ಬೆಂಗಳೂರು: ನಾರಾಯಣ ಹೆಲ್ತ್ ಸಿಟಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಹೊಸ ಪೀಳಿಗೆಯ ಮೊಬೈಲ್ ಬೇರಿಂಗ್ ಸಂಪೂರ್ಣ ಹಿಮ್ಮಡಿ ಬದಲಿ (TAR- ಟೋಟಲ್ ಆಂಕಲ್ ರಿಪ್ಲೇಸ್ಮೆಂಟ್) ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ.ಹೀಗಾಗಿ ವೈದ್ಯಕೀಯ ಲೋಕಕ್ಕೆ ಹೊಸ ಕೊಡುಗೆಯಾಗಿದೆ ಎಂದು ಹೆಲ್ತ್ ಸಿಟಿಯ ಮೂಳೆ ಶಸ್ತ್ರಚಿಕಿತ್ಸಕ ಮತ್ತು ಪಾದ ಮತ್ತು ಹಿಮ್ಮಡಿ ತಜ್ಞ ಡಾ. ಶೇಖರ್ ಮುದ್ರಾಮಯ್ಯ ತಿಳಿಸಿದರು.
ಹಿಮ್ಮಡಿ ಸಂಧಿವಾತದಿಂದ ಬಳಲುತ್ತಿರುವ ರೋಗಿಗಳಿಗೆ ಹೊಸ ಭರವಸೆಯನ್ನು ನೀಡಿದೆ. ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ಮೂಳೆ ಶಸ್ತ್ರಚಿಕಿತ್ಸಕ ಮತ್ತು ಪಾದ ಮತ್ತು ಹಿಮ್ಮಡಿ ತಜ್ಞ ಡಾ. ಶೇಖರ್ ಮುದ್ರಾಮಯ್ಯ ನೇತೃತ್ವದಲ್ಲಿ ನಡೆದ ಈ ಶಸ್ತ್ರಚಿಕಿತ್ಸೆಯಿಂದ ಹಲವು ವರ್ಷಗಳಿಂದ ತೀವ್ರ ನೋವು ಮತ್ತು ಹೆಜ್ಜೆ ಹಾಕಲು ಪರದಾಡುತ್ತಿದ್ದ 64 ವರ್ಷದ ಮಹಿಳೆಯೊಬ್ಬರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಸಂಪೂರ್ಣವಾಗಿ ಗುಣಮುಖರಾಗಿ ದೈನಂದಿನ ಜೀವನ ನಡೆಸುತ್ತಿದ್ದಾರೆ.
ಅಪರೂಪದ ಶಸ್ತ್ರ ಚಿಕಿತ್ಸೆ ಯಶಸ್ವಿ
ಈ ನವೀನ ಚಿಕಿತ್ಸಾ ವಿಧಾನವು ಮೂಳೆಚಿಕಿತ್ಸಾ ಆರೈಕೆಯಲ್ಲಿ ಹೊಸ ಶಕೆ ಆಗಿದೆ, ಒಂದು ಕಾಲದಲ್ಲಿ ಭಾರತದಲ್ಲಿ ಅಪರೂಪವೆಂದು ಪರಿಗಣಿಸಲಾಗಿದ್ದ ಈ ಸುಧಾರಿತ ಚಿಕಿತ್ಸೆ ಈಗ ಇಲ್ಲಿ ಯಶಸ್ವಿಯಾಗಿದೆ ಮತ್ತು ರೋಗಿಗಳು ನೋವು ರಹಿತವಾಗಿ ಮತ್ತು ಸುಧಾರಿತವಾಗಿ ನಡೆಸಬಹುದೆಂದು ಈ ಶಸ್ತ್ರಚಿಕಿತ್ಸೆ ಸಾಬೀತುಪಡಿಸಿದೆ.
