ಬೆಂಗಳೂರು: ಆಧುನಿಕ ಯುಗದಲ್ಲಿ ಅಪರಾಧದ ಸ್ವರೂಪ ಬದಲಾಗುತ್ತಿದ್ದು ಇದರಿಂದ ಅಪಾಯ ಅಧಿಕವಾಗಿದೆ. ಸಾರ್ವಜನಿಕರು ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಖ್ಯಾತ ವಕೀಲ, ಮಾಜಿ ಎಜೆ ಅಶೋಕ ಹಾರನಹಳ್ಳಿ ಹೇಳಿದರು.
ಅಖಿಲ ಭಾರತ ಸಾರ್ವಜನಿಕ ಸಂಪರ್ಕ ಮಂಡಳಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೀಗಲ್ ಲೈಮ್ ಲೈಟ್ ಮಾಸಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದವರು, ಸೈಬರ್ ಅಪರಾಧಕ್ಕೆ ಯಾವುದೇ ಗಡಿ ಇಲ್ಲ, ವಿದೇಶದಲ್ಲಿ ಕುಳಿತು ಭಾರತದಲ್ಲಿರುವ ಬ್ಯಾಂಕ್ ಆಕೌಂಟ್ಗಳಿಂದ ಹಣ ಕದಿಯಬಹುದು. ಸೈಬರ್ ಖದೀಮರು ಜನರಿಗೆ ಹಣದ ಆಸೆ ಹುಟ್ಟಿಸಿ ಸಾರ್ವಜನಿಕರನ್ನು ಬಲೆಗೆ ಬೀಳಿಸುತ್ತಿದ್ದಾರೆ. ಇದನ್ನು ತಡೆಯಲು ಜನರಲ್ಲಿ ಅರಿವು ಮೂಡಿಸಬೇಕು ಎಂದರು.
ಅಪರಾಧದ ಸ್ವರೂಪ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ವಕೀಲರು ಕೂಡ ಈ ಬಗ್ಗೆ ಆಳವಾದ ಅಧ್ಯಯನ ನಡೆಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸಿಕೊಡಬೇಕು. ಸಮಾಜದಲ್ಲಿ ಏನೇ ನಡೆದರೂ ಮೊದಲು ಪ್ರಶ್ನಿಸುವವರು ವಕೀಲರು. ಏಕೆಂದರೆ ವಕೀಲರು ಕಾನೂನು ಓದಿಕೊಂಡಿರುವುದರಿಂದ ಅವರು ಪ್ರಶ್ನಿಸಲು ಮುಂದಾಗುತ್ತಾರೆ ಎಂದು ತಿಳಿಸಿದರು. ನ್ಯಾರಾಮಚಂದ್ರ ಡಿ.ಹುದ್ದಾರ್ ಮಾತನಾಡಿ, ನ್ಯಾಯಾಲಯಗಳಲ್ಲಿ ಹೆಚ್ಚು ಪ್ರಕರಣಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಇವುಗ ಇವುಗಳನ್ನು ವಿಲೇವಾರಿ ಮಾಡಲು ವಕೀಲರ ಸಹಕಾರ ಅಗತ್ಯ ಕೃತಕ ಬುದ್ದಿಮತ್ತೆ ಯುಗದಲ್ಲಿ ಈಗ ನಾವು ಇದ್ದೇವೆ. ಈ ವೇಳೆ ಪತ್ರಿಕೆಗಳನ್ನು ಜನರು ಓದುವುದಿಲ್ಲ. ಹೀಗಾಗಿ ಲೀಗಲ್ ಲೈಮ್ ಲೈಟ್ ಅನ್ನು ಡಿಜಿಟಲ್ ರೂಪದಲ್ಲಿ ತರಬೇಕು. ಈ ಪತ್ರಿಕೆ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿದೆ. ಗ್ರಾಮೀಣ ಪ್ರದೇಶಗಳಿಗೂ ಪತ್ರಿಕೆಗಳನ್ನು ತಲುಪಿಸುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.ಕರಾವಳಿ ಹಾಗೂ ಉತ್ತರ ಕರ್ನಾಟಕದಲ್ಲಿ ವಿರೋಧಿಗಳ ಮೇಲೆ ಯಾವುದಾದರೂ ಒಂದು ಸಿವಿಲ್ ಕೇಸು ಬೀಳಲಿ ಎಂದು ಶಾಪ ಹಾಕುತ್ತಾರೆ. ಏಕೆಂದರೆ ಸಿವಿಲ್ ಪ್ರಕರಣಗಳು ವಿಚಾರಣೆ ನಡೆದು ವಿಲೇವಾರಿಯಾಗುವುದು ವಿಳಂಬವಾಗುವುದರಿಂದ ಈ ರೀತಿ ಶಾಪ ಹಾಕುತ್ತಾರೆ. ಇದನ್ನು ನಾವು ತಪ್ಪಿಸಬೇಕಾಗಿದೆ. ವಕೀಲರು ಯಶಸ್ವಿಯಾಗಬೇಕಾದರೆ ಹೆಚ್ಚು ಓದಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾ. ಶಿವರಾಜ್ ಪಾಟೀಲ್, ನ್ಯಾಯಾಧೀಶರಾದ ಎ.ವಿ.ಚಂದ್ರಶೇಖರ್, ವಕೀಲ ವಿವೇಕ್ ಸುಬ್ಬಾರೆಡ್ಡಿ ,ನ್ಯಾ.ರಾಮಚಂದ್ರ ಡಿ ಹುದ್ದಾರ್ ಸೇರಿ ಮತ್ತಿತರರಿದ್ದರು.