ಬೆಂಗಳೂರು : ಅಪಾರ್ಟ್ಮೆಂಟ್ಗಳಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯ ನೀರಿನ ಸಂಸ್ಕರಣೆಯ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಲು ಐಐಎಸ್ಸಿ ವಿಜ್ಞಾನಿಗಳು ಅಭಿವೃದ್ದಿಪಡಿಸಿರುವ ಝೀರೋ ಬ್ಯಾಕ್ಟಿರಿಯಾ ತಂತ್ರಜ್ಞಾನದ ಅಳವಡಿಕೆಯ ನಿಟ್ಟಿನಲ್ಲಿ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಭಾರತೀಯ ವಿಜ್ಞಾನ ಮಂದಿರದಲ್ಲಿ ಇಂಡೋ ಜರ್ಮನ್ ಸೈನ್ಸ್ ಅಂಡ್ ಟೆಕ್ನಾಲಜಿ ಸೆಂಟರ್ ನಿಂದ ಆಯೋಜಿಸಲಾದ “ಸುಸ್ಥಿರ ಆವಾಸ ಸ್ಥಾನ” ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು. ಬೆಂಗಳೂರು ನಗರದ ಅಂತರ್ಜಲದ ಸಮರ್ಪಕ ಬಳಕೆಗೆ ಉತ್ತೇಜನ, ಅದರ ನಿಗಾವಣೆ ಹಾಗೂ ಅಂತರ್ಜಲದ ವೃದ್ದಿಗೆ ಸುಸ್ಥಿರ ಯೋಜನೆಗಳನ್ನು ರೂಪಿಸಲು, ಐಐಎಸ್ಸಿ, ಕೇಂದ್ರ ಅಂತರ್ಜಲ ಪ್ರಾಧಿಕಾರದ ಜೊತೆಗೂಡಿ ಬೆಂಗಳೂರು ಜಲಮಂಡಳಿ ಕಾರ್ಯಪಡೆಯನ್ನು ರಚಿಸಿದೆ. ಮೂಲಕ ಸಾಂಪ್ರಾಯಿಕ ಕೊಳವೆ ಬಾವಿಗಳ ಈ ಬಗ್ಗೆ ನಿಗಾ ವಹಿಸಲಾಗಿದೆ. ಅಂತರ್ಜಲ ದುರ್ಬಳಕೆ ತಡೆಗಟ್ಟಲು ಅತ್ಯಾಧುನಿಕ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಅಂತರ್ಜಲ ಮಟ್ಟದ ಬಗ್ಗೆ ಮಾಪನ ಮಾಡಲಾಗಿದ್ದು, ಬೇಸಿಗೆಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ಅಂತರ್ಜಲವನ್ನು ಸಂರಕ್ಷಿಸಿ ಸದ್ಬಳಕೆಗಾಗಿ ಸೂಕ್ತ ಕಾರ್ಯತಂತ್ರ ರೂಪಿಸಲಾಗಿದೆ. ಮುಂಬರುವ ದಿನಗಳಲ್ಲಿ ನೀರಿನ ಭದ್ರತೆ ಅತ್ಯಂತ ಅಗತ್ಯವಾಗಿದ್ದು, ಇದಕ್ಕಾಗಿ ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಅಗತ್ಯವಿದೆ ಎಂದರು.
*ಅಪಾರ್ಟ್ಮೆಂಟ್ಗಳಿಗೆ ಝೀರೋ ಬ್ಯಾಕ್ಟೀರಿಯಲ್ ತಂತ್ರಜ್ಞಾನ:*
ಬೆಂಗಳೂರು ನಗರದಲ್ಲಿರುವ ಅಪಾರ್ಟ್ಮೆಂಟ್ಗಳಿಂದ ಸಾಕಷ್ಟು ಪ್ರಮಾಣದಲ್ಲಿ ತ್ಯಾಜ್ಯ ನೀರು ಉತ್ಪತ್ತಿಯಾಗುತ್ತದೆ. ಎನ್ಜಿಟಿ ಆದೇಶದ ಹಿನ್ನಲೆಯಲ್ಲಿ ಬಹುತೇಕ ಅಪಾರ್ಟ್ಮೆಂಟ್ಗಳು ಎಸ್ಟಿಪಿಗಳನ್ನು ಅಳವಡಿಸಿಕೊಂಡಿವೆ. ಇವುಗಳಿಂದ ಉತ್ಪತ್ತಿಯಾಗುವ ಸಂಸ್ಕರಿಸಿದ ನೀರನ್ನು ಗಾರ್ಡನಿಂಗ್, ಸ್ವಚ್ಚತೆಗೆ ಬಳಸಿಕೊಳ್ಳುವುದರ ಜೊತೆಯಲ್ಲಿಯೇ ಹೆಚ್ಚುವರಿ ನೀರನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಈ ಸಂಸ್ಕರಿಸಿದ ನೀರಿನ ಗುಣಮಟ್ಟದ ಬಗ್ಗೆ ಕೆಲವು ಅನುಮಾನಗಳನ್ನ ಕ್ರೆಡೈ ಮೂಲಕ ಕಟ್ಟಡಗಳ ಡೆವಲಪರ್ಗಳು ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಅಪಾರ್ಟ್ಮೆಂಟ್ಗಳಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಿಸಲು ಇರುವ ತಂತ್ರಜ್ಞಾನವನ್ನು ಉನ್ನತಿಕರಿಸುವ ಬಗ್ಗೆ ಇಂದು ಚರ್ಚಿಸಲಾಯಿತು. ಐಐಎಸ್ಸಿ ವಿಜ್ಞಾನಿಗಳಿಂದ ಅಭಿವೃದ್ದಿಗೊಳಿಸಲಾಗಿರುವ ತಂತ್ರಜ್ಞಾನದ ಮೂಲಕ ಝೀರೋ ಬ್ಯಾಕ್ಟೀರಿಯಲ್ ನೀರನ್ನು ಉತ್ಪತ್ತಿಗೊಳಿಸಬಹುದಾಗಿದೆ. ಝಿರೋ ಬ್ಯಾಕ್ಟೀರಿಯಲ್ ನೀರಿನ ಗುಣಮಟ್ಟ, ಎರಡನೇ ಹಂತದ ಸಂಸ್ಕರಿಸಿದ ನೀರಿಗಿಂತಲೂ ಬಹಳಷ್ಟು ಉತ್ತಮವಾಗಿರತ್ತದೆ. ಹಾಗಾಗಿ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಅಪಾರ್ಟ್ಮೆಂಟ್ಗಳಿಗೆ ಝಿರೋ ಬ್ಯಾಕ್ಟೀರಿಯಲ್ ತ್ಯಾಜ್ಯ ನೀರಿನ ಸಂಸ್ಕರಣೆಯ ತಂತ್ರಜ್ಞಾನವನ್ನು ಅಳವಡಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದರು.
ಬೆಂಗಳೂರು ನಗರದಲ್ಲಿ ಬೇಸಿಗೆ ಸಮಯದಲ್ಲಿ ಕುಡಿಯುವ ನೀರು ಪೂರೈಸುವುದು ಸವಾಲಿನ ಕೆಲಸವಾಗಿದ್ದು, ಕಳೆದ ಕಳೆದ ವರ್ಷ 200 ದಿನಗಳ ಕಾಲ ಮಳೆಯಾಗಿರಲಿಲ್ಲ. ಇದೀಗ ಅಂತರ್ಜಲ ಕುಸಿಯುತ್ತಿದ್ದು, ಇದು ಜಾಗತಿಕ ಸಮಸ್ಯೆಯಾಗಿದೆ. ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಬೆಂಗಳೂರು ನಗರ ಜಾಗತಿಕ ಮಟ್ಟದಲ್ಲಿ ಅತ್ಯಾಧುನಿಕ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲಿದೆ ಎಂದು ಹೇಳಿದರು.
ವಿಜ್ಞಾನಿಗಳು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹಾಗೂ ತ್ಯಾಜ್ಯ ನೀರನ್ನು ಸಂಸ್ಕರಿಸಲು ಸೂಕ್ತ ಸಲಹೆಗಳ ಮೂಲಕ ನೆರವಾಗಬೇಕು. ನಗರದಲ್ಲಿ 1300 ಎಂ.ಎಲ್.ಡಿ ಸಂಸ್ಕರಿಸಿದ ನೀರು ದೊರೆಯುತ್ತಿದ್ದು, ಇದನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವ ಅಗತ್ಯವಿದೆ. ಬೆಂಗಳೂರಿನಲ್ಲಿ ಐಟಿ ಪಾರ್ಕ್ ಗಳ ಏರ್ ಕಂಡಿಷನ್ ವ್ಯವಸ್ಥೆಗೆ ಹೆಚ್ಚು ನೀರು ಬಳಕೆಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು 60 ಲಕ್ಷ ಲೀಟರ್ ಸಂಸ್ಕರಿಸಿದ ನೀರನ್ನು ಪೂರೈಸಲಾಗುತ್ತಿದೆ. ಜಲ ಮಂಡಳಿ ಎಲ್ಲಾ ಹಂತಗಳಲ್ಲೂ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ವ್ಯಾಪಕ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಭಾರತೀಯ ವಿಜ್ಞಾನ ಮಂದಿರದ ಪ್ರೊ.ಎಲ್.ಎನ್. ರಾವ್, ಜರ್ಮನಿ ವಿವಿ ಪ್ರಾಧ್ಯಾಪಕರಾದ ಪ್ರೊ. ಕ್ರಿಸ್ಟಿನಾ ಬೋಗ್ನೇರ್, ಐಐಎಸ್ಸಿ ಡೀನ್ ಪ್ರೊ. ಜಿ.ಕೆ. ಅನಂತ ಸುರೇಶ್, ಐಐಎಸ್ಸಿಯ ಸಿಎಸ್ಟಿ ಅಧ್ಯಕ್ಷರಾದ ಪ್ರೊ. ಮಾಧವಿ ಲತಾ, ಇಂಡೋ ಜರ್ಮನ್ ಸೈನ್ಸ್ ಅಂಡ್ ಟೆಕ್ನಾಲಜಿ ಸೆಂಟರ್ ನ ನಿರ್ದೇಶಕ ಆರ್. ಮದನ್ ಮತ್ತಿತರರು ಪಾಲ್ಗೊಂಡಿದ್ದರು.