ಈ ಕುರಿತು ಮಾತನಾಡಿದ ಡಾ. ಶೇಖರ್ ಮುದ್ರಾಮಯ್ಯ, ‘ಮೊಣಕಾಲು ಅಥವಾ ಸೊಂಟದ ಸಂಧಿವಾತದಂತೆ, ಇಮ್ಮಡಿ ಸಂಧಿವಾತದ ಬಗ್ಗೆ ಜನರಿಗೆ ವ್ಯಾಪಕವಾಗಿ ತಿಳಿದಿಲ್ಲದಿರಬಹುದು. ಇಲ್ಲಿಯವರೆಗೆ, ಭಾರತದಲ್ಲಿ ಈ ಸಂಧಿವಾತದಿಂದ ಬಳಲುತ್ತಿರುವ ಹೆಚ್ಚಿನ ರೋಗಿಗಳು ಆಂಕಲ್ ಫ್ಯೂಷನ್ ಎಂಬ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿತ್ತು, ಇದು ನೋವನ್ನು ನಿವಾರಿಸುತ್ತದೆ ಆದರೆ ಕಾಲಿನ ಚಲನೆಯನ್ನುಕಡಿಮೆ ಮಾಡುತ್ತದೆ. ಈ ಹೊಸ ಪೀಳಿಗೆಯ ಮೊಬೈಲ್ ಬೇರಿಂಗ್ TAR ಶಸ್ತ್ರಚಿಕಿತ್ಸೆ ಮೂಲಕ ಬೆಂಗಳೂರಿನಲ್ಲಿಯೇ ರೋಗಿಯ ಚಲನೆಯನ್ನು ಸಂರಕ್ಷಿಸುವ ಮೂಲಕ ನೋವಿಲ್ಲದೆ, ನಡೆಯಲು ಸಾಧ್ಯ ಎಂಬುದನ್ನು ಸಾಬೀತುಪಡಿಸಿದ್ದೇವೆ. ಈ ಸುಧಾರಿತ ಇಂಪ್ಲಾಂಟ್ಗಳು ಲಭ್ಯವಾಗುವದರಿಂದ, ಇನ್ನೂ ಅನೇಕ ರೋಗಿಗಳು ಬದುಕು ಬದಲಾಯಿಸುವ ಈ ಶಸ್ತ್ರಚಿಕಿತ್ಸೆ ಪ್ರಯೋಜನ ಪಡೆಯಬಹುದು’ ಎಂದರು.
ಆದಾಗ್ಯೂ, ಭಾರತದಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸಲು ಸಾಕಷ್ಟು ಸವಾಲುಗಳಿವೆ. ಶಸ್ತ್ರಚಿಕಿತ್ಸೆಗೆ ಅಗತ್ಯವಾದ ವಿಶೇಷ ಇಂಪ್ಲಾಂಟ್ಗಳು ಸ್ಥಳೀಯವಾಗಿ ಲಭ್ಯವಿಲ್ಲ ಮತ್ತು ಭಾರತದ ಔಷಧ ನಿಯಂತ್ರಣ ಪ್ರಾಧಿಕಾರದಿಂದ ಅಗತ್ಯ ಅನುಮೋದನೆಗಳನ್ನು ಪಡೆದ ನಂತರ ಅಮೆರಿಕ ಮತ್ತು ನೆದರ್ಲ್ಯಾಂಡ್ಸ್ನಿಂದ ಪಡೆಯಬೇಕಾಯಿತು. ಈ ಅಡೆತಡೆಗಳ ಹೊರತಾಗಿಯೂ, ನಾರಾಯಣ ಹೆಲ್ತ್ ಸಿಟಿಯ ತಂಡವು ಈ ಮಹತ್ವದ ಕಾರ್ಯವಿಧಾನಕ್ಕೆ ಎಲ್ಲವೂ ಸಿದ್ಧವಾಗಿದೆ ಎಂದು ಖಚಿತಪಡಿಸಿಕೊಂಡಿತು.
ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಒಂದು ದಿನದೊಳಗೆ, ಸಹಾಯದೊಂದಿಗೆ ನಡೆಯಲು ಪ್ರಾರಂಭಿಸಿದರು. ಎರಡು ವಾರಗಳ ನಂತರ, ಅವರ ಶಸ್ತ್ರಚಿಕಿತ್ಸೆಯ ಗಾಯವು ಸಂಪೂರ್ಣವಾಗಿ ವಾಸಿಯಾಯಿತು. ಆರು ವಾರಗಳಲ್ಲಿ, ಅವರು ಸ್ವತಂತ್ರವಾಗಿ ನಡೆಯಲು ಪ್ರಾರಂಭಿಸಿದರು. ಶಸ್ತ್ರಚಿಕಿತ್ಸೆಯ ನಂತರ, ಅವರು ತಮ್ಮ ಸಾಮಾನ್ಯ ಸ್ಥಿತಿಗೆ ಮರಳಿದ್ದಾರೆ. ನೋವುರಹಿತ ಜೀವನ ನಡೆಸುತ್ತಿದ್ದು ಮತ್ತು ದೈನಂದಿನ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ.