ಬೆಂಗಳೂರು: ಆಮ್ ಆದ್ಮಿ ಪಕ್ಷದ ಯುವ ಘಟಕದಿಂದ ರಾಜ್ಯಾಧ್ಯಕ್ಷ ಲೋಹಿತ್ ಹನುಮಾಪುರ ನೇತೃತ್ವದಲ್ಲಿ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಮಕರ ಸಂಕ್ರಾಂತಿ ಹಬ್ಬವನ್ನು ಆರೋಗ್ಯ ಸಂಕ್ರಮಣ ಹೆಸರಿನಲ್ಲಿ ರೋಗಿಗಳ ಆರೈಕೆ ಮಾಡಲು ಬಂದಿರುವವರೊಂದಿಗೆ ಆಚರಿಸಲಾಯಿತು. ಸಿಹಿ ಪೊಂಗಲ್ ಹಾಗೂ ಹಣ್ಣುಗಳನ್ನು ವಿತರಿಸುವ ಮೂಲಕ ಸಾರ್ಥಕವಾಗಿ ಪಕ್ಷದ ಯುವ ಘಟಕದ ಸದಸ್ಯರು ಸಂಭ್ರಮದಿಂದ ಸಂಕ್ರಾಂತಿಯನ್ನು ಆಚರಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ” ಯುವ ಘಟಕದ ಸದಸ್ಯರು ತಮ್ಮ ಮನೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸುವ ಬದಲು ಆಸ್ಪತ್ರೆಯಲ್ಲಿ ರೋಗಿಗಳೊಂದಿಗೆ ಹಬ್ಬವನ್ನು ಆಚರಿಸುತ್ತಿರುವುದು ನಿಜಕ್ಕೂ ಸಾರ್ಥಕ ಕಾರ್ಯ ಹಾಗೂ ಇವುಗಳು ಇನ್ನಿತರ ರಾಜಕೀಯ ಪಕ್ಷಗಳಿಗೂ ಸಹ ಮಾದರಿಯಾಗಬೇಕು ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಮಾತನಾಡಿ ” ಇಂದು ನಾವುಗಳೆಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಹಾಗೂ ಅವರ ಸಂಬಂಧಿಕರೊಂದಿಗೆ ಹಬ್ಬವನ್ನು ಆಚರಿಸುತ್ತಿರುವುದು ನಿಜಕ್ಕೂ ಸಂತಸ ತಂದಿದೆ ” ಎಂದು ತಿಳಿಸಿದರು.
ಯುವ ಘಟಕದ ಅಧ್ಯಕ್ಷ ಲೋಹಿತ್ ಹನುಮಾಪುರ ಮಾತನಾಡಿ ” ಪ್ರತಿ ವರ್ಷವೂ ನಾವು ಇದೇ ರೀತಿಯ ಅನೇಕ ಸಾರ್ಥಕ ಕಾರ್ಯಗಳನ್ನು ಯುವ ಘಟಕದಿಂದ ನಡೆಸಿಕೊಂಡು ಬರುತ್ತಿದ್ದೇವೆ. ಮುಂಬರುವ ದಿವಸಗಳಲ್ಲಿ ರಾಜ್ಯದ ಯುವಜನತೆಗೆ ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತೇವೆ .ಎಲ್ಲರಿಗೂ ಉತ್ತಮ ಆರೋಗ್ಯ ಸಿಗಲೆಂದು ಈ ಮೂಲಕ ಆಶಿಸುತ್ತಿದ್ದೇನೆ ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಡಾ. ಸತೀಶ್ ಕುಮಾರ್, ಅನಿಲ್ ನಾಚಪ್ಪ ವಿಶ್ವನಾಥ್ , ಯುವ ಘಟಕದ ಪದಾಧಿಕಾರಿಗಳಾದತೇಜಸ್ವಿನಿ , ನಾಗರತ್ನ, , ವಿಜಯ್ , ಮಂಜುನಾಥ್,ಕೀರ್ತಿ, ದೃವ, ಸೋಮು , ಹರೀಶ್, ರಾಕೇಶ್ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.