ಬೆಂಗಳೂರು: ಸಂಗೀತ ಪ್ರೇಮಿಗಳನ್ನು ಮಂತ್ರಮುಗ್ಧಗೊಳಿಸುವ,ಭಾವಗೀತೆಗಳ ಪ್ರಪಂಚಕ್ಕೆ ಕರೆದೊಯ್ಯುವ ಭಾವ-ಗಾನ-ಯಾನದ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮುದ್ಯತಾ ಸಾಂಸ್ಕೃತಿಕ ಪ್ರತಿಷ್ಠಾನದ ಮುಖ್ಯಸ್ಥರಾದ ಪ್ರವೀಣ್ ಬಿ.ವಿ – ಪ್ರದೀಪ್ ಬಿ.ವಿ ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮುದ್ರತಾ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಏಪ್ರಿಲ್ 5, ಸಂಜೆ 5.00ಗಂಟೆಗೆ “ಪ್ರವೀಣ್ ಪ್ರದೀಪ್ ಕಾನ್ಸರ್ಟ್’ ಎಂಬ ಶೀರ್ಷಿಕೆಯಡಿಯಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಒಂದು ವಿನೂತನ ಸುಗಮ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಭಾವಗೀತೆಗಳನ್ನು ರೂಢಿಗಿಂತ ಭಿನ್ನ ನವ ನವೀನ ಪ್ರಸ್ತುತಿ ನೀಡುವ ಭರವಸೆಯ ಈ ಜೋಡಿಯೊಂದಿಗೆ, ಎಂ.ಡಿ ಪಲ್ಲವಿ ದನಿ ಬೆರಸಲಿದ್ದಾರೆ.
ಸಂಗೀತ ದಿಗ್ಗಜರ ಸಮಾಗಮ:
ಸುಗಮ ಸಂಗೀತ ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳ ಕಾಲ ಎಲ್ಲ ದಿಗ್ಗಜರೊಂದಿಗೆ ತಮ್ಮ ಕೀಬೋರ್ಡ್ ವಾದನ ಮತ್ತು ಸಂಗೀತ ನಿರ್ದೇಶನದಲ್ಲಿ ತೊಡಗಿಸಿಕೊಂಡಿರುವ ಕೃಷ್ಣ ಉಡುಪ ಮತ್ತು 13 ಕೈಗಳ ವಾದ್ಯ ಸಮೂಹ, ಕಾರ್ತಿಕೇಯನ್ ನೇತೃತ್ವದ 10 ವಯಲಿನ್ ಗಳ ಜಂಟಿ ಝೇಂಕಾರ, ಕೊಳಲು ರಮೇಶ್ ಕುಮಾರ್,ಈ ಕಂಠಗಳ ಜೊತೆ ತುರುಸಿನ ಸ್ಪರ್ಧೆಗಿಳಿಯಲಿವೆ. ಕಾವ್ಯದ ಲಯೋಪಾದಿಯಲ್ಲಿ ಕೇಳುಗರನ್ನು ಭಾವಲೋಕದಲ್ಲಿ ಮುಳುಗಿಸಲಿದ್ದಾರೆ.ಸಂಗೀತ ದಿಗ್ಗಜರು ಒಂದೇ ವೇದಿಕೆಯಲ್ಲಿ ನೋಡುವ ಅವಕಾಶ ಪ್ರೇಕ್ಷಕರಿಗೆ ಸಿಗಲಿದೆ ಎಂದರು.
ವಿಶಿಷ್ಟ ಸಂಗೀತ ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದ ಹಲವು ಕಲಾವಿದರು ಮತ್ತು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇವೆಲ್ಲಾ ಹದವಾಗಿ ಮೇಲೈಸಿ ಕಲಾ ರಸಿಕರನ್ನು ಸಂಗೀತದತ್ತ ಸೆಳೆಯುವ ಕೆಲಸವನ್ನು ಮಾಡಲಾಗುತ್ತದೆ. ಜೊತೆಗೆ ಸಂಗೀತದ ಮದುರತೆ,ಮಾಧುರ್ಯ ಅನುಭವಿಸುವ ಅವಕಾಶ ಸಿಗಲಿದೆ ಎಂದರು.
ಕಾರ್ಯಕ್ರಮದ ಟಿಕೆಟ್ಟಳು ಬುಕ್ ಮೈ ಶೋ ಆಪ್ ನಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 9886054000, 9886333457 ದೂರವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.