾರ್ವಜನಿಕ ಆರೋಗ್ಯ ಸಮಸ್ಯೆ ಎಂದು ಪರಿಗಣಿಸಿ, ಇಂಥ ಪ್ರಯತ್ನಗಳನ್ನು ಬೆಂಬಲಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು. ಎಲ್ಲರೂ ಒಟ್ಟಾಗಿ ಕಾರ್ಯ ನಿರ್ವಹಿಸುವ ಮೂಲಕ ಡಿಮೆನ್ಷಿಯಾ ಪೀಡಿತರ ಬಾಳಿನಲ್ಲಿ ಮಹತ್ವದ ಬದಲಾವಣೆ ತರುವ ಆಶಯವನ್ನು ವ್ಯಕ್ತಪಡಿಸಿದರು.
ಡಿಐಎ ಆರೈಕೆ ಮಾನದಂಡಗಳ ಕುರಿತು ಶಿಪಾರಸ್ಸು!
ಈ ಸಮ್ಮೇಳನವು ಕರ್ನಾಟಕ ಸರ್ಕಾರಕ್ಕೆ ಡಿಮೆನ್ಷಿಯಾ ಇಂಡಿಯಾ ಅಲಯನ್ಸ್ (ಡಿಐಎ) ಡಿಮೆನ್ಷಿಯಾ ಆರೈಕೆ ಮಾನದಂಡಗಳ ಕುರಿತಾದ ಶಿಫಾರಸುಗಳನ್ನು ಸಲ್ಲಿಸುವುದರೊಂದಿಗೆ ಪ್ರಾರಂಭವಾಯಿತು. ಈ ಶಿಫಾರಸುಗಳನ್ನು ಹಲವಾರು ಪಾಲುದಾರರ ವಿಸ್ತಾರ ಸಲಹೆಗಳ ಮೂಲಕ ರೂಪಿಸಲಾಗಿದ್ದು ಪರಿಣಾಮಕಾರಿ ನೀತಿಗಳನ್ನು ರೂಪಿಸಲು ಸಹಯೋಗದ ಪ್ರಯತ್ನಗಳ ಪ್ರಾಮುಖ್ಯತೆಗೆ ಒತ್ತು ನೀಡುತ್ತದೆ.
ಇಂಟರ್ನ್ಯಾಷನಲ್ ಫೆಡರೇಷನ್ ಆಫ್ ಏಜಿಂಗ್ ನ ಗ್ರೇಮ್ ಪ್ರಿಯರ್ ಆಶಯ ಭಾಷಣದ ಮೂಲಕ ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿರುವ ಎಲ್ಲರನ್ನೂ ಒಳಗೊಳ್ಳುವ ಮತ್ತು ಸಮಗ್ರ ಡಿಮೆನ್ಷಿಯಾ ಆರೈಕೆ ನೀತಿಗಳು ಮತ್ತು ರೂಢಿಗಳ ಅಗತ್ಯವನ್ನು ಎತ್ತಿ ಹೇಳಿದರು.
ಚರ್ಚೆಗಳಿಗೆ ಜಾಗತಿಕ ದೃಷ್ಟಿಕೋನ ಸೇರ್ಪಡೆ ಮಾಡಿದ ಮೊದಲ ದಿನದ ಚರ್ಚೆಗಳಲ್ಲಿ ಅಂತಾರಾಷ್ಟ್ರೀಯ ತಜ್ಞರಾದ ಕಾಮನ್ ಏಜ್ ಅಧ್ಯಕ್ಷರಾದ ಮನ್ಸೂರ್ ದಲಾಲ್, ಬೇಕ್ರೆಸ್ಟ್ ಸೀನಿಯರ್ಸ್ ಕೇರ್ ಅಧ್ಯಕ್ಷ ಮತ್ತು ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಡಾ.ವಿಲಿಯಂ ರೀಚ್ಮನ್, ಆಸ್ಟ್ರೇಲಿಯಾದ ಎಡಿತ್ ಕೊವನ್ ಯೂನಿವರ್ಸಿಟಿಯ ಏಜಿಂಗ್ ಅಂಡ್ ಆಲ್ಜೈಮರ್ಸ್ ಡಿಸೀಸ್ ಮುಖ್ಯಸ್ಥ ಡಾ.ರಾಲ್ಫ್ ಮಾರ್ಟಿನ್ಸ್ ಮತ್ತು ಹಲವಾರು ಇತರೆ ತಜ್ಞರು ಡಿಮೆನ್ಷಿಯಾ ಆರೈಕೆಯ ಜಾಗತಿಕ ಪ್ರವೃತ್ತಿಗಳು ಮತ್ತು ಹೊಚ್ಚಹೊಸ ಸಂಶೋಧನಾ ಫಲಿತಾಂಶಗಳನ್ನು ಹಂಚಿಕೊಂಡರು.
