ಬೆಂಗಳೂರು : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಜಲ ಸಂರಕ್ಷಣೆ ಕುರಿತ ಗಿನ್ನಿಸ್ ದಾಖಲೆ ಪ್ರಯತ್ನದ ಅಭಿಯಾನದ ಅಂಗವಾಗಿ, ಇಂದು ಜಲಮಂಡಳಿ ಅಧ್ಯಕ್ಷರಿಂದ ಐಟಿಪಿಎಲ್ ಹಾಗೂ ಐಟಿ ಕಂಪನಿಗಳಲ್ಲಿ ಪ್ರತಿಜ್ಞಾ ವಿಧಿ ಭೋಧನೆಯ ಅಭಿಯಾನ ಕೈಗೊಳ್ಳಲಾಯಿತು.
ಐಟಿಪಿಎಲ್ ಹಾಗೂ ವಿವಿಧ ಐಟಿ ಕಂಪನಿಗಳಲ್ಲಿ ಈ ನೀರಿನ ಸಂರಕ್ಷಣೆಯ ಪ್ರತಿಜ್ಞಾ ವಿಧಿಯನ್ನು ಭೋಧಿಸಿದ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ಅವರು ಮಾತನಾಡಿ, ಪ್ರತಿ ಹನಿಯೂ ಅಮೂಲ್ಯವಾಗಿದೆ. ನೀರು ಹಾಗೂ ಜಲಮೂಲಗಳ ಸಂರಕ್ಷಣೆಯ ನಿಟ್ಟಿನಲ್ಲಿ ಕೈಗೊಳ್ಳಲಾಗುವಂತಹ ಸಣ್ಣ ಸಣ್ಣ ಕ್ರಮಗಳು ಕೂಡಾ ಬಹಳಷ್ಟು ಫಲ ನೀಡುತ್ತವೆ. ಭವಿಷ್ಯದ ಬೆಂಗಳೂರಿಗಾಗಿ ನೀರು ಉಳಿತಾಯ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.
ಕಾವೇರಿ ಐದನೇ ಹಂತವನ್ನು ಲೋಕಾರ್ಪಣೆ ಮಾಡುವ ಮೂಲಕ ಬೆಂಗಳೂರು ನಗರಕ್ಕೆ ನೀರಿನ ಲಭ್ಯತೆ ಹೆಚ್ಚಾಗಿದೆ. ಆದರೆ ಅದನ್ನು ಸದ್ಬಳಕೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ನೀರಿನ ಬಳಕೆ ಮತ್ತು ಉಳಿತಾಯದ ಬಗ್ಗೆ ನಾವುಗಳು ಅಷ್ಟೇ ಅಲ್ಲದೇ ನಮ್ಮ ಸುತ್ತಮುತ್ತಲಿನ ಜನರು ಕಾಳಜಿ ವಹಿಸುವಂತೆ ಮಾಢುವುದು ಅಗತ್ಯವಾಗಿದೆ ಎಂದು ಕರೆ ನೀಡಿದರು.
ಇನ್ನು ಇದೇ ವೇಳೆ ಸಾವಿರಾರು ಐಟಿ ಉದ್ಯೋಗಿಗಳು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.