ಡಿಮೆನ್ಷಿಯಾ ರೋಗದ ಬಗ್ಗೆ ಆಳ ಅಗಲ ತಿಳಿಯುವ ಅವಶ್ಯಕತೆ ಇದೆ
ಬಯೋಮಾರ್ಕರ್ಸ್, ಇಮೇಜಿಂಗ್ ಟೆಕ್ನಿಕ್ಸ್ ಮತ್ತು ಜೆನೆಟಿಕ್ ಸ್ಟಡೀಸ್ ಗಳಲ್ಲಿ ಆಗಿರುವ ಸುಧಾರಣೆಗಳನ್ನು ಕುರಿತು ಚರ್ಚಿಸಿದರು, ಅವೆಲ್ಲವೂ ಪ್ರಾರಂಭಿಕ ರೋಗಪರೀಕ್ಷೆ ಮತ್ತು ಸಂಭವನೀಯ ಚಿಕಿತ್ಸೆಯ ಮಧ್ಯಪ್ರವೇಶಗಳ ಭರವಸೆ ಒಳಗೊಂಡಿದ್ದವು. ಪ್ರತಿನಿಧಿಗಳಿಗೆ ಆವಿಷ್ಕಾರಕ ಸಂಶೋಧನೆ, ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (ನಿಮ್ಹಾನ್ಸ್)ನಲ್ಲಿನ ಮತ್ತು ಸೆಂಟರ್ ಫಾರ್ ಬ್ರೈನ್ ರೀಸರ್ಚ್ ತಜ್ಞರ ಹೊಚ್ಚಹೊಸ ಒಳನೋಟಗಳು ಮತ್ತು ಸಂಶೋಧನೆಗಳನ್ನು ಅರಿಯುವ ಅವಕಾಶ ದೊರೆಯಿತು. ಡಿಮೆನ್ಷಿಯಾ ಆರೈಕೆಯಲ್ಲಿ ಸಾಮರ್ಥ್ಯವೃದ್ಧಿ, ಡಿಮೆನ್ಷಿಯಾ ಕೇರ್ ಅಡ್ವೊಕಸಿ ಮತ್ತು ಮುಂದಿನ ತಲೆಮಾರಿನ ಡಿಮೆನ್ಷಿಯಾ ಕೇರ್ ಚಾಂಪಿಯನ್ಸ್ ರೂಪಿಸುವ ತಜ್ಞರ ಚರ್ಚೆ ಮತ್ತು ಪ್ರಾಯೋಗಿಕ ಕಾರ್ಯಾಗಾರಗಳು ನಡೆದವು. ಕಲಿಕೆ ಮತ್ತು ಸಹಯೋಗದ ಈ ಸಮೃದ್ಧವಾದ ಜ್ಞಾನ ವಿನಿಮಯವು ಡಿಮೆನ್ಷಿಯಾ ಆರೈಕೆ ಮಾನದಂಡಗಳು ಮತ್ತು ರೂಢಿಗಳನ್ನು ಹೆಚ್ಚಿಸುವ ಗುರಿ ಹೊಂದಿತ್ತು.
2 ದಿನಗಳ ಕಾಲ ನಡೆದ ಸಮ್ಮೇಳನದ ಅಧಿವೇಶನದಲ್ಲಿ ಜಾಗತಿಕ ಪರಿಣಿತರು, ಸಂಶೋಧಕರು, ಆರೋಗ್ಯಸೇವಾ ವೃತ್ತಿಪರರು ಮತ್ತು ಆರೈಕೆ ನೀಡುವವರು ಡಿಮೆನ್ಷಿಯಾದ ಪ್ರಮುಖ ಸಮಸ್ಯೆ ಕುರಿತು ವಿಚಾರ ವಿನಿಮಯಕ್ಕೆ ಒಗ್ಗೂಡಿಸಿತು. ಜ್ಞಾನ ಹಂಚಿಕೆ, ಸಹಯೋಗ ಮತ್ತು ಡಿಮೆನ್ಷಿಯಾ ಆರೈಕೆಯನ್ನು ಸುಧಾರಿಸಲು ವೇದಿಕೆ ಒದಗಿಸಿತು.